ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಅಲಂಕಾರ ಸಿದ್ಧತೆ ಜೋರು

ಸ್ವಾಗತಕ್ಕೆ ಸಜ್ಜು | ಗಮನ ಸೆಳೆಯುತ್ತಿವೆ ಬಣ್ಣ ರಹಿತ ಗೌರಿ-ಗಣೇಶ ಮೂರ್ತಿಗಳು

Published:
Updated:
Prajavani

ತುಮಕೂರು: ಜಿಲ್ಲೆಯ ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸಾರ್ವಜನಿಕ ಗಜಾನನ ಮೂರ್ತಿ ಪ್ರತಿಷ್ಠಾಪನಾ ಸಮಿತಿಗಳು ಸಾರ್ವಜನಿಕ ಸ್ಥಳದಲ್ಲಿ ವಿಘ್ನನಿವಾರಕನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ಮಾಡುತ್ತಿವೆ.

ಈ ವರ್ಷದ ವಿಶೇಷತೆ ಎಂದರೆ ಗೌರಿ ಮತ್ತು ಗಣೇಶ ಹಬ್ಬ ಒಂದೇ ದಿನ ಬಂದಿರುವುದು. ಹೀಗಾಗಿ ಸಿದ್ಧತೆಗಳು ಏಕಕಾಲಕ್ಕೆ ನಡೆಯುತ್ತಿವೆ.

ಅದ್ಧೂರಿ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶನ ಹಿರಿಮೆ ಗರಿಮೆ ಸಾರುವ ರೂಪಕಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

ವಿದ್ಯುತ್ ದೀಪಾಲಂಕಾರದಲ್ಲಿ ಗಣೇಶನಿಗೆ ಜಗಮಗಿಸುವ ಅಲಂಕಾರ ಮಾಡಲು, ಗೌರಿಗೆ ವಿಶೇಷ ಅಲಂಕಾರ ಮಾಡಲು ತಯಾರಿ ಜೋರಾಗಿ ನಡೆಯುತ್ತಿದೆ.

ತಿಂಗಳಾನುಗಟ್ಟಲೆ ಕುಂಬಾರರು ತಯಾರಿಸಿದ ಮಣ್ಣಿನ ಗಣೇಶ, ಗೌರಿ ಮೂರ್ತಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಪುಟಾಣಿ ಗಣೇಶನಿಂದ ಬೃಹತ್ ಗಾತ್ರದ ಗಣೇಶನ ಮೂರ್ತಿಗಳು ಇವೆ. ಗೌರಿ ಮೂರ್ತಿಗಳೂ ಗಮನ ಸೆಳೆಯುತ್ತಿವೆ.

ಬಣ್ಣ ರಹಿತ ಗೌರಿ ಮತ್ತು ಗಣೇಶ ಮೂರ್ತಿಗಳು ಆಕರ್ಷಕವಾಗಿವೆ. ಪರಿಸರ ಕಾಳಜಿ, ಪರಿಸರ ಪ್ರಜ್ಞೆಯ ಭಾಗವಾಗಿರುವ ಈ ಮೂರ್ತಿಗಳು ತರಹೇವಾರಿ ಬಣ್ಣದ ಗಣೇಶ, ಗೌರಿ ಮೂರ್ತಿಗಳ ನಡುವೆ ಎದ್ದು ಕಾಣುತ್ತವೆ.

₹ 50ರಿಂದ ₹ 400ರವರೆಗೂ ಗಣೇಶ, ಗೌರಿ ಮೂರ್ತಿಗಳು ಮಾರಾಟ ಆಗುತ್ತಿವೆ. ಬೃಹತ್ ಗಾತ್ರದ ಗಣೇಶ ₹ 1000ದಿಂದ ₹ 5000ದವರೆಗೂ ಮಾರಾಟಕ್ಕೆ ಇಡಲಾಗಿದೆ.

ಹಬ್ಬದ ಮೂರು ದಿನ ಮುಂಚೆಯೇ ಮಾರುಕಟ್ಟೆಗೆ ಮೂರ್ತಿಗಳು ಬಂದಿದ್ದು, ಪ್ರಮುಖವಾಗಿ ಅಶೋಕ ರಸ್ತೆಯ ಅಕ್ಕಪಕ್ಕವೇ ಹೆಚ್ಚಿನ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಎಸ್‌ಎಸ್‌ಪುರಂ, ಹೊರಪೇಟೆ, ಗುಬ್ಬಿ ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಗೌರಿ ಹಬ್ಬಕ್ಕೆ‌‌ ಬಾಗಿನ ಕೊಡಲು ಮೊರ ಸೇರಿದಂತೆ ಸಾಮಗ್ರಿ, ಹೂವು, ಹಣ್ಣುಗಳ ಮಾರಾಟವು ವರಮಹಾಲಕ್ಷ್ಮಿ ಹಬ್ಬದ ಮಾರುಕಟ್ಟೆಗಿಂತ ಕಡಿಮೆ ಏನೂ ಇರಲಿಲ್ಲ.

ಸಿದ್ದಿವಿನಾಯಕ ಸೇವಾ ಮಂಡಳಿಯು 43ನೇ ವರ್ಷದ ಗಣೇಶೋತ್ಸವ ಪ್ರಯುಕ್ತ 31 ದಿನಗಳ ಕಾಲ ( ಸೆ.2ರಿಂದ ಅಕ್ಟೋಬರ್ 2ರವರೆಗೆ) ಕೃಷ್ಣಗೋಕುಲಗಮನ ಮತ್ತು ಕಂಸವಧೆ ( ಸಿದ್ಧಿವಿನಾಯಕ ವೈಭವ) ಎಂಬ ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೂಜಾ ಮಹೋತ್ಸವ ಆಯೋಜಿಸಿದೆ.

ಅದೇ ರೀತಿ ನಗರದ ಗುರುಕುಲ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಗೌರಿ ಗಣೇಶ ಹಬ್ಬವನ್ನು ಪ್ರತಿ ವರ್ಷದಂತೆ ವೈಭಯುತವಾಗಿ ಆಚರಣೆ ಶನಿವಾರದಿಂದಲೇ ಆರಂಭವಾಗಿದೆ.

ಈ ಬಾರಿ ಪರಿವಾರ ಸಮೇತ ಗಣೇಶನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದೇ ಸಿದ್ದೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಿದ್ಧತೆಗಳು ನಡೆದಿವೆ.

ಹಣ್ಣುಗಳು ದರ (ಪ್ರತಿ ಕೆ.ಜಿಗೆ)

ಸೇಬು ₹100
ಮೋಸಂಬಿ ₹60
ದಾಳಿಂಬೆ ₹100
ಸೀತಾಫಲ ₹20
ಮರಸೇಬು ₹70
ದ್ರಾಕ್ಷಿ ₹80
ಕಿತ್ತಳೆ ₹100
ಪುಟ್ಟಬಾಳೆ ₹100
ಪೈನಾಪಲ್ ₹40 (1ಕ್ಕೆ)
***
ಬಾಳೆಗಿಡ ₹ 40 (ಜೋಡಿಗೆ)
ಮಾವಿನ ತಳಿರು ₹ 10 ( 1ಕಟ್‌ಗೆ)
ಅಡಿಕೆ ಕಾಯಿ ₹10 (2ಕ್ಕೆ)
ಗರಿಕೆ ₹ 10 (1ಕಟ್‌ಗೆ)
ಸೇವಂತಿಗೆ ₹100( ಮಾರಿಗೆ)
ಆಸ್ಟ್ರಾ ₹ 80 ( ಮಾರಿಗೆ)

 

Post Comments (+)