ಸೋಮವಾರ, ಆಗಸ್ಟ್ 2, 2021
23 °C

ಕೋವಿಡ್‌ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಶಾಸಕ ಜಮೀರ್ ಅಹಮ್ಮದ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ‘ವಿಜ್ಞಾನಿಗಳು ಕೋವಿಡ್‌ ಎರಡನೇ ಅಲೆಯ ಭೀಕರತೆ ಬಗ್ಗೆ ತಿಳಿಸಿದ್ದರೂ, ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾದ ಕಾರಣ ರಾಜ್ಯದಲ್ಲಿ 33,326 ಮಂದಿ ಮೃತಪಟ್ಟಿದ್ದಾರೆ’ ಎಂದು ಶಾಸಕ ಜಮೀರ್ ಅಹಮ್ಮದ್ ದೂರಿದರು.

ಪಟ್ಟಣದಲ್ಲಿ ಡಿಕೆಎಸ್ ಚಾರಿಟಬಲ್ ಸಂಸ್ಥೆಯಿಂದ ಮೊಹಲ್ಲಗಳಲ್ಲಿ ದಿನಸಿ ಕಿಟ್‌ ವಿತರಿಸಿ ಮಾತನಾಡಿದರು.

ಸಮಿಶ್ರ ಸರ್ಕಾರವಿದ್ದಾಗ ಎಲ್ಲವೂ ಚೆನ್ನಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋವಿಡ್‌ ಆವರಿಸಿ ಜನತೆಗೆ ಸಂಕಷ್ಟಕಾಲ ಬಂದಿದೆ. ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ವ್ಯವಸ್ಥಿತ ಆಸ್ಪತ್ರೆ, ಮುನ್ನೆಚ್ಚರಿಕೆ ಕ್ರಮಗಳು ಪಾಲನೆಯಾಗಬೇಕಿದೆ ಎಂದರು.

ಸರ್ಕಾರ ಮೊದಲಿಗೆ ₹14 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿ, ಸ್ವಾಮೀಜಿ, ಮಠಮಾನ್ಯ, ಅರ್ಚಕರಿಗೆ ಪರಿಹಾರ ನೀಡಲು ಮುಂದಾಗಿತ್ತು. ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಮತ್ತೆ ₹3 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿ ಮೌಲ್ವಿಗಳಿಗೆ, ಬಡವರಿಗೆ ಪರಿಹಾರ ನೀಡಲು ಸಿದ್ಧವಾಗಿದೆ. ಪ್ಯಾಕೇಜ್ ಘೋಷಿಸುವ ಬದಲು ಬಿಪಿಎಲ್ ಕಾರ್ಡ್ ಹೊಂದಿರುವವರ ಖಾತೆಗೆ ನೇರವಾಗಿ ತಲಾ ₹10 ಸಾವಿರ ‌ಹಾಕಿದರೆ ಅನುಕೂಲವಾಗುತ್ತದೆ ಎಂದರು.

ರಾಜ್ಯ ಸರ್ಕಾರ ರಚಿಸಿರುವ ಕೊರೊನಾ ನಿಯಂತ್ರಣ ಸಮಿತಿಯಲ್ಲಿರುವ 16 ಮಂದಿ ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ 3.25 ಲಕ್ಷ ಮಕ್ಕಳ ಆರೋಗ್ಯದ ದೃಷ್ಟಿಯಿಂದ 3 ಸಾವಿರ ಮಕ್ಕಳ ತಜ್ಞರನ್ನು ನೇಮಿಸಿ, ಜಿಲ್ಲೆ ಕೇಂದ್ರಗಳಲ್ಲಿ ಸುಸಜ್ಜಿತ ಮಕ್ಕಳ ಆಸ್ಪತ್ರೆಗೆ ಕ್ರಮ ವಹಿಸಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‌ ಲಸಿಕೆ ಕುರಿತು ವದಂತಿಗಳು ಹಬ್ಬಿದೆ. ಲಸಿಕೆಯಿಂದ ಯಾವುದೇ ಅಡ್ಡಪ ಪರಿಣಾಮಗಳಾಗುವುದಿಲ್ಲ.  ವದಂತಿಗೆ ಕಿವಿಗೊಡದೆ ಲಸಿಕೆ ಪಡೆಯಿರಿ ಎಂದರು.

ಶಾಸಕ ಡಾ.ರಂಗನಾಥ್, ಕೋವಿಡ್‌ ಸಂಕಷ್ಟದ ದಿನಗಳಲ್ಲಿ ತಾಲ್ಲೂಕಿನಲ್ಲಿ ಜಾತಿ, ಧರ್ಮ ಮೀರಿದ ಮಾನವೀಯ ಮನಸುಗಳು ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿವೆ. ಕೋಮು ಸೌಹಾರ್ದ ಮೆರೆದಿದ್ದಾರೆ. ಡಿಕೆಎಸ್ ಚಾರಿಟಬಲ್‌ನಿಂದ ತಾಲ್ಲೂಕಿನ 75 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಯುವ ಜನರಿಗೆ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿದರು.

ಜಮೀರ್ ಅಹಮ್ಮದ್ 50 ಮಂದಿ ನಿರ್ಗತಿಕ ಮಹಿಳೆಯರಿಗೆ ತಲಾ ₹1,000 ವಿತರಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಬಾವಾ, ಪುರಸಭೆ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಅಜಂ ಪಾಷಾ, ಹಮೀ
ದ್, ರೆಹಮಾನ್ ಷರೀಪ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು