ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಇಂಧನ ಬೆಲೆ ಏರಿಕೆ; ಸಂಕಷ್ಟದಲ್ಲಿ ಬದುಕು

ಬಾಡಿಗೆ ಇಲ್ಲದೆ ಪರದಾಡುತ್ತಿರುವ ಆಟೊ, ಟ್ಯಾಕ್ಸಿ ಮಾಲೀಕರಿಗೆ ಗಾಯದ ಮೇಲೆ ಬರೆ
Last Updated 28 ಜೂನ್ 2020, 16:57 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಭೀತಿ, ಲಾಕ್‌ಡೌನ್‌ನಿಂದ ಬಾಡಿಗೆ ಇಲ್ಲದೆ ತೊಂದರೆಗೀಡಾಗಿರುವ ಆಟೊ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗೆ ಇದೀಗ ತೈಲ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ತುಮಕೂರು ನಗರ ಮತ್ತು ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಗೊಂಡರು ಜನರು ಆಟೊ, ಟ್ಯಾಕ್ಷಿಗಳಲ್ಲಿ ಓಡಾಡುವ ಪ್ರಮಾಣ ಗಣನೀಯ ಕಡಿಮೆ ಇದೆ. ಲಾಕ್‌ಡೌನ್‌ಗೂ ಮುನ್ನ ಪ್ರತಿದಿನ ₹500 ರಿಂದ 1,500 ಸಾವಿರದವರೆಗೆ ಬಾಡಿಗೆ ಮಾಡುತ್ತಿದ್ದವರು ಇದೀಗ ₹200 ರಿಂದ 500 ಬಾಡಿಗೆ ಮಾಡುವುದೇ ಹರಸಾಹಸವಾಗಿದೆ. ಈ ನಡುವೆ ಪೆಟ್ರೋಲ್, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ತುಮಕೂರು ನಗರದಲ್ಲಿಯೇ ಚಾಲನಾ ಪರವಾನಗಿ ಹೊಂದಿರುವ 1,500 ಹಾಗೂ ಸಾರಿಗೆ ಪರವಾನಗಿ ಹೊಂದಿರುವ 4,500ಕ್ಕೂ ಆಟೊಗಳಿವೆ. ಜಿಲ್ಲೆಯಲ್ಲಿ ಸುಮಾರು 13 ರಿಂದ 14 ಸಾವಿರ ಆಟೊಗಳಿದ್ದು, ಸಾವಿರಾರು ಮಂದಿ ಬಾಡಿಗೆಯನ್ನೇ ಆಶ್ರಯಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಅಲ್ಪ ಪ್ರಮಾಣದ ಬಾಡಿಗೆ ಹಣದಿಂದ ಜೀವನ ನಡೆಸಲು ಪರದಾಡುವಂತಾಗಿದೆ.

ತುಮಕೂರಿನಲ್ಲಿ ಮಾರ್ಚ್‌ನಲ್ಲಿ ಪೆಟ್ರೋಲ್‌ ಕನಿಷ್ಠ ₹72.53 ಹಾಗೂ ಗರಿಷ್ಠ ₹74.73 ತಲುಪಿತ್ತು. ಈ ದರವೇ ವಾಹನ ಚಾಲಕರು ಮತ್ತು ಮಾಲೀಕರಿಗೆ ನುಂಗಲಾರದ ತುತ್ತಾಗುತ್ತಿತ್ತು. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಪೆಟ್ರೋಲ್ ಕನಿಷ್ಠ ₹73.75 ಹಾಗೂ ಗರಿಷ್ಠ ₹74.73 ಮಾರಾಟವಾಗಿತ್ತು. ಆದರೆ, ಜೂನ್‌ 1ರಂದು ₹74.73 ಇದ್ದ ಪೆಟ್ರೋಲ್‌ ಬೆಲೆ ಜೂನ್‌ 28ರ ವೇಳೆಗೆ ₹83.73ಕ್ಕೆ ಏರಿಕೆ ಆಯಿತು. ಇನ್ನೂ ಡಿಸೇಲ್ ಜೂನ್ 1 ರಂದು ₹67.04 ಇದ್ದ ಬೆಲೆ ಜೂನ್ 28 ರಂದು ₹77.12ಕ್ಕೆ ಏರಿಕೆ ಆಗಿದೆ.

ಇನ್ನೂ ಅನೇಕ ಆಟೊಗಳು ಪೆಟ್ರೋಲ್‌ ಬೆಲೆ ಏರಿಕೆಯಿಂದಾಗಿ ಗ್ಯಾಸ್‌ನ ಮೊರೆ ಹೋಗಿದ್ದರೂ ಆಟೊ ಗ್ಯಾಸ್‌ ಬೆಲೆಯೂ ದಿಢೀರ್‌ ಏರಿಕೆ ಕಂಡಿದೆ. ಲಾಕ್‌ಡೌನ್‌ಗೂ ಮುನ್ನ ಪ್ರತಿ ಲೀಟರ್‌ ಗ್ಯಾಸ್‌ಗೆ ₹32.65 ಇದ್ದ ಬೆಲೆ ಇದೀಗ ₹35.94ಕ್ಕೆ ಏರಿಕೆಯಾಗಿದೆ.

ಪರ್ಯಾಯ ಕೆಲಸವಿಲ್ಲ: ಅನೇಕರು ಆಟೊಗಳಲ್ಲಿ ಬಾಡಿಗೆ ಆಗದ ಕಾರಣ ಬೇರೆ ಉದ್ಯೋಗ ಮಾಡಿ ಜೀವನ ನಡೆಸಬೇಕು ಎಂದುಕೊಂಡಿದ್ದರೆ, ಇದೀಗ ಎಲ್ಲಿಯೂ ಪರ್ಯಾಯ ಕೆಲಸಗಳು ಸಿಗುತ್ತಿಲ್ಲ. ಈಗಾದರೆ ಜೀವನ ನಡೆಸುವುದು ಹೇಗೆ? ಹೆಂಡತಿ, ಮಕ್ಕಳನ್ನು ಸಾಕುವುದು ಹೇಗೆ ಎಂದು ಆಟೊ ಚಾಲಕ ಫಯಾಜ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT