ಸೋಮವಾರ, ಆಗಸ್ಟ್ 8, 2022
23 °C

ತುಮಕೂರು: ಇಂಧನ ಬೆಲೆ ಏರಿಕೆ: ಕಾಂಗ್ರೆಸ್ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಶುಕ್ರವಾರ ಪೆಟ್ರೋಲ್ ಬಂಕ್‌ಗಳ ಎದುರು ಪ್ರತಿಭಟನೆ ನಡೆಸಿದರು.

ದೇಶದ ಜನರಿಗೆ ಅಚ್ಚೇ ದಿನದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ರೂಪಿಸಿದ್ದು, ಜನಸಾಮಾನ್ಯರು ಇಂಧನ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

2014ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ, ಇಂಧನದ ಮೇಲೆ ಅತಿ ಕಡಿಮೆ ತೆರಿಗೆ ವಿಧಿಸುವ ಮೂಲ ಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಪೆಟ್ರೋಲ್, ಡಿಸೆಲ್ ಸಿಗುವಂತೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮಾಡಿದ್ದರು. ಆದರೆ ಇಂದಿನ
ಸರ್ಕಾರ ಅತಿಯಾದ ಸೆಸ್ ವಿಧಿಸುವ ಮೂಲಕ ಲೀಟರ್ ಪೆಟ್ರೋಲ್ ₹100 ದಾಟುವಂತೆ ಮಾಡಿದೆ. ಇದರ ಫಲವಾಗಿ, ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ರಫೀಕ್ ಅಹಮದ್, ‘ದೇಶದಲ್ಲಿ ಪೆಟ್ರೋಲ್ ಮೂಲ ಬೆಲೆ ಲೀಟರ್‌ಗೆ ₹33 ಇದೆ. ಇದರ ಜತೆಗೆ ಶುದ್ಧೀಕರಣ ಶುಲ್ಕ ₹3.60, ಅಬಕಾರಿ ಸುಂಕ ₹32.90, ಶೇ 30ರಷ್ಟು ವ್ಯಾಟ್ ಸೇರಿ ಲೀಟರ್ ಬೆಲೆ ₹100 ತಲುಪಿದೆ. ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಬೇಕು. ಜನಸಾಮಾನ್ಯರು ಬದುಕುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಮುಖಂಡ ಆರ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೊ ರಾಜು, ಮೆಹಬೂಬ್ ಪಾಷ, ಸಂಜೀವ್‍ಕುಮಾರ್, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಬಿ.ಜಿ.ನಿಂಗರಾಜು, ಪುಟ್ಟರಾಜು, ಪಾಲಿಕೆ ಸದಸ್ಯ ನಯಾಜ್ ಅಹಮದ್, ಮುಖಂಡರಾದ ಎಚ್.ಸಿ.ಹನುಮಂತಯ್ಯ, ರೇವಣ್ಣ ಸಿದ್ದಯ್ಯ, ಸುಜಾತ, ನಾಗಮಣಿ, ಮಂಗಳ, ಮಂಜುನಾಥ್, ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಅಬ್ದುಲ್ ರಹೀಂ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು