ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೌಗೋಳಿಕ ಮಾಹಿತಿ; ವೆಬ್‌ಸೈಟ್‌ಗೆ ಚಾಲನೆ

ಕಾಲಕಾಲಕ್ಕೆ ಇಲಾಖೆ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಳವಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 29 ಫೆಬ್ರುವರಿ 2020, 11:26 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಜಿಲ್ಲೆಯ ಭೌಗೋಳಿಕ ಮಾಹಿತಿ (ಜಿಐಎಸ್‌) ಒದಗಿಸುವ ವೆಬ್‌ಸೈಟ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು.

ಆರಂಭದಲ್ಲಿ ಯೋಜನಾ ನಿರ್ದೇಶಕ ಎಂ.ಜಯಚಂದ್ರನ್ ಕಾರ್ಯಕ್ರಮದ ಅನುಷ್ಠಾನ ಕುರಿತು ಮಾಹಿತಿ ನೀಡಿ, ‘ಭೌಗೋಳಿಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯಡಿ ಪ್ರಥಮ ಬಾರಿಗೆ ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಜಿಲ್ಲೆಯ ಮಾಹಿತಿಯನ್ನು ನಕ್ಷೆಯಲ್ಲಿ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

ವೆಬ್‌ಸೈಟ್‌ನಲ್ಲಿ ಜಿಲ್ಲೆಯ ನಗರ, ಪಟ್ಟಣ, ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ಪ್ರತಿ ಊರುಗಳ ಸರ್ವೆ
ನಂಬರ್ ಪ್ರಕಾರ ಸಂಪರ್ಕ ರಸ್ತೆ, ಸರ್ಕಾರದ ಇಲಾಖೆ ಕಚೇರಿಗಳ ಕಾರ್ಯ, ಮೂಲ ಸೌಕರ್ಯಗಳು, ಪ್ರತಿ ಇಲಾಖೆಯಿಂದ ಆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವ್ಯವಸ್ಥೆಗಳ ಮಾಹಿತಿಯನ್ನು ಜಿಐಎಸ್‌ನಲ್ಲಿ ಅಳವಡಿಸಲಾಗುವದು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ‘ಈಗಾಗಲೇ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ವ್ಯಾಪ್ತಿಯ ಕೆರೆ, ಬಾವಿ, ಮತ್ತಿತರ ಜಲಸಂಪನ್ಮೂಲ ಮಾಹಿತಿ ಸಂಗ್ರಹಿಸಲಾಗಿದೆ. ಅದೇ ಮಾದರಿಯಲ್ಲಿ ಆರೋಗ್ಯ, ಶಿಕ್ಷಣ, ಇತರ ಎಲ್ಲ ಇಲಾಖೆಗಳಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಅಳವಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ಪ್ರಾಥಮಿಕ ಹಂತದಿಂದ ಸಂಗ್ರಹಿಸಿ ಈ ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ ತಪ್ಪು ಇಲ್ಲದೆ ನಿಖರವಾದ ಮಾಹಿತಿ ಅಳವಡಿಸಬೇಕು. ಇದರಿಂದ ಜಿಲ್ಲೆಗೆ ಅಗತ್ಯವಿರುವ ಸರ್ಕಾರದ ಯೋಜನೆಗಳ ಕಾರ್ಯಾನುಷ್ಠಾನ ಮತ್ತು ಅನುದಾನವನ್ನು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

ಈ ವ್ಯವಸ್ಥೆಯಲ್ಲಿ ಭೌಗೋಳಿಕ ಹಿನ್ನೆಲೆ, ಸರ್ಕಾರಿ ಸೌಲಭ್ಯ, ಪ್ರತಿ ವ್ಯಕ್ತಿಯ ಮಾಹಿತಿ ಸಂಗ್ರಹಿಸಲಾಗುವುದು. ಇಲಾಖೆಗಳಿಂದ ಜಾರಿಗೊಳಿಸುವ ಯೋಜನೆ ಮತ್ತು ಅವುಗಳಿಗೆ ತಗುಲಿದ ವೆಚ್ಚವನ್ನೂ ಸಾರ್ವಜನಿಕರಿಗೆ ಕ್ಷಣಮಾತ್ರದಲ್ಲಿ ಒದಗಿಸಬಹುದು. ಇಲಾಖೆಗಳು ಕಾಲಕಾಲಕ್ಕೆ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವ್ಯವಸ್ಥೆಯಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಸಿಇಒ ಶುಭಾ ಕಲ್ಯಾಣ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT