ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾನುಪಾತ ತಾರತಮ್ಯ: ಆತಂಕ

Last Updated 10 ಮಾರ್ಚ್ 2021, 2:27 IST
ಅಕ್ಷರ ಗಾತ್ರ

ತುಮಕೂರು: ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಸಮಾಜದಲ್ಲಿ ಅಸಮತೋಲನ ಸೃಷ್ಟಿಯಾಗಲಿದೆ ಎಂದು ಮಹಿಳಾ ಪರ ಚಿಂತಕಿ ಡಾ.ಲೀಲಾ ಸಂಪಿಗೆ ಎಚ್ಚರಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ವಿ.ವಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಸಮರ್ಥ್ ಫೌಂಡೇಷನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಲಿಂಗ ತಾರತಮ್ಯ ಹೆಚ್ಚುತ್ತಿದ್ದು, ಗರ್ಭದಲ್ಲೇ ಹೆಣ್ಣು ಭ್ರೂಣಗಳಿಗೆ ಗೋರಿ ಕಟ್ಟಲಾಗುತ್ತಿದೆ. 2019-20ರ ಅಂದಾಜಿನ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ 920 ಹೆಣ್ಣು ಮಕ್ಕಳಿದ್ದಾರೆ. ಇನ್ನೂ 80 ಮಹಿಳೆಯರ ಕೊರತೆ ಇದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮಹಿಳೆಯರ ಜನಸಂಖ್ಯೆ ತೀವ್ರವಾಗಿ ತಗ್ಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಲ್ಯ ವಿವಾಹದಂತಹ ಅನಿಷ್ಟ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ. ಮಹಿಳೆ, ಮಕ್ಕಳ ಕಳ್ಳ ಸಾಗಣೆ, ಸ್ತ್ರೀಯರ ಮೇಲಿನ ದೌರ್ಜನ್ಯಗಳು ನಾನಾ ರೂಪ ಪಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ, ‘ಮಹಿಳೆಯರಿಗೆ ಸಂಕಷ್ಟಗಳು ಎದುರಾದಾಗ ಅವುಗಳನ್ನು ಎದುರಿಸುವ ಧೈರ್ಯ ಬರಬೇಕು. ವಿಶ್ವ ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮಗಳು ಸ್ಪೂರ್ತಿದಾಯಕವಾಗಬೇಕು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ಮಹಿಳೆಯರು ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದಾಗ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದರು.

ಪ್ರಶಸ್ತಿ ಪ್ರದಾನ: ಗಂಗಮಾಳಮ್ಮ ಗಂಗಾಧರಯ್ಯ ನೆನಪಿನ ‘ಮಹಿಳಾ ಚೇತನ’ ಪ್ರಶಸ್ತಿಯನ್ನು ಡಾ.ಲೀಲಾ ಸಂಪಿಗೆ, ಟಿ.ಎ.ಗಂಗಮ್ಮ ಅವರಿಗೆ; ಚನ್ನಮ್ಮ ಚನ್ನರಾಯಪ್ಪ ಸ್ಮಾರಕ ‘ಮಹಿಳಾ ಸಾಧಕಿ’ ಪ್ರಶಸ್ತಿಯನ್ನು ಶೈಲಜಾ ಎಚ್.ವಿಠಲ್, ಲಕ್ಷ್ಮಮ್ಮ ಲೇಪಾಕ್ಷಯ್ಯ ಅವರಿಗೆ; ಸರೋಜಾ ಟಿ.ಆರ್.ರೇವಣ್ಣ ‘ಶ್ರಮಜ್ಯೋತಿ’ ಪ್ರಶಸ್ತಿಯನ್ನು ಆರ್‌.ಅರುಣ, ಡಿ.ಆರ್.ಮಮತಾ ಅವರಿಗೆ ಪ್ರದಾನ ಮಾಡಲಾಯಿತು. ವಿವಿಧ ಪ್ರಶಸ್ತಿಗೆ ಭಾಜನರಾಗಿರುವ ವರದಕ್ಷಿಣೆ ವಿರೋಧಿ ವೇದಿಕೆ ಸದಸ್ಯರಾದ ಟಿ.ಆರ್.ಅನಸೂಯ, ಲಲಿತಾಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು.

ವರದಕ್ಷಿಣೆ ವಿರೋಧಿ ವೇದಿಕೆ ಪದಾಧಿಕಾರಿಗಳಾದ ಎಂ.ಬಿ.ಜೀವರತ್ನ, ಸಾ.ಚಿ.ರಾಜಕುಮಾರ, ಎಂ.ಸಿ.ಲಲಿತಾ, ಸಿ.ಎಲ್.ಸುನಂದಮ್ಮ, ಗೀತಾ ನಾಗೇಶ್, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಕಾರ್ಯದರ್ಶಿ ಡಾ.ಅರುಂಧತಿ, ಲೇಖಕಿ ಬಿ.ಸಿ.ಶೈಲಾನಾಗರಾಜ್, ಡಾ.ಕೆ.ಎಸ್.ಗಿರಿಜಾ, ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್.ಸುಕನ್ಯಾ, ಅನಸೂಯ ರತ್ನಯ್ಯಶೆಟ್ಟಿ, ಪಾರ್ವತಮ್ಮ, ಗಂಗಲಕ್ಷ್ಮಿ. ಅಂಬುಜಾಕ್ಷಿ ಸಮರ್ಥ್ ಫೌಂಡೇಷನ್ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT