ಶನಿವಾರ, ಅಕ್ಟೋಬರ್ 19, 2019
27 °C
ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ ನೂರಾರು ಕಾರ್ಮಿಕರು

ಕಸದ ದಿಬ್ಬ ಸೃಷ್ಟಿಸಿದ ಹಬ್ಬ

Published:
Updated:
Prajavani

ತುಮಕೂರು: ವಿಜಯದಶಮಿ ಹಬ್ಬಾಚರಣೆಯ ಬಳಿಕ ನಗರದ ವಾಣಿಜ್ಯ ಪ್ರದೇಶ, ಮಾರುಕಟ್ಟೆ, ಪ್ರಮುಖ ರಸ್ತೆಗಳ ಬದಿಗಳಲ್ಲಿ ಕಸದ ರಾಶಿಗಳು ಸೃಷ್ಟಿಯಾಗಿವೆ.

ವ್ಯಾಪಾರಸ್ತರು ಬಿಕರಿಗಾಗಿ ತಂದಿದ್ದ ಬೂದುಗುಂಬಳ, ಬಾಳೆಕಂದು, ಹೂ, ಮಾವಿನ ಸೊಪ್ಪನ್ನು ರಸ್ತೆ ಬದಿಯಲ್ಲೆ ಬಿಟ್ಟು ಹೋಗಿದ್ದಾರೆ. ಈ ಪೂಜಾಸಾಮಗ್ರಿಗಳು ಬುಧವಾರ ಬಿದ್ದಲ್ಲೆ ಕೊಳೆಯುತ್ತಿದ್ದವು.

ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ನಿತ್ಯ ಅಂದಾಜು 120 ಟನ್‌ ಕಸ ಸೃಷ್ಟಿಯಾಗುತ್ತಿತ್ತು. ಹಬ್ಬದ ಪ್ರಯುಕ್ತ ಈ ಪ್ರಮಾಣ 135 ಟನ್‌ಗೆ ಹೆಚ್ಚಳವಾಗಿದೆ.

ಈ ಕಸವನ್ನು ವಿಲೇವಾರಿ ಮಾಡಲು ಪೌರಕಾರ್ಮಿಕರು ಒಂದೂವರೆ ತಾಸು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 6ರಿಂದ ಕಾರ್ಯಾರಂಭಿಸಿ ಮಧ್ಯಾಹ್ನ 2ರ ವರೆಗೆ ಕಾರ್ಮಿಕರು ಶ್ರಮಿಸುತ್ತಿದ್ದರು. ಈಗ ಅವರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 3.30ರ ವರೆಗೂ ದುಡಿಯುತ್ತಿದ್ದಾರೆ.

ಕಸ ವಿಲೇವಾರಿ ಮಾಡುವ ಪ್ರತಿ ಆಟೊ ಟಿಪ್ಪರ್‌ನಲ್ಲಿ ಚಾಲಕ ಮತ್ತು ಸಹಾಯಕ, ಪ್ರತಿ ಟ್ರಾಕ್ಟರ್‌ನಲ್ಲಿ ಮೂವರು ಸಹಾಯಕರು ನಗರವನ್ನು ಕಸದಿಂದ ಮುಕ್ತಿ ಮಾಡಲು ಬೆವರು ಹರಿಸುತ್ತಿದ್ದಾರೆ.

ಬಹುತೇಕ ಹಸಿ ಕಸವೇ ಸೃಷ್ಟಿಯಾಗಿರುವುದರಿಂದ ಕಸ ವಿಲೇವಾರಿ ಘಟಕದಲ್ಲಿ ಸಾವಯವ ಗೊಬ್ಬರದ ಪ್ರಮಾಣ ಹೆಚ್ಚಳ ಆಗಲಿದೆ. ಒಣ ಕಸಕ್ಕಿಂತ ಹಸಿ ಕಸ ವಿಲೇವಾರಿ ಮಾಡುವುದು ಸುಲಭ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬುಧವಾರ ಕಸದ ರಾಶಿ ಕಂಡ ಸ್ಥಳಗಳು: ಅಂತರಸನಹಳ್ಳಿ ಮಾರುಕಟ್ಟೆ ಮತ್ತು ಸುತ್ತಲಿನ ಪ್ರದೇಶ, ಮಂಡಿಪೇಟೆ, ಜೆ.ಸಿ.ರಸ್ತೆ, ಎಂ.ಜಿ.ರಸ್ತೆ, ಬಿ.ಎಚ್‌.ರಸ್ತೆ, ಗುಬ್ಬಿ ಗೇಟ್‌, ಕುಣಿಗಲ್‌ ರಸ್ತೆ, ಶಿರಾ ಗೇಟ್‌.

Post Comments (+)