ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳಿಂದ ಸಂಬಳವೇ ಇಲ್ಲ

ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಯ ವಾಟರ್‌ಮ್ಯಾನ್, ಸ್ವಚ್ಛತಾಗಾರರು, ಬಿಲ್‌ಕಲೆಕ್ಟರ್‌ಗೆ ಎದುರಾಗಿದೆ ಸಮಸ್ಯೆ
Last Updated 11 ಮೇ 2020, 19:45 IST
ಅಕ್ಷರ ಗಾತ್ರ

ತುಮಕೂರು: ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್‌ಮ್ಯಾನ್, ಸ್ವಚ್ಛತಾಗಾರರು, ಕಂಪ್ಯೂಟರ್ ಆಪರೇಟರ್‌, ಬಿಲ್‌ಕಲೆಕ್ಟರ್‌ಗಳಿಗೆ ಕಳೆದ ಐದು ತಿಂಗಳಿನಿಂದ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿಗಳು ಸಂಬಳವನ್ನೇ ನೀಡಿಲ್ಲ.

ಜಿಲ್ಲೆಯಲ್ಲಿ 341 ಪಂಚಾಯಿತಿಗಳಿವೆ. 4,000ಕ್ಕೂ ಹೆಚ್ಚು ಮಂದಿ ನೌಕರರು ಪಂಚಾಯಿತಿಯಿಂದ ಸಂಬಳ ಪಡೆಯುತ್ತಿದ್ದಾರೆ. ವಾಟರ್‌ಮ್ಯಾನ್, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವವರು ಬಡ ಕುಟುಂಬಗಳಿಂದಲೇ ಬಂದವರು. ಬಹಳಷ್ಟು ಮಂದಿ ಕಂಪ್ಯೂಟರ್ ಆಪರೇಟರ್, ಬಿಲ್‌ಕಲೆಕ್ಟರ್‌ಗಳ ಕುಟುಂಬಗಳು ವೇತನ ನಂಬಿಯೇ ಬದುಕುತ್ತಿವೆ. ಕುಣಿಗಲ್ ತಾಲ್ಲೂಕು ವ್ಯಾಪ್ತಿಯ ಕೆಲವು ಪಂಚಾಯಿತಿಗಳಲ್ಲಿ 10 ತಿಂಗಳಿನಿಂದ ಸಂಬಳ ನೀಡಿಲ್ಲ ಎನ್ನುತ್ತವೆ ಮೂಲಗಳು.

ಶಾಸನ ಬದ್ಧ ಅನುದಾನದಲ್ಲಿ ಶೇ 40ರಷ್ಟನ್ನು ಪಂಚಾಯಿತಿ ನೌಕರರ ಸಂಬಳಕ್ಕೆ ಬಳಸಲಾಗುತ್ತಿದೆ. ಉಳಿದ ಹಣವನ್ನು ವಿದ್ಯುತ್ ಶುಲ್ಕ ಮತ್ತಿತರ ವೆಚ್ಚಕ್ಕೆ ಬಳಸಿಕೊಳ್ಳಲಾಗುತ್ತದೆ. ಈಗ ಸಂಬಳ ಬಿಡುಗಡೆಯಾಗುತ್ತದೆ, ಆಗ ಬಿಡುಗಡೆಯಾಗುತ್ತದೆ ಎಂದು ನೌಕರರು ಕಾಯುತ್ತಿದ್ದಾರೆ.

‘ನಮ್ಮ ಪಂಚಾಯಿತಿಯಲ್ಲಿ 15ಕ್ಕೂ ಹೆಚ್ಚು ಮಂದಿಗೆ ಸಂಬಳ ಬಂದಿಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ. ನಮಗೆ ಬೇರೆ ಆದಾಯದ ಮೂಲಗಳು ಇಲ್ಲ. ಸಂಬಳ ನೀಡುವಂತೆ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಈಗ ಕೊಡುತ್ತೇವೆ ಆಗ ಕೊಡುತ್ತೇವೆ ಎಂದು ದಿನದೂಡುತ್ತಿದ್ದಾರೆ’ ಎಂದು ಮಧುಗಿರಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರೊಬ್ಬರು ಅಳಲು ತೋಡಿಕೊಂಡರು.

‘ನಮ್ಮ ಸುತ್ತಮುತ್ತಲಿನ ಪಂಚಾಯಿ ಸಿಬ್ಬಂದಿಯ ಕಥೆಯೂ ಇದೇ ಆಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ಗಮನವಹಿಸಿ ವೇತನ ಬಿಡುಗಡೆ ಮಾಡುವಂತೆ ಪಂಚಾಯಿತಿಗಳಿಗೆ ಸೂಚಿಸಬೇಕು’ ಎಂದು ಆಗ್ರಹಿಸಿದರು.

ಮತ್ತಷ್ಟು ಕೆಲಸ:

ಕೊರೊನಾ ತಡೆಗೆ ಸಂಬಂಧಿಸಿದಂತೆ ಅಳವಡಿಸಿರುವ ಚೆಕ್‌‍ಪೋಸ್ಟ್‌ಗಳಲ್ಲಿ ಪಂಚಾಯಿತಿಯ ಈ ಸಿಬ್ಬಂದಿಯನ್ನು ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಗ್ರಾಮಗಳಲ್ಲಿ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇಷ್ಟಾದರೂ ಸಂಬಳ ನೀಡುತ್ತಿಲ್ಲ ಎನ್ನುವ ದೂರು ನೌಕರರ ಸಂಘದ ಮುಖಂಡರಿಂದ ಕೇಳಿ ಬರುತ್ತಿದೆ.

ಇಷ್ಟೆಲ್ಲ ಸಮಸ್ಯೆ ತೀವ್ರವಾಗುತ್ತಿದ್ದರೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಮುಖಂಡರು ಆರೋಪಿಸಿದರು.

ಕರೆ ಸ್ವೀಕರಿಸದ ಸಿಇಒ: ವೇತನ ಸಮಸ್ಯೆ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಸರ್ಕಾರವೇ ವೇತನದ ಹಣ ಭರಿಸಲಿ

ಎಚ್‌.ಕೆ.ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಸಂಬಳವನ್ನು ಹೆಚ್ಚಿಸಿದರು. ಸರ್ಕಾರವೇ ಪಂಚಾಯಿತಿಗಳ ಮೂಲಕ ವೇತನ ನೀಡಲು ₹ 32 ಕೋಟಿ ಮೀಸಲಿರಿಸಿದರು. ಆದರೆ ನಂತರ ಬಂದ ಸರ್ಕಾರಗಳು ಇದನ್ನು ಮುಂದುವರಿಸಲಿಲ್ಲ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ವಿವರಿಸಿದರು.

ಸಂಬಳಕ್ಕೆ ಶಾಸನ ಬದ್ಧ ಅನುದಾನ ಸಾಕಾಗಲಿಲ್ಲ ಅಂದರೆ ಪಂಚಾಯಿತಿಯು ತನ್ನ ಸ್ವಂತ ಆದಾಯದಲ್ಲಿ ವೇತನ ಭರಿಸಬೇಕು ಎಂದು ಹೇಳಲಾಗಿದೆ. ಈ ರೀತಿಯಾದರೆ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆ ಆಗುತ್ತದೆ. ಕೆಲವು ಸಣ್ಣ ಪಂಚಾಯಿತಿಗಳ ಸಂಪನ್ಮೂಲ ಸಂಬಳಕ್ಕೆ ಸರಿ ಹೋಗುತ್ತಿದೆ. ಆದ್ದರಿಂದ ಸರ್ಕಾರವೇ ನೌಕರರ ವೇತನ ಭರಿಸಬೇಕು ಎಂದು ಆಗ್ರಹಿಸುವರು.

‘ಅಧಿಕಾರಿಗಳ ನಿರ್ಲಕ್ಷ್ಯ’

‘ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯ ಕಾರಣದಿಂದ ಆರ್ಥಿಕವಾಗಿ ಉತ್ತಮವಾಗಿರುವ ಪಂಚಾಯಿತಿಗಳಲ್ಲೂ ವೇತನ ನೀಡಿಲ್ಲ. ನೌಕರರು ಈಗ ಕೊರೊನಾ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಬದುಕು ದುಸ್ತರವಾಗಿದೆ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘಟದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಕೆ.ಸುಬ್ರಹ್ಮಣ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT