ಸರ್ಕಾರಿ ಶಾಲೆಗಳ ದಾಖಲಾತಿ ಕ್ಷೀಣ

7
ಪೋಷಕರ ಇಂಗ್ಲಿಷ್ ಭಾಷಾ ವ್ಯಾಮೋಹ; ಬಾಗಿಲು ಮುಚ್ಚಿದ ಸಾರವಾಟಪುರ– ರಂಗಸಮುದ್ರ ಕಣಿ ಸರ್ಕಾರಿ ಶಾಲೆಗಳು

ಸರ್ಕಾರಿ ಶಾಲೆಗಳ ದಾಖಲಾತಿ ಕ್ಷೀಣ

Published:
Updated:
ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಸಾರವಾಟಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮೂರು ವರ್ಷಗಳಿಂದ ಬಾಗಿಲು ಮುಚ್ಚಿದೆ

ವೈ.ಎನ್.ಹೊಸಕೋಟೆ: ಪೋಷಕ ರಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ಗಡಿನಾಡಿನ ಗ್ರಾಮೀಣ ಪ್ರದೇಶವು ಇದಕ್ಕೆ ಹೊರತಾಗಿಲ್ಲ.

ಹೋಬಳಿಯ ಪ್ರತಿಹಳ್ಳಿಯಲ್ಲೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಇವೆ. ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನ ಮತ್ತು ದೊಡ್ಡಹಳ್ಳಿಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಈ ಶಾಲೆಗಳಲ್ಲಿ ಪ್ರತಿವರ್ಷ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಜೊತೆಗೆ ಶೈಕ್ಷಣಿಕ ಸಾಲಿನ ಮಧ್ಯಂತರದಲ್ಲಿ ಪೋಷಕರು ಹಲವು ಕಾರಣಗಳಿಂದ ವಿದ್ಯಾರ್ಥಿಗಳ ವರ್ಗಾವಣೆ ಪಡೆಯುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ತೊಂದರೆಯಾಗುತ್ತಿದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸುತ್ತಾದ್ದಾರೆ.

ಹೋಬಳಿ ಕೇಂದ್ರದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಾಲುಗಟ್ಟಿ ನಿಂತಿರುವುದು ಕಾಣುತ್ತಿದೆ. ವಿದ್ಯಾರ್ಥಿಗಳು ಇಲ್ಲದ ಕಾರಣ ಹೋಬಳಿಯ ಸಾರವಾಟಪುರ ಹಾಗೂ ರಂಗಸಮುದ್ರ ಕಣಿ ಸರ್ಕಾರಿ ಶಾಲೆಗಳು ಮುಚ್ಚಿವೆ. ಇದರಿಂದಾಗಿ ಸಾರ್ವಜನಿಕ ವೆಚ್ಚದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡಗಳು ಅನಾಥವಾಗಿ ನಿಂತಿವೆ.

ಅದೇ ಹಳ್ಳಿಯ ವಿದ್ಯಾರ್ಥಿಗಳು ದೂರದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನೂ ಇಂದು ದುಬಾರಿ ಶುಲ್ಕ ತೆತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾನೆ. ಇದು ಪೋಷಕರ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಗೆಗಿನ ನಿರಾಸಕ್ತಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೇಲಿನ ವ್ಯಾಮೋಹಕ್ಕೆ ಸಾಕ್ಷಿಯಾಗಿದೆ.

ಸಮುದಾಯದ ಶಾಲೆಗಳ ಬಗೆಗಿನ ಸಾರ್ವಜನಿಕ ಧೋರಣೆ ಬದಲಾಗಬೇಕು. ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಿ, ಬೋಧಕೇತರ ಚಟುವಟಿಕೆಗಳನ್ನು ಅವರ ಮೇಲೆ ಹೊರಿಸದೆ ಬೋಧನಾ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆಯಂತೆ ವಿದ್ಯಾರ್ಥಿಗಳಿಗೆ ತರಗತಿ, ಕಾಲಾವಧಿ ಮತ್ತು ವಿಷಯವಾರು ಮಾತೃಭಾಷೆಯ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನೀಡಿದರೆ ಸರ್ಕಾರಿ ಶಾಲೆಗಳ ಪ್ರಗತಿ ಉಂಟಾಗುತ್ತದೆ. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳು ಅವಸಾನ ಕಾಣಬೇಕಾಗುತ್ತದೆ ಎನ್ನುತ್ತಾರೆ ವೈ.ಎನ್.ಹೊಸಕೋಟೆ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಳಿಯ ಕೋಶಾಧ್ಯಕ್ಷ ಪಿ.ಬಿ.ವಿಶ್ವನಾಥ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !