ಭಾನುವಾರ, ಜೂನ್ 20, 2021
25 °C
ಗ್ರಾಮೀಣ ಭಾಗದಲ್ಲಿ ‘ಗೌರಿ ಗುಡಿ’ ಪೂಜೆ ಅರ್ಪಿಸುವ ಸಂಪ್ರದಾಯ

ತವರಿನ ಬಾಗಿನ ನೆನಪಿಸುವ ‘ಗೌರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವೈಧವ್ಯದ ನಾಶಕ್ಕಾಗಿ ಆಚರಿಸುವ ಸ್ವರ್ಣಗೌರಿ ಹಬ್ಬಕ್ಕೆ ಮುತ್ತೈದೆಯರು ಮನೆ ಮನೆಗಳಲ್ಲಿ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ‘ಕೊರೊನಾ’ ಹಬ್ಬದ ಸಂಭ್ರಮವನ್ನು ಅಲ್ಪಮಟ್ಟಿಗೆ ಕಸಿದುಕೊಂಡರೂ, ಭಕ್ತಿ, ಭಾವದಿಂದ ವ್ರತ ಆಚರಣೆಗೆ ಹೆಂಗಳೆಯರು ಅಣಿಯಾಗಿದ್ದಾರೆ.

ಭಾದ್ರಪದ ಶುದ್ಧ ತದಿಗೆ ದಿನ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸ ಮುಗಿದ ಮೂರುದಿನದ ನಂತರ ಸ್ವರ್ಣಗೌರಿ, ಮಾರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ‘ಮಿಕ್ಕ ತದಿಗೆ; ಹೊಕ್ಕ ಚೌತಿ’ ಎಂದೇ ಕರೆಯುತ್ತಾರೆ.

ಗೌರಿ ಹಬ್ಬ ತುಮಕೂರು ಭಾಗದಲ್ಲಿ ತನ್ನದೇ ಆದ ವಿಶೇಷತೆ ಪಡೆದುಕೊಂಡಿದೆ. ಈ ಹಿಂದೆ ಮೈಸೂರು ಪ್ರಾಂತ್ಯಕ್ಕೆ ಸೇರಿದ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ‘ಗೌರಿ ಗುಡಿ’ ನಿರ್ಮಿಸಲಾಗುತ್ತಿತ್ತು. ರಾಜರು ಅದಕ್ಕೆ ಉಂಬಳಿ ಕೊಡುತ್ತಿದ್ದರು. ಪ್ರತಿ ಮನೆಗಳಲ್ಲೂ ಗೌರಿ ಕೂರಿಸಲು ಆಗುವುದಿಲ್ಲ ಎಂಬ ಕಾರಣದಿಂದ ಒಂದು ಗ್ರಾಮಕ್ಕೆ ಒಂದು ಗೌರಿ ಗುಡಿ ನಿರ್ಮಿಸುತ್ತಿದ್ದರು. ಅಲ್ಲಿ ಎಲ್ಲ ವರ್ಗದ ಜನರೂ ಸೇರಿ ಪೂಜೆ ಸಲ್ಲಿಸುತ್ತಿದ್ದರು.

ಈ ಸಂಪ್ರದಾಯ ಕೆಲ ಗ್ರಾಮಗಳಲ್ಲಿ ಈಗಲೂ ಮುಂದುವರಿದಿದೆ. ಒಂಬತ್ತು ದಿನ ಗೌರಿಯನ್ನು ಪ್ರತಿಷ್ಠಾಪಿಸಿ ಊರಿನವರೆಲ್ಲ ನೈವೇದ್ಯ, ಬಾಗಿನ ಅರ್ಪಿಸುತ್ತಾರೆ. ನಗರ ಪ್ರದೇಶದಲ್ಲಿ ಈ ಸಂಪ್ರದಾಯ ಅಲ್ಪ ಬದಲಾವಣೆ ಕಂಡಿದೆ. ಮಾರುಕಟ್ಟೆಗಳಲ್ಲಿ ಗೌರಿಯ ಮೂರ್ತಿ ಸಿಗುವುದರಿಂದ ಆ ಮೂರ್ತಿಗಳನ್ನು ತಂದು ಪೂಜೆ ಸಲ್ಲಿಸುತ್ತಾರೆ.

ತವರಿನ ಬಾಗಿನ: ಗೌರಿ ಹಬ್ಬವೆಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಮದುವೆಯಾಗಿರುವ ಹೆಣ್ಣು ಮಕ್ಕಳಿಗೆ ಸಂಭ್ರಮ ದುಪ್ಪಟ್ಟಾಗಿರುತ್ತದೆ. ವರ್ಷಕ್ಕೊಮ್ಮೆ ತವರಿಗೆ ಹೋಗಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನೆ ಹಬ್ಬವನ್ನು ಆಚರಿಸಿ ಬಾಗಿನ ತರುವುದೇ ಅವರಿಗೆ ಸಂಭ್ರಮ.

ಈ ಹಬ್ಬ ಹೆಣ್ಣು ಮಕ್ಕಳು ಹುಟ್ಟಿದ ಮನೆ ಮತ್ತು ಕೊಟ್ಟ ಮನೆಯ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಎಷ್ಟೇ ಬಡ ಕುಟುಂಬವಾದರೂ ಗೌರಿ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಬಾಗಿನ ಕೊಡುವ ಸಂಪ್ರದಾಯವಿದೆ.

***

ಪ್ರಕೃತಿಯೊಂದಿಗೆ ಅನುಸಂಧಾನ

ಪಂಚಭೂತಗಳನ್ನು ಪ್ರತಿನಿಧಿಸುವ ಗೌರಿಯನ್ನು ಭೂಮಿಗೆ ಹೋಲಿಸಲಾಗುತ್ತದೆ. ಮಣ್ಣಿನಲ್ಲೇ ಆಕೆಯ ಮೂರ್ತಿ ತಯಾರಿಸಿ, ಪೂಜಿಸಿ ನೀರಿನಲ್ಲಿ ಲೀನ ಮಾಡಲಾಗುತ್ತದೆ. ವಾಪಸ್‌ ಬರುವಾಗ ಗಂಗೆಯನ್ನು ಮನೆಗೆ ತರುತ್ತೇವೆ. ಇದೊಂದು ರೀತಿ ಪ್ರಕೃತಿಯೊಂದಿಗೆ ಅನುಸಂಧಾನ ಇದ್ದಂತೆ. ಪ್ರಕೃತಿ ಇಲ್ಲದೆ ನಾವಿಲ್ಲ ಎಂಬ ಸಂದೇಶವನ್ನೂ ಈ ಹಬ್ಬ ಸಾರುತ್ತದೆ.

– ಶಂಕರನಾರಾಯಣ, ಮುಳುಕುಂಟೆ

***

ಸಂಭ್ರಮವಿಲ್ಲ; ಭಕ್ತಿ ಕುಂದಿಲ್ಲ

ಕೊರೊನಾ ಕಾರಣದಿಂದ ಈ ಬಾರಿ ಹಬ್ಬದ ಸಂಭ್ರಮ ಕಡಿಮೆ ಆಗಿದೆ. ಮನೆಗಳಲ್ಲೇ ಹಬ್ಬ ಆಚರಣೆಗೆ ಸೀಮಿತವಾಗಿದ್ದೇವೆ. ಗೌರಿ ಹಬ್ಬದಂದು ಮುತ್ತೈದೆಯರು ಅರಿಸಿನ– ಕುಂಕುಮ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಆಚರಣೆಗೆ ತಡೆ ಬಿದ್ದಿದೆ. ಪೂಜೆಯ ಶ್ರದ್ಧಾ ಭಕ್ತಿ ಕುಂದಿಲ್ಲ.

– ಶಾಂತಾಲಕ್ಷ್ಮಿ, ಹೆಬ್ಬೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.