ಬುಧವಾರ, ನವೆಂಬರ್ 20, 2019
22 °C
ವಿದ್ಯಾವಾಹಿನಿ ಕಾಲೇಜಿನಲ್ಲಿ ಆಯೋಜಿಸಿದ್ಧ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಡಾ.ಲೋಕೇಶ್‌ ಬಾಬು

ದೇವರು, ದೆವ್ವ ಮೈಮೇಲೆ ಬರುವುದೆಲ್ಲ ಸುಳ್ಳು

Published:
Updated:
Prajavani

ತುಮಕೂರು: ‘ದೇವರು, ದೆವ್ವ ಮೈಮೇಲೆ ಬರುವುದೆಲ್ಲಾ ಸುಳ್ಳು. ಇಂತಹ ನಂಬಿಕೆಗಳನ್ನೇ ಕೆಲವರು ಬಂಡವಾಳ ಮಾಡಿಕೊಂಡು ಬಂದಿದ್ದಾರೆ. ಮಾನಸಿಕ ಅಸ್ವಸ್ಥತೆಯು ಒಂದು ಕಾಯಿಲೆಯಾಗಿದ್ದು, ಅದನ್ನು ಚಿಕಿತ್ಸೆಯ ಮೂಲಕ ಮಾತ್ರ ಗುಣಪಡಿಸಲು ಸಾಧ್ಯವೇ ಹೊರತು ಮೂಢ ನಂಬಿಕೆಗಳಿಂದ ಅಲ್ಲ’ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ಲೋಕೇಶ್‌ಬಾಬು ತಿಳಿಸಿದರು.

ಇಲ್ಲಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ಹಾಗೂ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಅರಿವು ಹಾಗೂ ಹದಿಹರೆಯದ ವಯಸ್ಸಿನ ಮನೋ ಕಾಯಿಲೆಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಇಡೀ ದೇಹದಲ್ಲಿ ಮನಸ್ಸು ಒಂದು ಪ್ರಮುಖವಾದ ಅಂಗ ಎಂಬುದನ್ನು ಎಲ್ಲರೂ ಮರೆತಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವ ಬದಲು ನಾವೇ ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳಲು ಮುಂದಾಗುತ್ತಿದ್ದೇವೆ. ಸುಲಭವಾಗಿ ಬಗೆಹರಿಯಬಹುದಾದ ವಿಷಯಗಳನ್ನು ದೊಡ್ಡದು ಮಾಡಿ ಮಾನಸಿಕ ಅನಾರೋಗ್ಯಕ್ಕೆ ದೂಡಿಕೊಳ್ಳುತ್ತಿದ್ದೇವೆ’ ಎಂದು ವಿಷಾದಿಸಿದರು.

’ಮನುಷ್ಯನ ಬದುಕಿನಲ್ಲಿ ಸಮಸ್ಯೆಗಳು ಎಲ್ಲರಿಗೂ ಬರುತ್ತವೆ. ಇಂತಹ ಸಮಸ್ಯೆಗಳು ಮಾನವಾತೀತ ಶಕ್ತಿಗಳಿಂದ ಬಗೆಹರಿಯುತ್ತವೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಸಮಸ್ಯೆಗಳು ಬಂದಾಗ ಮನಸ್ಸು ಸಹಜವಾಗಿ ಕುಗ್ಗುತ್ತದೆ. ಪರಿಹಾರ ಮಾರ್ಗಗಳಿಗೆ ಹಾತೊರೆಯುತ್ತದೆ’ ಎಂದರು.

’ಈ ಸಂದರ್ಭದಲ್ಲಿಯೇ ಕೆಲವರು ಅತೀಂದ್ರೀಯ ಶಕ್ತಿಗಳ ಬಳಕೆ ಮಾಡಿಕೊಂಡು ಮತ್ತಷ್ಟು ಸಮಸ್ಯೆಗಳನ್ನು ತಂದಿಡುತ್ತಾರೆ. ಇಂಥವರ ಬಗ್ಗೆ ಎಚ್ಚರಿಂದ ಇರಬೇಕು’ ಎಂದು ವಿವರಿಸಿದರು.

’ಮನಸ್ಸು ನಮ್ಮದೇ ಆಗಿರುವುದರಿಂದ ಆ ಮನಸ್ಸನ್ನು ನಿಗ್ರಹಿಸುವ ಹಾಗೂ ಯೋಚಿಸುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕೇ ಹೊರತು ಇತರರಿಗೆ ಅದನ್ನು ಬಳಕೆ ಮಾಡಲು ಬಿಡಬಾರದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ’ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು. ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವತ್ತ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಹೇಳಿದರು.

ಆರೋಗ್ಯ ಹಾಗೂ ಹದಿಹರೆಯದ ಸಮಸ್ಯೆಗಳು ಎಂಬ ವಿಷಯ ಕುರಿತು ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ.ಹೆಚ್.ಎಸ್.ಲಲಿತ, ’ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಯಾವ ವ್ಯಕ್ತಿ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಿರುತ್ತಾನೋ ಆತ ಬಹಳ ಬೇಗನೆ ಮುಂದೆ ಬರುತ್ತಾನೆ. ಬದುಕು ಕಟ್ಟಿಕೊಳ್ಳುತ್ತಾನೆ’ ಎಂದರು.

ಪ್ರಾಂಶುಪಾಲ ದಯಾನಂದ್ ಮಾತನಾಡಿದರು. ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಿಮಾ ಜಯಣ್ಣ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮುಖ್ಯ ಅತಿಥಿಗಳಾಗಿದ್ದರು. ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಜೆ.ಎಲ್.ರಾಜಶೇಖರ್ ನಿರೂಪಿಸಿದರು.

ಪ್ರತಿಕ್ರಿಯಿಸಿ (+)