ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿಯಿಂದ ಹಾರಲಿವೆ ವರ್ಷಕ್ಕೆ 30 ಹೆಲಿಕಾಪ್ಟರ್‌‌: HAL ಘಟಕ ಉದ್ಘಾಟನೆ ಇಂದು

ಇಂದು ಎಚ್‌ಎಎಲ್‌ ಘಟಕ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ
Last Updated 5 ಫೆಬ್ರುವರಿ 2023, 21:49 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ಹೆಲಿಕಾಪ್ಟರ್‌ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಲಿದ್ದಾರೆ. ಈ ಘಟಕ ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್‌ ತಯಾರಿಸುವ ಗುರಿ ಹೊಂದಿದೆ.

ಈ ಘಟಕಕ್ಕೆ ಮೋದಿ 2016ರಲ್ಲಿ ಭೂಮಿಪೂಜೆ ನೆರವೇರಿಸಿದ್ದರು. 615 ಎಕರೆ ಜಮೀನಿನಲ್ಲಿ ಈ ಘಟಕ ತಲೆ ಎತ್ತಿದೆ.

ಎಚ್‌ಎಎಲ್‌ 3 ಟನ್‌ನಿಂದ 15 ಟನ್‌ ವರೆಗಿನ ಒಂದು ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರ್‌ ತಯಾರಿಸುವ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ₹5 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಈ ಘಟಕ ಶುರುವಾಗುತ್ತಿದೆ. ಹೆಲಿಕಾಪ್ಟರ್‌ ನಿರ್ಮಾಣ, ಜೋಡಣೆ, ಹೆಲಿಪ್ಯಾಡ್, ಆಡಳಿತ ಕಟ್ಟಡ ಇಲ್ಲಿದೆ.

ಹೆಲಿಕಾಪ್ಟರ್‌ ಘಟಕದ ಉದ್ಘಾಟನೆ ಬಳಿಕ ಜಲಜೀವನ್‌ ಮಿಷನ್‌ ಯೋಜನೆಯಡಿ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಗಳ ಕಾಮಗಾರಿಗಳಿಗೆ ಇಲ್ಲಿಂದಲೇ ಭೂಮಿಪೂಜೆ ನೆರವೇರಿಸಲಿದ್ದಾರೆ. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸೋಮವಾರ ಮಧ್ಯಾಹ್ನ 3.30 ಗಂಟೆಗೆ ಪ್ರಧಾನಿ ಬರಲಿದ್ದು, ಒಂದು ತಾಸಿನಲ್ಲಿ ಸಮಾರಂಭ ಕೊನೆಗೊಳ್ಳಲಿದೆ. ಮಧ್ಯಾಹ್ನ 1 ಗಂಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಾರ್ವಜನಿಕರನ್ನು ಬಿಡಲಾಗುತ್ತದೆ.

ಊಟ, ನೀರಿಗಾಗಿ ಪರದಾಡಿದ ಪೊಲೀಸರು!

ತುಮಕೂರು: ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಪ್ರಧಾನಿ ಕಾರ್ಯಕ್ರಮದ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ಭಾನುವಾರ ಬೆಳಿಗ್ಗೆಯಿಂದ ತಿಂಡಿ, ಊಟ, ನೀರು ಸಿಗದೆ ಪರದಾಡಿದ್ದಾರೆ.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಎರಡು ಸಾವಿರ ಪೊಲೀಸರನ್ನು ಭದ್ರೆತೆಗಾಗಿ ನಿಯೋಜಿಸಲಾಗಿದೆ. ಎರಡು ದಿನಗಳಿಂದ ಬಿದರೆಹಳ್ಳ ಕಾವಲ್‌ ಬಳಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಶನಿವಾರ ರಾತ್ರಿಯಿಂದ ಸರಿಯಾದ ಊಟದ ವ್ಯವಸ್ಥೆ ಮಾಡಿಲ್ಲ. ‘ಆಯೋಜಕರು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿಲ್ಲ. ಹಗಲೆಲ್ಲಾ ಬಿಸಿಲಿನಲ್ಲಿ ನಿಲ್ಲಬೇಕಾಗಿದೆ, ನೆರಳಿನ ವ್ಯವಸ್ಥೆಯೂ ಮಾಡಿಲ್ಲ. ಹತ್ತಿರದಲ್ಲಿ ಯಾವುದೇ ಹೋಟೆಲ್‌, ಅಂಗಡಿಗಳು ಇಲ್ಲ. ಮೂಲಸೌಲಭ್ಯ ಕಲ್ಪಿಸುವಲ್ಲಿ ಆಯೋಜಕರು ವಿಫಲವಾಗಿದ್ದಾರೆ’ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT