ಶನಿವಾರ, ಜುಲೈ 24, 2021
27 °C

ಎಲ್ಲೆಡೆ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯ ಎಲ್ಲೆಡೆ ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆ ಜೋರು ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ್ದು, ಕೆಲವೆಡೆ ತುಂತುರು ಮಳೆಯಾಗಿತ್ತು. ಆದರೆ ರಾತ್ರಿ ಹದ ಮಳೆ ಸುರಿದಿದೆ.

ಒಂದು ವಾರದಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ಜೋರು ಮಳೆಯಾಗಿದ್ದರೆ, ಮತ್ತೆ ಕೆಲವು ಭಾಗದಲ್ಲಿ ತುಂತುರು ಹನಿಗೆ ಸೀಮಿತವಾಗಿತ್ತು. ಪಾವಗಡ, ಮಧುಗಿರಿ, ಶಿರಾ, ಕುಣಿಗಲ್, ತುರುವೇಕೆರೆ, ತಿಪಟೂರು ತಾಲ್ಲೂಕುಗಳಲ್ಲಿ ಕೊರತೆಯಾಗಿತ್ತು. ಈ ಬಾರಿ ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ತುಮಕೂರು ನಗರದಲ್ಲೂ ಜೋರು ಮಳೆ ಬಿತ್ತು.

ಶನಿವಾರ ರಾತ್ರಿ ಎಲ್ಲೆಡೆ ಮಳೆ ಬಿದ್ದಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಕೆಲವು ಕಡೆಗಳಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಭೂಮಿ ಸ್ವಲ್ಪ ಒಣಗಿದ ನಂತರ ಬಿತ್ತನೆ ಮಾಡಲಿದ್ದಾರೆ. ಪಾವಗಡ, ಮಧುಗಿರಿ, ಶಿರಾ ಭಾಗದಲ್ಲಿ ಸ್ಥಗಿತಗೊಂಡಿದ್ದ ಶೇಂಗಾ ಬಿತ್ತನೆ ಮತ್ತೆ ಪ್ರಾರಂಭವಾಗಿದೆ. ರಾಗಿ ಬೆಳೆಯುವ ಪ್ರದೇಶಗಳಲ್ಲೂ ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯ ವಿವರ: ಗುಬ್ಬಿ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಸೋನೆ ಮಳೆಯಾಗುತ್ತಿದ್ದು, ರಾತ್ರಿ ಜೋರಾಗಿದೆ. ಭಾನುವಾರ ಬೆಳಿಗ್ಗೆಯಿಂದ ತುಂತುರು
ಮಳೆಯಾಗಿದೆ. ಚೇಳೂರು, ಹಾಗಲವಾಡಿ ಭಾಗದಲ್ಲಿ ಬಿರುಸು ಪಡೆದುಕೊಂಡಿದೆ.

ಶಿರಾ, ಮಧುಗಿರಿ, ಪಾವಗಡ, ಕೊರಟಗೆರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕುರಂಕೋಟೆ ವ್ಯಾಪ್ತಿಯ ಬಿಕ್ಕೆ ಗುಟ್ಟೆಯಲ್ಲಿ ಚೆನ್ನಾಗಿ ಮಳೆಯಾಗಿದ್ದು ಮಲೆನಾಡು ನೆನಪಿಸಿತು. ತುರುವೇಕೆರೆ ತಾಲ್ಲೂಕಿನ
ದಂಡಿನಶಿವರ ಹೋಬಳಿ ಅರಕೆರೆ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆ ಹೋಬಳಿ ರಾಮಪ್ಪನಹಟ್ಟಿಯಲ್ಲಿ ವಾಸದ ಮನೆಯೊಂದು ಕುಸಿದಿದೆ. ಹುಳಿಯಾರಿನಲ್ಲಿ 38.2 ಮಿ.ಮೀ, ಚಿಕ್ಕನಾಯಕನಹಳ್ಳಿ 32.6 ಮಿ.ಮೀ, ಸಿಂಗದಹಳ್ಳಿಯಲ್ಲಿ 31 ಮಿ.ಮೀ ಮಳೆಯಾಗಿದೆ. ತಿಪಟೂರು, ತುರುವೇಕೆರೆ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ, ಕುಣಿಗಲ್ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.