ಬುಧವಾರ, ಮೇ 25, 2022
29 °C

ವಸತಿ ರಹಿತರ ಪಟ್ಟಿ ನೀಡಿ: ಶಾಸಕ ಡಾ. ಜಿ. ಪರಮೇಶ್ವರ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ‘ಕ್ಷೇತ್ರದಲ್ಲಿನ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಅನಿಯಮಿತ ಮನೆಗಳನ್ನು ಕೊಡುತ್ತಿದ್ದೇವೆ. ಮನೆ ಇಲ್ಲದವರ ಹೆಸರು ಪಟ್ಟಿಮಾಡಿ ಕೊಡಿ’ ಎಂದು ಶಾಸಕ ಡಾ. ಜಿ. ಪರಮೇಶ್ವರ ಅವರು ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ತಾಕೀತು ಮಾಡಿದರು.

ತಾಲ್ಲೂಕಿನ ಬುಕ್ಕಾಪಟ್ಟಣ ವ್ಯಾಪ್ತಿಯ ಗಾಂಧಿನಗರಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಬಹುತೇಕ ಜನರು ಗುಡಿಸಲಿನಲ್ಲಿ ವಾಸಿಸುತ್ತಿದ್ದುದ್ದನ್ನು ಕಂಡ ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಪ್ರತಿ ಸಾರಿ ಕ್ಷೇತ್ರಕ್ಕೆ ಬಂದಾಗ ಮನೆ ಇಲ್ಲದವರ ಪಟ್ಟಿಮಾಡಿ ಕೊಡಿ ಎಂದು ಹೇಳುತ್ತಲೇ ಇರುತ್ತೇನೆ. ಆದರೂ ನೀವು ನಿರ್ಲಕ್ಷ ತೋರುತ್ತಿದ್ದೀರ. ಒಂದು ದಿನ ನೀವು ಈ ಗುಡಿಸಲಿನಲ್ಲಿ ವಾಸ ಇದ್ದು ನೋಡಿ ಆಗ ನಿಮಗೆ ಅನುಭವ ಆಗುತ್ತೆ. ಕೆಲಸ ಮಾಡದ ಮೇಲೆ ಯಾಕೆ ಬರ್ತೀರಾ’ ಎಂದು ಅಸಮಾಧಾನ ಹೊರಹಾಕಿದರು.

ಗಾಂಧಿನಗರದಲ್ಲಿ ಕಳೆದ 10-15 ವರ್ಷಗಳಿಂದ ಏಳೆಂಟು ಕುಟುಂಬಗಳು ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ಶಾಸಕರಿಗೆ ದೂರಿದರು. ಇದರಿಂದ ಸಿಟ್ಟಾದ ಶಾಸಕರು ಕೂಡಲೇ ಮನೆ ಇಲ್ಲದವರ ಪಟ್ಟಿ ಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಳೆದ 15 ವರ್ಷಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿದ್ದೇವೆ ಎಂದು ಸಿದ್ದರಾಜು ಕುಟುಂಬದವರು ಶಾಸಕರ ಮುಂದೆ ಕಣ್ಣೀರಿಟ್ಟರು. ಕಲವೇ ದಿನಗಳಲ್ಲಿ ಮನೆ ನಿರ್ಮಾಣ ಮಾಡಿ ಕೊಡಲು ಕ್ರಮವಹಿಸುವುದಾಗಿ ಶಾಸಕರು ಭರವಸೆ ನೀಡಿದರು.

ಕೋಳಾಲ ಹೋಬಳಿ ಡಿ. ನಾಗೇನಹಳ್ಳಿಯಲ್ಲಿ ಶಾಸಕರು ಶಾಲಾ ಕಟ್ಟಡ ಉದ್ಘಾಟಿಸಿದರು. ಚನ್ನರಾಯನದುರ್ಗಾ, ಕೋಳಾಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ ₹2 ಕೋಟಿ ವೆಚ್ಚದ ಶಾಲಾ ಕಟ್ಟಡ, ಚರಂಡಿ, ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ, ಅರೆಕೆರೆ ಶಂಕರ್, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್ ದಿನೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್. ನರಸಿಂಹರಾಜು, ಗ್ರಾ.ಪಂ ಅಧ್ಯಕ್ಷ ನಿಂಗಮ್ಮ, ರತ್ನಮ್ಮ, ಉಪಾಧ್ಯಕ್ಷೆ ಸಿದ್ದಗಂಗಮ್ಮ, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್, ತಹಶೀಲ್ದಾರ್ ಗೋವಿಂದರಾಜು, ಇಒ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸುದಾಕರ್, ಎಇಇ ಉಮಾಮಹೇಶ್, ಕೃಷಿ ಅಧಿಕಾರಿ ನಾಗರಾಜು, ಮುಖಂಡರಾದ ಎಲ್.ರಾಜಣ್ಣ, ಚಿಕ್ಕರಂಗಯ್ಯ, ಜಿ.ಎಸ್.ರವಿಕುಮಾರ, ಎ.ಡಿ.ಬಲರಾಮಯ್ಯ, ಚಂದ್ರಶೇಖರ್ ಗೌಡ, ರಾಮಸ್ವಾಮಿ, ವೆಂಕಟೇಶ್, ಅರವಿಂದ, ಮಲ್ಲಪ್ಪ, ಸುರೇಶ್, ನರಸಿಂಹಯ್ಯ, ರಂಗರಾಜು, ದೇವರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು