ಹಿರೀಕರಿಗೆ ಅಭಿನಂದನೆಯ ಸಂಭ್ರಮ

7
ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರಿಗೆ 85 ವರ್ಷ ತುಂಬಿದ ಪ್ರಯುಕ್ತ ಅಭಿನಂದನಾ ಸಮಾರಂಭ

ಹಿರೀಕರಿಗೆ ಅಭಿನಂದನೆಯ ಸಂಭ್ರಮ

Published:
Updated:
Deccan Herald

ತುಮಕೂರು: ಅಲ್ಲಿ ಆಡಂಬರ ಇರಲಿಲ್ಲ. ಎಲ್ಲರಿಂದಲೂ ನೆಚ್ಚಿನ ಅಧ್ಯಾಪಕರ ಕುರಿತು ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದವು. ಅಭಿನಂದಿಸಿ ಮಾತನಾಡಿದ ಎಲ್ಲರೂ ಆ ಹಿರಿಯ ಚೇತನವನ್ನು ‘ನಮ್ಮ ಮನೆಯ ಸದಸ್ಯರು’, ‘ನನ್ನ ಗುರುಗಳು’, ‘ನಮ್ಮವರು’ ಎಂದು ಪ್ರೀತಿ ಪೂರ್ವಕವಾಗಿ ಕರೆಯುತ್ತಿದ್ದರು. ಎಲ್ಲರ ಪ್ರೀತಿಯ ಮಾತುಗಳಿಂದ ಆ ಹಿರಿಯರು ತೊಯ್ದು ಭಾವುಕರಾದರು.

ನಗರದ ಕನ್ನಡ ಭವನದಲ್ಲಿ ಶನಿವಾರ ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ ಅವರಿಗೆ 85 ವರ್ಷ ಪೂರ್ಣಗೊಂಡ ಪ್ರಯುಕ್ತ ಅವರ ಅಭಿಮಾನಿಗಳು, ಶಿಷ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಕೂಡು ಕುಟುಂಬವೊಂದು ಒಂದೆಡೆ ಸೇರಿ ಆಚರಿಸುವ ಹಬ್ಬದಂತಿತ್ತು.

‘ನಮ್ಮ ಮನೆಯ ಹಿರೀಕರು ಜಿ.ಎಂ.ಶ್ರೀನಿವಾಸಯ್ಯ. ಅವರ ಜ್ಞಾನ, ವಿವೇಕ, ಮಾನವೀಯತೆ ನಮ್ಮನ್ನು ಸೆಳೆದಿದೆ. ನಮ್ಮ ನಡುವಿನ ಆಕರ ಗ್ರಂಥ’ ಎಂದರು ಅಭಿನಂದನಾ ಭಾಷಣ ಮಾಡಿದ ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ದೊರೈರಾಜ್.

‘ಅವರ ಬದುಕು ತೆರೆದ ಪುಸ್ತಕದಂತೆ. ಜನ ಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ನಮ್ಮ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಶ್ರೀನಿವಾಸಯ್ಯ ಅವರ ಜತೆಗಿನ 15 ವರ್ಷಗಳ ಒಡನಾಟಗಳನ್ನು ಬಿಚ್ಚಿಟ್ಟರು.

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ‘ಕಷ್ಟದ ಹಾದಿಯಲ್ಲಿ ಸಾಗಿಬಂದವರು ವಯಸ್ಸಾದ ಮೇಲೆ ಸಮಾಜದ ಬಗ್ಗೆ ಸಿನಿಕರಾಗುವರು. ಆದರೆ ಶ್ರೀನಿವಾಸಯ್ಯ ಅವರಲ್ಲಿ ಸ್ವಲ್ಪವೂ ಸಿನಿಕತೆ ಇಲ್ಲ’ ಎಂದರು.

‘ಜಾತಿಯ ವಿರುದ್ಧ ಹೋರಾಡುತ್ತಲೇ ಜಾತಿವಾದಿಗಳಾಗುವ ಅವಕಾಶಗಳೂ ಇವೆ. ಆದರೆ ಆ ರೀತಿ ದಾರಿತಪ್ಪದೆ ಸರಿದಾರಿಯಲ್ಲಿ ಶ್ರೀನಿವಾಸಯ್ಯ ನಡೆದಿದ್ದಾರೆ’ ಎಂದು ತಮ್ಮ ಮತ್ತು ಶ್ರೀನಿವಾಸಯ್ಯ ಅವರ ಸಲುಗೆಯ ಬಗ್ಗೆ ಮಾತನಾಡಿದರು.

‘ಜಾತಿಯ ಅವಮಾನಗಳು ತಳ ಸಮುದಾಯಗಳನ್ನು ತೀವ್ರವಾಗಿ ಕಾಡಿವೆ. ನಕ್ಸಲ್‌, ಭಯೋತ್ಪಾದನೆಯ ಹಿಂಸೆಗಳಿಗಿಂತ ಜಾತಿಯ ಹಿಂಸೆ ದೊಡ್ಡದು. ಜಾತಿ ಕಾರಣಕ್ಕೆ ಎದುರಿಸುವ ಅವಮಾನ ಅತ್ಯಂತ ಕ್ರೂರವಾದುದು. ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವವರ ಎದುರಿಗೆ ಇಲ್ಲಿನ ತಳಸಮುದಾಯಗಳ ನೋವಿನ ಕಥನಗಳನ್ನು ಹಿಡಿಯಬೇಕು’ ಎಂದರು.

ಅಧ್ಯಕ್ಷತೆವಹಿಸಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ಶ್ರೀನಿವಾಸಯ್ಯ ಅವರು ಸೌಜನ್ಯದ ಸಾಕಾರ ಮೂರ್ತಿ. ನನ್ನ ತಂದೆ ಮತ್ತು ಗುರು ಎಲ್‌.ಜಿ.ಹಾವನೂರು ಅವರನ್ನು ನಾನು ಇವರಲ್ಲಿ ಕಾಣುತ್ತಿದ್ದೇವೆ’ ಎಂದು ಹೇಳಿದರು.

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತೀಯ ಶಕ್ತಿಗಳನ್ನು ಸೋಲಿಸಲು ಬದ್ಧರಾಗಿರಬೇಕು. ಈ ವಿಚಾರದಲ್ಲಿ ಶ್ರೀನಿವಾಸಯ್ಯ ಅವರ ಹೋರಾಟದ ಬದುಕು ನಮಗೆ ಸ್ಫೂರ್ತಿ ಆಗಬೇಕು. ಗುಜರಾತ್ ಮಾದರಿ ಅಂದರೆ ಬುದ್ಧಿಜೀವಿಗಳನ್ನು ಬಂಧಿಸುವುದು, ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವುದು ಎನ್ನುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮತ್ತು ವಿದೇಶ ಪ್ರವಾಸಕ್ಕೆ ಸೀಮಿತರಾಗಿದ್ದಾರೆ. ದೇಶವನ್ನು ಅಮಿತ್ ಷಾ ನಿಯಂತ್ರಿಸುತ್ತಿದ್ದಾರೆ’ ಎಂದು ದೂರಿದರು.

ಲೇಖಕಿ ಮಲ್ಲಿಕಾ ಬಸವರಾಜು, ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಶ್ರೀನಿವಾಸಯ್ಯ ಅವರ ವಿದ್ಯಾರ್ಥಿಗಳಾಗಿದ್ದ ಉಮೇಶ್, ಪ್ರಸನ್ನಕುಮಾರ್, ತಮ್ಮ ಅನುಭವಕ್ಕೆ ಬಂದ ಮತ್ತು ತಾವು ಕಂಡಂತೆ ಶ್ರೀನಿವಾಸಯ್ಯ ಅವರ ಮಾನವೀಯ ಅಂತಃಕರಣ ಮತ್ತು ಅವರ ವೃತ್ತಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಶ್ರೀನಿವಾಸಯ್ಯ ಅವರ ಕುರಿತು ಕೆ.ಇ.ಸಿದ್ದಯ್ಯ ಅವರು ಸಂಪಾದಿಸಿರುವ ‘ಬತ್ತದ ತಿಳಿನೀರ ಹಾದಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿ.ವಿ.ಆನಂದಮೂರ್ತಿ ಅವರು ಬರೆದ ಶ್ರೀನಿವಾಸಯ್ಯ ಅವರಿಗೆ ಅಭಿನಂದನಾ ಪತ್ರವನ್ನು ಚೇತನಾ ವಾಚಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೋಲಾರದ ಕಲಾವಿದರು ಹಾಡುಗಳನ್ನು ಪ್ರಸ್ತುತಪಡಿಸಿದರು. ಈ ತಂಡದಲ್ಲಿದ್ದ ಅಸ್ಸಾಂನ ಕೃಶಾಂಗಿ ‘ರಾಗಿ ತಂದಿರಾ ಭಿಕ್ಷೆಗೆ ರಾಗಿ ತಂದಿರಾ...’ ಸೇರಿದಂತೆ ಹಲವು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !