ಸೋಮವಾರ, ಸೆಪ್ಟೆಂಬರ್ 16, 2019
27 °C
ಕನ್ನಡ ಮಾಧ್ಯಮದಲ್ಲಿ ಪಿಎಚ್‌.ಡಿ ಪದವಿ ಪಡೆದವರಿಗೆ ಅಭಿನಂದನಾ ಕಾರ್ಯಕ್ರಮ

ಭಾಷೆ ಬೆಳೆಸಿ ನೀವೂ ಬೆಳೆಯಿರಿ: ಮುದ್ದಹನುಮೇಗೌಡ ಆಶಯ

Published:
Updated:
Prajavani

ತುಮಕೂರು: ‘ಭಾಷೆ ಯಾವುದೇ ಇರಲಿ. ಅದರ ಬಗ್ಗೆ ಸಂಕುಚಿತ ಮನೋಭಾವ ಇಟ್ಟುಕೊಳ್ಳಬಾರದು. ಬೇರೆ ಭಾಷೆಯನ್ನು ಪ್ರೀತಿಯಿಂದ ಕಾಣಬೇಕು. ನಮ್ಮ ಭಾಷೆಯನ್ನು ಬೆಳೆಸಿ ನೀವೂ ಬೆಳೆಯಿರಿ’ ಎಂದು ಪಿಎಚ್‌.ಡಿ ಪದವೀಧರರಿಗೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಮಾಧ್ಯಮದಲ್ಲಿ ಪಿಎಚ್‌.ಡಿ ಪಡೆದ 23 ಮಂದಿಗೆ ಅಭಿನಂದನಾ ಸಮಾರಂಭ ಹಾಗೂ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಇತರೆ ಭಾಷೆಗಳಿಗೆ ಹೋಲಿಸಿದಾಗ ಕನ್ನಡ ಸೌಮ್ಯವಾದ ಭಾಷೆ. ಇಲ್ಲಿ ಕರ್ಕಶ ಎನಿಸುವ ಮಾತೇ ಇಲ್ಲ. ಅಷ್ಟು ಸುಂದರ ಮತ್ತು ಸ್ವಚ್ಛಂದ ಭಾಷೆಯಾಗಿದೆ’ ಎಂದರು,.

ಮಾತೃಭಾಷೆಯಲ್ಲಿ ಮಾತನಾಡುವುದು, ಮಾತನಾಡಿದಾಗ ಆದ ಸಂತೋಷ ಎಷ್ಟು ಎಂಬುದನ್ನು ನಾನು ಲೋಕಸಭೆಯಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲಿ ಮಾತನಾಡಿದಾಗ ಕಂಡುಕೊಂಡಿದ್ದೇನೆ ಎಂದು ಹೇಳಿದರು.

ಅಭಿನಂದನಾ ಭಾಷಣ ಮಾಡಿದ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ರಮೇಶ್,
ಪಿಎಚ್‌.ಡಿ ಮಾಡಿಕೊಂಡವರಲ್ಲಿ ನಿರಂತರ ಸಂಶೋಧನಾತ್ಮಕ ಗುಣ ಇರಬೇಕು. ವಿಶ್ಲೇಷಣೆ ಮತ್ತು ಸತ್ಯಾಂಶ ಹೊರತೆಗೆಯುವ ಪ್ರಯತ್ನ ಆಗಬೇಕು ಎಂದು ಹೇಳಿದರು.

ಸಾಕ್ಷರತೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್, ‘ಅಕ್ಷರವಂತರಾದರೂ ಸಾಮಾಜಿಕ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಷ್ಟ ಬಂದಂತೆ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ಬರವಣಿಗೆ ಅಪಾಯ ತಂದೊಡ್ಡಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪಿಎಚ್‌.ಡಿಯನ್ನು ಕನ್ನಡದಲ್ಲಿ ಪಡೆದ ಎಲ್ಲರನ್ನೂ ಇಂದು ಗೌರವಿಸಲಾಗುತ್ತಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಕಸಾಪ ಪದಾಧಿಕಾರಿಗಳಾದ ಸಿ.ಎ.ಇಂದಿರಾ, ಮಲ್ಲಿಕಾ ಬಸವರಾಜು, ಅರುಂಧತಿ, ರಾಣಿ ಚಂದ್ರಶೇಖರ್, ಮೇಳೆಹಳ್ಳಿ ದೇವರಾಜ್ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಶೈಲಾ ನಾಗರಾಜ್ ಸ್ವಾಗತಿಸಿದರು. ರಾಕ್‌ಲೈನ್ ರವಿಕುಮಾರ್ ನಿರೂಪಿಸಿದರು.

Post Comments (+)