ತುಮಕೂರು: ಜಿಲ್ಲೆಯ ರೈತರು ಅಡಿಕೆ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಡಿಕೆ ಇಲ್ಲಿನ ಭೂಪ್ರದೇಶದಲ್ಲಿ ಬೆಳೆಯುವ ಬೆಳೆಯಲ್ಲ. ಇದು ಮುಂದೊಂದು ದಿನ ಅಪಾಯ ತಂದೊಡ್ಡಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಎಚ್ಚರಿಸಿದರು.
ನಗರದಲ್ಲಿ ಗುರುವಾರ ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರೇಷ್ಮೆ ತಾಕುಗಳಿಗೆ ಹನಿ ನೀರಾವರಿ ಅಳವಡಿಸುವುದರ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಯಲು ಸೀಮೆಯಲ್ಲಿ ಬೆಳೆಯಬಹುದಾದ ಆಹಾರ ಬೆಳೆಗಳ ಜತೆಗೆ ತೋಟಗಾರಿಕೆಯಲ್ಲಿ ಡ್ರಾಗನ್ ಫ್ರೂಟ್, ಕಿರುಧಾನ್ಯಗಳನ್ನು ಬೆಳೆದು ಲಾಭ ಗಳಿಸಬಹುದು. ಬಹುಬೆಳೆ ಪದ್ಧತಿಯಲ್ಲಿ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯಲಿದೆ. ರೈತರು ವ್ಯವಸಾಯದ ಜತೆಗೆ ಹೈನುಗಾರಿಕೆ, ರೇಷ್ಮೆ ಕೃಷಿ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಸಲಹೆ ಮಾಡಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ, ‘ಜಿಲ್ಲೆಯ 6,300 ಹೆಕ್ಟೇರ್ ಪ್ರದೇಶದಲ್ಲಿ 11 ಸಾವಿರ ರೈತರು ರೇಷ್ಮೆ ಕೃಷಿ ನಡೆಸುತ್ತಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡವರ ಸಂಖ್ಯೆ ಕೇವಲ 2,300 ಜನ ಮಾತ್ರ. ಹೆಚ್ಚಿನ ರೈತರು ಆಸಕ್ತಿ ತೋರಬೇಕು’ ಎಂದು ತಿಳಿಸಿದರು.
ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರಶಾಂತ್, ಕೊಡತಿ ಆರ್‌ಎಸ್ಆರ್‌ಎಸ್‍ನ ಕುಲಕರ್ಣಿ, ರೇಷ್ಮೆ ಸಹಾಯಕ ನಿರ್ದೇಶಕರಾದ ಚೇತನ್, ಎ.ಸಿ.ನಾಗೇಂದ್ರ, ಬೊಮ್ಮಯ್ಯ, ಆರ್.ರಂಗನಾಥ್, ನಾಗರಾಜು, ಮುರಳೀಧರ್, ರಾಜ್‍ಗೋಪಾಲ್ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.