ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ರಚನೆಯಾಗದ ಬಡ್ತಿ ಸಮಿತಿ

ಜಿ.ಪಂ ಸಿಇಒಗೆ ಪದೇ ಪದೇ ಮನವಿ; 8 ವರ್ಷಗಳಿಂದ ಪಂಚಾಯಿತಿ ಸಿಬ್ಬಂದಿಗಿಲ್ಲ ಬಡ್ತಿ
Last Updated 22 ಮೇ 2020, 20:00 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ಬಡ್ತಿ ನೀಡುವ ಸಂಬಂಧ ನಡೆಸಬೇಕಾದ ‘ಜಿಲ್ಲಾ ಬಡ್ತಿ ಸಮಿತಿಯ ಸಭೆ’ ಎಂಟು ವರ್ಷಗಳಿಂದ ನಡೆದೇ ಇಲ್ಲ!

ಇದರಿಂದ 2012ರಿಂದ ಲೆಕ್ಕ ಸಹಾಯಕರು, ಗ್ರೇಡ್–1 ಕಾರ್ಯದರ್ಶಿ, ಗ್ರೇಡ್–2 ಕಾರ್ಯದರ್ಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಲ್‌ಕಲೆಕ್ಟರ್‌ಗಳಾಗಿ ಕೆಲಸ ಮಾಡುತ್ತಿರುವವರಿಗೆ ಬಡ್ತಿಯೇ ದೊರೆತಿಲ್ಲ.

ಈ ಕುರಿತು 2019ರ ಅಕ್ಟೋಬರ್‌ನಲ್ಲಿ ‘ಪ್ರಜಾವಾಣಿ’ಯಲ್ಲಿ ‘ಪಂಚಾಯಿತಿ ಸಿಬ್ಬಂದಿಗೆ ದೊರೆಯದ ‘ಬಡ್ತಿ ಭಾಗ್ಯ’ ಎಂಬ ವರದಿ ಪ್ರಕಟವಾಗಿತ್ತು. ಆಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಒಂದು ಸಭೆ ನಡೆಸಿದರು. ಬಡ್ತಿ ದೊರೆಯುತ್ತದೆ ಎನ್ನುವ ಆಶಾಭಾವ ನೌಕರರಲ್ಲಿ ಚಿಗುರಿತು. ಆದರೆ ಆ ಚಿಗುರು ಅಲ್ಲಿಯೇ ಮರುಟಿತು. ಸಭೆ ನಾಮಕಾವಸ್ತೆಯಾಯಿತು.

ಬಿಲ್ ಕಲೆಕ್ಟರ್, ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳಿಗೆ ಸರ್ಕಾರದ ಆದೇಶದ ಅನ್ವಯ ಪ್ರತಿವರ್ಷ ಜೇಷ್ಠತಾ ಪಟ್ಟಿ ತಯಾರಿಸಬೇಕು. ಬಡ್ತಿ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ನೌಕರರು ಕಳೆದ ಫೆಬ್ರುವರಿಯಲ್ಲಿ ನಗರದ ಟೌನ್‌ಹಾಲ್‌ನಲ್ಲಿ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಈ ಬಗ್ಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕೂ ಮುನ್ನ 2019ರ ಜೂನ್‌ನಲ್ಲಿಯೂ ನೌಕರರು ಪ್ರತಿಭಟನೆ ನಡೆಸಿದ್ದರು. ಆಗ 15 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಯಾವ ಭರವಸೆಗಳು ಇನ್ನೂ ಈಡೇರಿಲ್ಲ. ಭರವಸೆ ಕೊಟ್ಟ ಸಿಇಒ ಈ ವಿಚಾರವನ್ನೇ ಮರೆತಿದ್ದಾರೆ.

ರಾಜ್ಯ ಸರ್ಕಾರದ ವಿಶೇಷ ರಾಜ್ಯ ಪತ್ರದ ಪ್ರಕಾರ 2 ವರ್ಷಕ್ಕೆ ಬಡ್ತಿ ನೀಡಲು ಅವಕಾಶ ಇದೆ. ಆದರೆ ತುಮಕೂರು ಜಿ.ಪಂ ವ್ಯಾಪ್ತಿಯಲ್ಲಿ ಮಾತ್ರ ಇದು 8 ವರ್ಷಗಳಿಂದ ಜಾರಿಯಾಗಿಯೇ ಇಲ್ಲ. ಬಡ್ತಿ ನೀಡಿ ಎಂದು 2015ರಿಂದ 2017ರ ವರೆಗೆ ಜಿ.ಪಂ. ಸಿಇಒಗೆ ನೌಕರರು ಮನವಿ ಸಲ್ಲಿಸುತ್ತಲೇ ಇದ್ದಾರೆ. ಸಿಇಒಗಳು ಬದಲಾದರೆ ಹೊರತು ಕೋರಿಕೆ ಮಾತ್ರ ಈಡೇರಿಲ್ಲ.

ಜಿಲ್ಲೆಯಲ್ಲಿ 341 ಗ್ರಾಮ ಪಂಚಾಯಿತಿಗಳಿವೆ. ವಿವಿಧ ಗ್ರಾ.ಪಂ.ಗಳಲ್ಲಿ ಸುಮಾರು 20 ವರ್ಷಗಳಿಂದ ಬಿಲ್‌ಕಲೆಕ್ಟರ್‌, ಲೆಕ್ಕಸಹಾಯಕ ಹಾಗೂ ಗ್ರೇಡ್‌–2 ಕಾರ್ಯದರ್ಶಿಯಾಗಿ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ಬಡ್ತಿ ಇಲ್ಲದೆಯೇ 30ಕ್ಕೂ ಹೆಚ್ಚು ಜನರು ನಿವೃತ್ತರಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ನಿವೃತ್ತಿ ಅಂಚಿನಲ್ಲಿ
ಇದ್ದಾರೆ.

ಕೆಲಸಕ್ಕೆ ಬಂದು ಮೂರ್ನಾಲ್ಕು ವರ್ಷ ಪೂರ್ಣವಾಗುತ್ತಲೇ ಜಿ.ಪಂ ಸಿಇಒ, ಉಪಕಾರ್ಯದರ್ಶಿಗಳು ಮತ್ತೊಂದು ಹಂತಕ್ಕೆ ಬಡ್ತಿ ಪಡೆದಿರುತ್ತಾರೆ. ಇವರಿಗೆ ಒಂದು ನ್ಯಾಯ, ತಮ್ಮ ಅಧೀನ ನೌಕರರಿಗೆ ಒಂದು ನ್ಯಾಯ ಎನ್ನುವ ನೀತಿ ಜಿಲ್ಲೆಯಲ್ಲಿ ಇದೆ ಎಂದು ಪಂಚಾಯಿತಿ ನೌಕರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಸಿಇಒ ಜಿಲ್ಲಾ ಬಡ್ತಿ ಸಮಿತಿಯ ಸಭೆ ನಡೆಸಬೇಕು. ಆದರೆ ಆ ಸಭೆಯೇ ನಡೆದಿಲ್ಲ. ಇಲಾಖೆ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿದ್ದಾರೆ, ಯಾರಿಗೆ ಬಡ್ತಿ ನೀಡಬಹುದು ಎನ್ನುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬಹುದು. ಸರ್ಕಾರದ ಅಧಿಸೂಚನೆ, ಬೇರೆ ಜಿಲ್ಲೆಗಳಲ್ಲಿ ಆಗಿರುವ ಕ್ರಮಗಳು ಇತ್ಯಾದಿಯ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೂ ಬಡ್ತಿಗೆ ಕ್ರಮಕೈಗೊಂಡಿಲ್ಲ’ ಎಂದು
ನೌಕರ ಸಂಘಟನೆ ಮುಖಂಡರು ದೂರಿದರು.

‘ಅಧಿಕಾರಿಗಳಿಗೆ ಮನವಿ ನೀಡಿದರೂ ಈ ಬಗ್ಗೆ ಕ್ರಮವಹಿಸಿಲ್ಲ. ಈ ಅವಧಿಯಲ್ಲಿ ನಾಲ್ಕು ಬಾರಿ ನೇರ ನೇಮಕಾತಿಯಲ್ಲಿ ನೌಕರರು ಕೆಲಸಕ್ಕೆ ಬಂದಿದ್ದಾರೆ. ಅಂದ ಮೇಲೆ ನಮ್ಮ ಹಿರಿತನ ಎಲ್ಲಿಗೆ ಹೋಗುತ್ತದೆ ಹೇಳಿ’ ಎಂದು ಹೆಸರು ಬರೆಯಬೇಡಿ ಎನ್ನುವ ನೌಕರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

****
ವಸೂಲಿ ಬಾಜಿ
‘ಬಹುತೇಕ ಜಿಲ್ಲೆಗಳಲ್ಲಿ ಅರ್ಹರಿಗೆ ಬಡ್ತಿ ನೀಡಿ ಮೂರು ವರ್ಷ ಕಳೆದಿದೆ. ಆದರೆ ಜಿಲ್ಲೆಯಲ್ಲಿ ಇದು ಜಾರಿಯಾಗಿಲ್ಲ. ವಸೂಲಿ ಬಾಜಿಯ ಕಾರಣಕ್ಕೆ ಈ ರೀತಿ ಆಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಸುಬ್ರಹ್ಮಣ್ಯ ಆರೋಪಿಸಿದರು.

‘ನಾವು ಪದೇ ಪದೇ ಮನವಿ ಕೊಡುತ್ತೇವೆ. ಈಗ ಮಾಡುತ್ತೇವೆ, ಆಗ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಕಾನೂನು ಬದ್ಧವಾಗಿ ಈ ವಿಚಾರದಲ್ಲಿ ಕೆಲಸ ಮಾಡಲು ಜಿಲ್ಲಾ ಪಂಚಾಯಿತಿ ವಿಫಲವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT