ಲೋಕಸಭಾ ಚುನಾವಣೆಗೆ ಸಿದ್ಧರಾಗಿ

7
ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ ಕಾರ್ಯಕರ್ತರು, ಮುಖಂಡರಿಗೆ ಕರೆ

ಲೋಕಸಭಾ ಚುನಾವಣೆಗೆ ಸಿದ್ಧರಾಗಿ

Published:
Updated:
Deccan Herald

ತುಮಕೂರು: ಲೋಕಸಭಾ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಬೇಕು. ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರೇ ಇದ್ದು, ಮೂವರನ್ನೂ ಗೆಲ್ಲಿಸಲೇಬೇಕು ಇಲ್ಲದೇ ಇದ್ದರೆ ಅಖಿಲ ಭಾರತ ಕಾಂಗ್ರೆಸ್ ಮಟ್ಟದಲ್ಲಿ ಏನೆನೋ ಯೋಚನೆ ಮಾಡಿ ಬಿಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ತುಮಕೂರು ಲೋಕಸಭಾ ಕ್ಷೇತ್ರದ ಎಸ್.ಪಿ.ಮುದ್ದಹನುಮೇಗೌಡ, ಚಿತ್ರದುರ್ಗ ಸಂಸದ ಚಂದ್ರಪ್ಪ ಅವರನ್ನು ಗೆಲ್ಲಿಸಲೇಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದರು.

ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ, ಉತ್ತಮ ಯೋಜನೆಗಳನ್ನು ನೀಡಿತ್ತು. ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ ಹಾಗೂ ಡಾ.ರಫೀಕ್ ಅಹಮ್ಮದ್ ಉತ್ತಮ ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಏನೇ ಆದರೂ ಜನರ ತೀರ್ಮಾನ ಗೌರವಿಸಬೇಕಾಗುತ್ತದೆ. ಈ ತರಹದ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಬರಲಾರದಂತೆ ಎಚ್ಚರಿಕೆವಹಿಸಬೇಕು ಎಂದು ಹೇಳಿದರು.

1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಯಿತು. ಸಾವಿರಾರು ಜನರು ಚಳವಳಿಯಲ್ಲಿ ಭಾಗಿಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟಿಷರಿಗೆ ಮನಸ್ಸು ಇರಲಿಲ್ಲ. ಕ್ವಿಟ್ ಇಂಡಿಯಾ ಚಳವಳಿ ಬ್ರಿಟಿಷರ ಆಡಳಿತ ಬಿಗಿ ಸಡಿಲಗೊಳಿಸಿ ಸ್ವಾತಂತ್ರ್ಯ ಲಭಿಸಲು ಕಾರಣವಾಯಿತು. ಅಂದಿನ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿಶೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗಿದೆ ಎಂದು ನುಡಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,‘ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅನೇಕ ಮಹಾನುಭಾವರು ದೇಶಕ್ಕೋಸ್ಕರ, ಸ್ವಾತಂತ್ರ್ಯಕೋಸ್ಕರ ಭಾಗವಹಿಸಿದ್ದರು, ಅವರ ಹೋರಾಟದ ಕೆಚ್ಚು, ದೇಶಭಕ್ತಿ, ಬಗ್ಗೆ ಇಂದಿನ ಯುವಕರಿಗೆ, ಮುಂದಿನ ಪೀಳಿಗೆಗೆ ತಿಳಿಸಿಕೊಡುವ ದಿಶೆಯಲ್ಲಿ ಈ ರೀತಿಯ ಕಾರ್ಯಕ್ರಮ ಮಹತ್ವದ ಪಾತ್ರವಹಿಸುತ್ತವೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,‘ 1942ರಲ್ಲಿ ಗಾಂಧೀಜಿ ಕರೆಯ ಮೇರೆಗೆ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ದೇಶದ ಜನ ಏಕತೆಯಿಂದ ಭಾಗವಹಿಸಿದ್ದರು. ಈಗ ದೇಶಕ್ಕೆ ಗಂಡಾಂತರ ಎದುರಾಗಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಕೋಮುದ್ವೇಷ ಸೃಷ್ಟಿಸುತ್ತಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಅಧಿಕಾರ ಬಿಟ್ಟು ನಡೆಯಿರಿ ಎಂದು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ,ಶಾಸಕ ಡಾ.ರಂಗನಾಥ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕಾಂಗ್ರೆಸ್ ಮುಖಂಡ ಷಫಿ ಅಹಮ್ಮದ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಜೆ.ರಾಜಣ್ಣ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಮರಿಚಿನ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್, ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ತು.ಬು.ಮಲ್ಲೇಶ್, ಜಿಲ್ಲಾ ವಕ್ತಾರ ರಾಜೇಶ್ ದೊಡ್ಮನೆ, ರಾಜು, ಮೆಹಬೂಬ್ ಪಾಷ, ಭರತ್ ಗೌಡ್ರು, ಅಫ್ತಾಬ್ ಅಹಮ್ಮದ್, ಅನಿಲ್‌ಕುಮಾರ್ ಜೆ, ಮೋಹನ್‌ ಕುಮಾರ್, ಜಿಲಾನಿ, ಶಿಖಂದರ್ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !