ಕಾಡುಗೊಲ್ಲರ ಎಸ್‌ಟಿಗೆ ಸೇರಿಸಲು ಹೋರಾಟ ಅಗತ್ಯ

7
‘ಜಂಪಣ್ಣಸ್ವಾಮಿ’ ಕುರಿತ ಕಾದಂಬರಿಯ ಸಂವಾದ; ಜನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಸಲಹೆ

ಕಾಡುಗೊಲ್ಲರ ಎಸ್‌ಟಿಗೆ ಸೇರಿಸಲು ಹೋರಾಟ ಅಗತ್ಯ

Published:
Updated:
Prajavani

ತುಮಕೂರು: ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಶಿಫಾರಸ್ಸನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಎಲ್ಲ ಒಳಪಂಗಡಗಳು ಭಿನ್ನಾಭಿಪ್ರಾಯ ಬದಿಗಿಟ್ಟು, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ಸಾಂಸ್ಕೃತಿಕ ಹೋರಾಟ ರೂಪಿಸಬೇಕು ಎಂದು ಜನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಕಾಡುಗೊಲ್ಲರ ಯುವಸೇನೆ, ಬ್ರೈಟ್ ಪೂರ್ಚರ್ ಫೌಂಡೇಷನ್‌ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ‘ಜಂಪಣ್ಣಸ್ವಾಮಿ’ ಅವರ ಕುರಿತು ಕಣಿವೆ ಜೋಗಿಹಳ್ಳಿ ಸುರೇಶ್ ಅವರು ಬರೆದಿರುವ ಕಾದಂಬರಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಊರುಗೊಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರದ ಅಂಗಳದಲ್ಲಿರುವ ಮೀಸಲಾತಿ ಶಿಫಾರಸ್ಸಿಗೆ ಬಲತುಂಬಬೇಕು. ಕಾಡುಗೊಲ್ಲರ ವೀರ ಪರಂಪರೆಯ ಮೊದಲ ಕಾದಂಬರಿ ವೀರ ‘ಜಂಪಣ್ಣಸ್ವಾಮಿ’ ಕುರಿತು ಚರ್ಚೆಗಳು ನಡೆಯಬೇಕಿತ್ತು. ಆದರೆ ಆದು ಆಗುತ್ತಿಲ್ಲ. ಬೇಡದ ಪುಸ್ತಕಗಳೇ ಚರ್ಚೆ ಆಗುತ್ತಿವೆ’ ಎಂದು ವಿಷಾದಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಬಸವರಮಾನಂದಸ್ವಾಮೀಜಿ ಮಾತನಾಡಿ, ‘ಕಾಡುಗೊಲ್ಲ ಸಮಾಜವು ಇತರ ಉಪಪಂಗಡಗಳೊಂದಿಗೆ ಬೆಸೆದುಕೊಂಡಿಲ್ಲ. ಎಲ್ಲ ಜಾತಿಗಳಲ್ಲಿ ಇದ್ದಂತೆ ನಮ್ಮಲ್ಲಿಯೂ ದ್ವಂದ್ವಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಆರ್ಥಿಕವಾಗಿ, ರಾಜಕೀಯವಾಗಿ ಬದಲಾವಣೆಗಳು ಆದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗಳು ಆಗುತ್ತಿಲ್ಲ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಚಿಕ್ಕಣ್ಣನಹಟ್ಟಿ ದೇವಾಲಯದ ಪ್ರಧಾನ ಅರ್ಚಕ ಪಾಪಣ್ಣ ಮಾತನಾಡಿ, ‘ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಮಾಜ ದಾರಿತಪ್ಪುತ್ತಿದೆ ಎನಿಸುತ್ತದೆ. ಯುವಕರಿಗೆ ಆದ್ಯತೆ ನೀಡುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಆಗಬೇಕಿದೆ. ತಪ್ಪನ್ನು ಖಂಡಿಸುವ ಹಕ್ಕು ಸಮಾಜದಲ್ಲಿ ಎಲ್ಲರಿಗೂ ಇದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ‘ಜೀಶಂಪ’ ಪ್ರಶಸ್ತಿಗೆ ಭಾಜನರಾದ ಕಾರಣ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತುಮಕೂರು ವಿವಿ ಜುಂಜಪ್ಪ ಅಧ್ಯಯನ ಪೀಠದ ನಿರ್ದೇಶಕ ಡಾ.ಶಿವಣ್ಣ ಬೆಳವಾಡಿ, ನಿವೃತ್ತ ಅರಣ್ಯಾಧಿಕಾರಿ ಡಾ.ಚಿಕ್ಕಪ್ಪಯ್ಯ, ಡಾ.ಹೊನ್ನಗಾನಹಳ್ಳಿ ಕರಿಯಣ್ಣ, ಡಾ.ಟಿ.ಡಿ.ಸಿದ್ದಪ್ಪ, ಮಹದೇವಯ್ಯ, ಜಯಕೃಷ್ಣ, ಬಸವಲಿಂಗಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !