ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೈನಿಕರ ಗೌರವಿಸಿ: ಕಾರಜೋಳ

ಮಾಜಿ ಶಾಸಕ ಸುರೇಶ್‌ ಗೌಡ ಅವರಿಂದ ಕಿಟ್‌ ವಿತರಣೆ; ಸಚಿವ ಗೋವಿಂದ ಎಂ.ಕಾರಜೋಳ ಭಾಗಿ
Last Updated 7 ಮೇ 2020, 16:12 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಪೌರಕಾರ್ಮಿಕರು, ವೈದ್ಯಕೀಯ ಸಿಬ್ಬಂದಿಯನ್ನು ಗೌರವಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಜನರಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ ಸುರೇಶ್‌ ಗೌಡ ಅವರು ಹೆಗ್ಗೆರೆಯಲ್ಲಿ ಆಯೋಜಿಸಿದ್ದ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಸಮೀಕ್ಷೆಗಾಗಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಿರುಕುಳ, ಅವಮಾನಗಳನ್ನು ಎದುರಿಸುತ್ತಿದ್ದಾರೆ. ಆದರೂ ಎದೆಗುಂದದೆ ಸೇವೆ ಮಾಡುತ್ತಿದ್ದಾರೆ. ಇಂತಹ ‘ಕೊರೊನಾ ಸೈನಿಕ’ರನ್ನು ನಾವೆಲ್ಲರೂ ಪೂಜಿಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಕರ್ತೆಯರು ಸಮೀಕ್ಷೆಗಾಗಿ ಮನೆಗಳಿಗೆ ಬಂದಾಗ ಆರೋಗ್ಯ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳಿ. ಕೆಮ್ಮು, ಜ್ವರ, ನೆಗಡಿಯಂತಹ ಯಾವುದೇ ಸಮಸ್ಯೆಯಿದ್ದರೂ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಸುರೇಶ್‍ಗೌಡ, ‘ಹೆಗ್ಗೆರೆ ಗ್ರಾಮದಲ್ಲಿ ಸಂಕಷ್ಟದಲ್ಲಿರುವವರಿಗೆ ಮಾಸ್ಕ್, ಅಗತ್ಯ ವಸ್ತುಗಳ ಕಿಟ್‍ಗಳನ್ನು ವಿತರಿಸುವುದು ಪುಣ್ಯದ ಕೆಲಸ. ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಕೋಟಿಗಳ ಆರ್ಥಿಕ ನೆರವನ್ನು ನೀಡುವ ಮೂಲಕ ನಮಗೆ ಮಾದರಿಯಾಗಿವೆ. ಇದೇ ರೀತಿ ಉಳ್ಳವರೆಲ್ಲರೂ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಬೇಕು’ ಎಂದು ಮನವಿ ಮಾಡಿದರು.

ಸೋಂಕು ಹರಡದಂತೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರ ಮೇಲೆ ಹೂವುಗಳನ್ನು ಚೆಲ್ಲುವ ಮೂಲಕ ಗೌರವ ಸಲ್ಲಿಸಲಾಯಿತು. ಅಂತರ ಕಾಯ್ದುಕೊಂಡು ಸಾಲಾಗಿ ಕುಳಿತಿದ್ದ ಬಡವರಿಗೆ ಅಕ್ಕಿ, ಬೇಳೆ, ರವೆ, ಸಕ್ಕರೆ, ಎಣ್ಣೆ, ಉಪ್ಪು ಒಳಗೊಂಡ ಕಿಟ್ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕುಮಾರ್, ಮುಖಂಡರಾದ ರಾಜೇಗೌಡ, ಸಿದ್ದೇಗೌಡ, ನರಸಿಂಹಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜು, ರಘುನಾಥಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT