ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಗದ್ದುಗೆಗೆ ‘ಆಟ’ ಶುರು

ಮತ ಸೆಳೆಯಲು ಈಗಾಗಲೇ ನಾನಾ ಕಸರತ್ತು ಆರಂಭಿಸಿರುವ ಆಕಾಂಕ್ಷಿಗಳು
Last Updated 18 ಸೆಪ್ಟೆಂಬರ್ 2020, 6:52 IST
ಅಕ್ಷರ ಗಾತ್ರ

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ. ಆದರೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿರುವ ‘ನಾಯಕರು’ ಮತದಾರರನ್ನು ಸೆಳೆಯಲು ಈಗಿನಿಂದಲೇ ಕಸರತ್ತು ಆರಂಭಿಸಿದ್ದಾರೆ. ಪಂಚಾಯಿತಿ ಮಾಜಿ ಸದಸ್ಯರು ಮತ್ತೊಮ್ಮೆ ಗೆಲವು ಸಾಧಿಸಲು ಲೆಕ್ಕಾಚಾರದಲ್ಲಿ ಇದ್ದಾರೆ. ಹೊಸ ಸ್ಪರ್ಧಾಕಾಂಕ್ಷಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ.

ಕೊರೊನಾ ಮತ್ತು ಲಾಕ್‌ಡೌನ್ ಪೂರ್ವದಿಂದಲೇ ಪಂಚಾಯಿತಿ ಚುನಾವಣೆಯ ಸದ್ದು ಸಣ್ಣದಾಗಿ ಕಾವೇರುತ್ತಿತ್ತು. ಸ್ಪರ್ಧೆಯ ಆಸಕ್ತರು ಆಗಲೇ ಮತದಾರರ ಮನ ಗೆಲ್ಲುವ ಮಾರ್ಗಗಳನ್ನು ಹುಡುಕುತ್ತಿದ್ದರು. ಕೆಲವರು ಕಣಕ್ಕೆ ಇಳಿದಾಗಿದೆ ಎನ್ನುವಂತೆಯೇ ಮನೆಗಳಿಗೆ ಎಡತಾಕುತ್ತಿದ್ದರು. ಆದರೆ ಲಾಕ್‌ಡೌನ್ ಮತ್ತು ಕೊರೊನಾ ಆಕಾಂಕ್ಷಿಗಳ ತುಡಿತವನ್ನು ತಣಿಸಿದೆ.

ಗ್ರಾಮ ಪಂಚಾಯಿತಿ ಸ್ಥಾನಗಳ ಮೀಸಲಾತಿ ಪ್ರಕಟವಾಗುವ ಮೂಲಕ ಗ್ರಾಮೀಣ ಚುನಾವಣಾ ಕಣದಲ್ಲಿ ಹುರುಪು ಹೆಚ್ಚಿಸಿದೆ. ಈ ಮೀಸಲಾತಿ ಪ್ರಕಟಣೆ ಅಭ್ಯರ್ಥಿಗಳು ಮತಗಳ ಲೆಕ್ಕಾಚಾರದಲ್ಲಿ ತೊಡಗಲು ಪ್ರಮುಖ ಕಾರಣವಾಗಿದೆ. ಯಾವ ವಾರ್ಡ್‌ಗೆ ತಮ್ಮ ಮೀಸಲಾತಿ ಪಟ್ಟಿ ಬರುತ್ತದೆ ‌ಎನ್ನುವ ನೋಟ ಆಕಾಂಕ್ಷಿಗಳಲ್ಲಿ
ಇತ್ತು. ಮೀಸಲಾತಿ ಪ್ರಕಟ ವಾಗಿರುವುದರಿಂದ ತಾವು ಸ್ಪರ್ಧಿಸಬೇಕಾದ ಕಡೆಗಳಲ್ಲಿ ತಯಾರಿ ಸಹ ನಡೆಸಿದ್ದಾರೆ.

ನರೇಗಾ ಯೋಜನೆಯ ಸೌಲಭ್ಯಗಳನ್ನು ಕಲ್ಪಿಸುವುದು, ಪ್ರವಾಸಕ್ಕೆ ಕರೆದೊಯ್ಯುವುದು, ಹಬ್ಬಗಳು, ಸಮಾರಂಭಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವುದು, ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ದಾನ ನೀಡುವುದು, ಪಿಂಚಣಿ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು, ರೈತರ ಜಮೀನುಗಳ ವಿಚಾರದಲ್ಲಿ ದಾಖಲೆಗಳನ್ನು ಮಾಡಿಸಿಕೊಡುವುದು... ಹೀಗೆ ನಾನಾ ರೀತಿಯಲ್ಲಿ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ದಿನಾಂಕ ಘೋಷಣೆಯಾದ ತರುವಾಯ ಈ ‘ದಾನ’ ನೀಡುವ ಪ್ರಮಾಣವೂ ಹೆಚ್ಚಳವಾಗಲಿದೆ ಎಂಬುದು ಅನುಭವಸ್ಥರ ವಿವರಣೆ.

ನಗರಗಳಿಗೆ ಹೊಂದಿಕೊಂಡಿರುವ ಮತ್ತು ಉತ್ತಮ ಆದಾಯ ಮತ್ತು ಸಂಪನ್ಮೂಲ ಹೊಂದಿರುವ ಪಂಚಾಯಿತಿಗಳ ಸದಸ್ಯರಾಗಲು ಪೈಪೋಟಿ ಹೆಚ್ಚಿದೆ. ಜಿಲ್ಲಾ ಕೇಂದ್ರ ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಕೆಸರುಮಡು, ಹೆಗ್ಗೆರೆ, ಹಿರೇಹಳ್ಳಿ ಪಂಚಾಯಿತಿಗೆ ಸದಸ್ಯರಾಗುವ ಆಸೆಯಿಂದ ಕೆಲವರು ಈಗಾಗಲೇ ₹ 10 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ವೇದಿಕೆ ಅಣಿಗೊಳಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

ಅದರಲ್ಲಿಯೂ ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡ್‌ಗಳಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾವು ಪಡೆದುಕೊಳ್ಳಲಿದೆ.

***

ಮತಖಾತ್ರಿಗೆ ಉದ್ಯೋಗ ಖಾತ್ರಿ

ಮತಬೇಟೆಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನೂ ಈ ಹಿಂದಿನ ಗ್ರಾಮ ಪಂಚಾಯಿತಿ ಸದಸ್ಯರು ಪ್ರಮುಖವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಯೋಜನೆಯಡಿ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ತೆಂಗಿನ ಸಸಿಗಳನ್ನು ಕೊಡಿಸುವುದು– ಹೀಗೆ ಹಲವು ರೀತಿಯಲ್ಲಿ ರೈತರಿಗೆ ಅನುಕೂಲ ಆಗುವ ಕಾರ್ಯಕ್ರಮಗಳು
ಇವೆ. ಇವುಗಳ ಸೌಲಭ್ಯವನ್ನು ಕೊಡಿಸುವ ಮೂಲಕ ಆ ಮತಗಳನ್ನು ತಮಗೆ ಖಾತ್ರಿ ಎನ್ನುವ ದೂರದೃಷ್ಟಿ ಇದೆ.

***

ತಾಲೀಮು ಆರಂಭ

‘ನಮ್ಮ ಪಂಚಾಯಿತಿಯಲ್ಲಿ ಹೆಚ್ಚಿನ ಆದಾಯವೂ ಇಲ್ಲ. ಆದ ಕಾರಣ ಈಗ ಚುನಾವಣೆಯ ತಾಲೀಮು ಆರಂಭವಾಗಿಲ್ಲ. ಆದರೆ ಆಕಾಂಕ್ಷಿಗಳು ಮತದಾರರನ್ನು ತಮ್ಮದೇ ಆದ ರೀತಿ ಯಲ್ಲಿ ತಲುಪುತ್ತಿದ್ದಾರೆ’ ಎನ್ನುತ್ತಾರೆ ತುಮಕೂರು ಹೊರ ವಲಯದ ಪಾಲಸಂದ್ರ ಗ್ರಾ.ಪಂ. ಮಾಜಿ ಸದಸ್ಯ ಹರೀಶ್.

ದಿನಾಂಕ ಘೋಷಣೆಯಾದರೆ ಮತ್ತಷ್ಟು ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ. ನಗರದ ಸುತ್ತಮುತ್ತಲಿನ ಕೆಲವು ಪಂಚಾಯಿತಿಗಳಿಗೆ ಸದಸ್ಯರಾಗಲು ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧ ಎನ್ನುವ ಮನಸ್ಥಿತಿ ಕೆಲವರಲ್ಲಿ ಇದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT