ಶನಿವಾರ, ಸೆಪ್ಟೆಂಬರ್ 25, 2021
23 °C

ರಿಯಲ್‌ ಎಸ್ಟೇಟ್‌ ದಂಧೆಗಿಳಿದ ಸರ್ಕಾರ: ಶಾಸಕ ಎಸ್.ಆರ್‌. ಶ್ರೀನಿವಾಸ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ವಸಂತ ನರಸಾಪುರದಲ್ಲಿ ಉದ್ಘಾಟಿಸಿದ ಫುಡ್‌ಪಾರ್ಕ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಕಡಿಮೆ ದರಕ್ಕೆ ರೈತರ ಜಮೀನು ಪಡೆದು ಇಂದು ಲಕ್ಷಾಂತರ ರೂಗಳಿಗೆ ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಸರ್ಕಾರವೇ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವುದು ವಿಪರ್ಯಾಸ ಎಂದು ಶಾಸಕ ಎಸ್.ಆರ್‌. ಶ್ರೀನಿವಾಸ್ ಹೇಳಿದರು.

‌ಕಡಬ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕ ವಲಯವನ್ನಾಗಿ ಮಾಡಲಿ ಎಂದು ಒತ್ತಾಯಿಸಿದರು.

‘ಜೆಡಿಎಸ್ ಬಿಡುಗಡೆ ಮಾಡಬೇಕೆಂದುಕೊಂಡಿರುವ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಡಬಹುದು. ಎಚ್.ಡಿ.ಕುಮಾರಸ್ವಾಮಿ ಅವರ ಮನಸ್ಸಿನಲ್ಲೇನಿದೆ ಎಂದು ನನಗೆ ತಿಳಿದಿಲ್ಲ’ ಎಂದರು.

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ಸಾಕಷ್ಟು ದೂರುಗಳಿವೆ. ನಿರ್ಮಾಣ ಮಾಡಿ ನಿರ್ವಹಣೆ ಮಾಡಬೇಕಾದ ಸಂಸ್ಥೆಗಳು ನಿರ್ಲಕ್ಷ್ಯ ತಾಳಿರುವ ಬಗ್ಗೆ ತಿಳಿದು ಕೂಡಲೇ ಸ್ಥಳೀಯ ಪಂಚಾಯಿತಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಿದ್ದೇನೆ. ಎಲ್ಲ ಪಂಚಾಯಿತಿ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಕುಡಿಯುವ ನೀರಿನ ಘಟಕ ನಿರ್ವಹಣೆಯನ್ನು ಸ್ಥಳೀಯವಾಗಿ ನಿರ್ವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ನಿರ್ಮಾಣವಾ ಗುತ್ತಿರುವ ಬಾಬು ಜಗಜೀವನ್‌ರಾಂ ಭವನ ಕಟ್ಟಡದ ಕಾಮಗಾರಿ ವಿಳಂಬದ ಬಗ್ಗೆ ಪರಿಶೀಲಿಸಲಾಗಿದೆ. ಶೀಘ್ರ ಭವನ ಸಿದ್ಧಗೊಳ್ಳಲಿದೆ ಎಂದರು.

ಪಟ್ಟಣದಲ್ಲಿ ಫುಟ್‌ಪಾತ್ ಮೇಲಿರುವ ಅಂಗಡಿಗಳಿಂದ ಪಾದಚಾರಿಗಳಿಗೆ ತೊಂದರೆಯಾದರೆ ತೆರವು ಮಾಡಲಾಗುವುದು. ಆದರೆ ಎಲ್ಲ ಅಂಗಡಿಗಳಿಗೆ ಒಂದೇ ಮಾನದಂಡ ಬಳಸಲಾಗದು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಂಗಯ್ಯ, ಮುಖಂಡರಾದ ಪಣಗಾರ್ ವೆಂಕಟೇಶ್, ರಮೇಶ್, ಹರ್ಷ, ಕೆ.ಆರ್.ವೆಂಕಟೇಶ್, ಚೇಳೂರು ಶಿವನಂಜಯ್ಯ, ಉಪೇಂದ್ರ, ಮಂಜು, ಶಂಕರ್, ಪಾಂಡು, ರಾಮಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.