ಗಾಂಧೀಜಿ, ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಉಸಿರು

6
ಜಿಲ್ಲಾ ನಿವೃತ್ತ ನೌಕರರ ಸಂಘವು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ನುಡಿ

ಗಾಂಧೀಜಿ, ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಉಸಿರು

Published:
Updated:
Deccan Herald

ತುಮಕೂರು: ‘20ನೇ ಶತಮಾನದ ಇಬ್ಬರು ಮಹಾನ್ ಚಿಂತಕರಾದ ಗಾಂಧೀಜಿ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನಾ ಕ್ರಮ, ತಾತ್ವಿಕ ನೆಲೆಗಟ್ಟು ಮತ್ತು ಕ್ರಾಂತಿಕಾರಕ ಚಿಂತನೆಗಳಿಂದ ದೇಶದಲ್ಲಿ ನಾವೆಲ್ಲ ಸ್ವಲ್ಪ ಮಟ್ಟಿಗೆ ಉಸಿರಾಡಲು ಸಾಧ್ಯವಾಗಿದೆ’ ಎಂದು ಸಾಮಾಜಿಕ ಚಿಂತಕ ಮತ್ತು ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಹೇಳಿದರು.

ಜಿಲ್ಲಾ ನಿವೃತ್ತ ನೌಕರರ ಸಂಘವು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ಧ ಗಾಂಧೀಜಿ, ಲಾಲ್ ಬಹದ್ಧೂರ್ ಶಾಸ್ತ್ರಿ ಜನ್ಮದಿನ ಮತ್ತು ನಿವೃತ್ತ ಎಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

’20 ನೇ ಶತಮಾನ ಬಹುಮುಖ್ಯವಾದ ಶತಮಾನವಾಗಿದೆ. ಇಬ್ಬರು ಮಹಾನ್ ವ್ಯಕ್ತಿಗಳು ನಮ್ಮ ನಡುವೆ ಬಂದು ಹೋಗಿದ್ದು, ಅವರ ಚಿಂತನೆಗಳು ಪ್ರಸ್ತುತವಾಗಿವೆ’ ಎಂದು ಹೇಳಿದರು.

’ಗಾಂಧೀಜಿ ಅವರ ಚಿಂತನೆಗಳಲ್ಲಿ ಬುದ್ಧನ ಕರುಣೆ ಮತ್ತು ಪ್ರೀತಿಯನ್ನು ಕಾಣಬಹುದಾಗಿದೆ. ಮಾನವ ಧರ್ಮವನ್ನು ಗೌರವಿಸುತ್ತಿದ್ದರು. ಜಾತಿ, ಬೇಧ ಎಂಬುದೇ ಗೊತ್ತಿರಲಿಲ್ಲ. ಅವರು ಜೀವನದುದ್ದಕ್ಕೂ ಅನುಸರಿಸಿದ್ದು ಮಾನವೀಯ ಧರ್ಮ. ಬೇರೆ ಯಾವ ಧರ್ಮವನ್ನು ಅವರು ಬೋಧಿಸಲು ಹೋಗಲೇ ಇಲ್ಲ. ಆದರೆ, ಗಾಂಧೀಜಿ ಹೆಸರು ಹೇಳಿಕೊಂಡು ಲಾಭ ಮಾಡಿಕೊಳ್ಳುವುದು ಹೆಚ್ಚು ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

’ಗಾಂಧೀಜಿ ಜನರ ನಡುವೆ ಹೋದರೆ ಹೊರತು ದೇವಾಲಯಗಳಿಗೆ ಹೋಗಲಿಲ್ಲ. ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿದರು. ಕಷ್ಟಗಳನ್ನು ಹಂಚಿಕೊಂಡರು. ದೇಶ ಪರ್ಯಟನೆ ಮಾಡಿ ದೇಶದ ಆಗು ಹೋಗುಗಳನ್ನು ಅರಿತರು. ಇದಕ್ಕೆ ಗೋಪಾಲಕೃಷ್ಣ ಗೋಖಲೆ ಅವರು ಕಾರಣರಾಗಿದ್ದರು’ ಎಂದು ವಿವರಿಸಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬೋಬಡೆ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಎನ್.ನಾಗಪ್ಪ, ನಿವೃತ್ತ ಎಂಜಿನಿಯರ್ ಎನ್.ವಿ.ರಾಮಮೂರ್ತಿ ವೇದಿಕೆಯಲ್ಲಿದ್ದರು. ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅನಂತರಾಮಯ್ಯ ಸ್ವಾಗತಿಸಿದರು.

ಸಂಘಟನಾ ಕಾರ್ಯದರ್ಶಿ ನರಸಯ್ಯ ನಿರೂಪಿಸಿದರು. ಉಪಾಧ್ಯಕ್ಷ ಎನ್.ರಂಗಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !