ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಭೀತಿ ನಡುವೆ ಗೌರಿ ಸಂಭ್ರಮ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಬ್ಬದ ಸಂಭ್ರಮ ಕಡಿಮೆ
Last Updated 21 ಆಗಸ್ಟ್ 2020, 14:44 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಭೀತಿಯ ನಡುವೆಯೂ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಜನರು ಗೌರಿಯನ್ನು ಬರಮಾಡಿಕೊಂಡರು.

ನಗರದ ದೇವಸ್ಥಾನಗಳಲ್ಲಿ ಗೌರಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ದೇವಸ್ಥಾನಗಳಿಗೆ ಬಂದು ಗೌರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು.

ಮಹಿಳೆಯರಿಗೆ ಗೌರಿ ಹುಣ್ಣಿಮೆ ಸಂತಸ ಇಮ್ಮಡಿಗೊಳಿಸುವ ಹಬ್ಬ. ಮನೆ, ದೇವಸ್ಥಾನಗಳಲ್ಲಿ ಮಹಿಳೆಯರ ಚಟುವಟಿಕೆ ಹೆಚ್ಚಾಗಿತ್ತು. ಹೊಸ ಬಟ್ಟೆಗಳನ್ನು ತೊಟ್ಟು ಆರತಿ ತಟ್ಟೆಯಲ್ಲಿ ತೇರು, ಈಶ್ವರ, ಆನೆ, ಮೊಲ, ನಂದಿ, ನವಿಲು– ಹೀಗೆ ವಿವಿಧ ವಿನ್ಯಾಸಗಳಲ್ಲಿ ಸಕ್ಕರೆ ಗೊಂಬೆಗಳನ್ನು ಇಟ್ಟುಕೊಂಡು ಗೌರಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮೀಣ ಪ್ರದೇಶದಲ್ಲೂ ಗೌರಿ ಮೂರ್ತಿಯನ್ನು ಕೂರಿಸಿ ಪೂಜಿಸಿದರು. ಮನೆಗಳಲ್ಲಿ ಸಿಹಿ ಅಡುಗೆಮಾಡಿ ಗೌರಿ ಮೂರ್ತಿಗೆ ನೈವೇದ್ಯ ಮಾಡಲಾಯಿತು.

ಅಲ್ಲಲ್ಲಿ ಮಕ್ಕಳು ಪುಟ್ಟ ಗೌರಿಯರಾಗಿ ಆರತಿ ತಟ್ಟೆ ಹಿಡಿದು ಓಡಾಡುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು. ಭಕ್ತಿ ಭಾವದಿಂದ ಗೌರಿಗೆ ನಮಿಸಿ ಆರತಿ ಬೆಳಗಿದರು. ಮಹಿಳೆಯರಿಗೆ ಬಾಗಿನ ನೀಡಲಾಯಿತು.

ಖರೀದಿ: ಜನರು ಗೌರಿ, ಗಣೇಶ ಹಬ್ಬಕ್ಕಾಗಿ ವಸ್ತುಗಳನ್ನು ಖರೀದಿಸಿದರು. ಅನೇಕರು ಗೌರಿ ಹಬ್ಬದ ಮುನ್ನ ದಿನವೇ ಅಗತ್ಯ ವಸ್ತುಗಳನ್ನುಖರೀದಿಸಿದರೆ ಹಲವರು ಶುಕ್ರವಾರ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯೂ ವಸ್ತುಗಳನ್ನು ಕೊಂಡುಕೊಂಡರು.

ಶನಿವಾರ ಗಣೇಶ ಹಬ್ಬವೂ ಇರುವುದರಿಂದ ಪೂಜಾ ಸಾಮಗ್ರಿ, ಹಣ್ಣು, ಹೂವು, ತರಕಾರಿ, ಮಾವಿನ ಸೊಪ್ಪು, ಬಾಳೆ ಕಂದು, ಬಾಳೆ ಎಲೆ ಖರೀದಿಸಿದರು. ಕೊರೊನಾ ಭಯ, ಆತಂಕ ಜನರ ಮುಖದಲ್ಲಿ ಅಷ್ಟಾಗಿ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT