ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮೇಲೆ ಹರಿಹಾಯ್ದ ಗ್ರಾಮಸ್ಥರು

ಹಾಗಲವಾಡಿ: ಗ್ರಾಮದ ಕರಿಯಮ್ಮದೇವಿ ದೇವಾಲಯದ ಸಮುದಾಯ ಭವನ ಉದ್ಘಾಟನೆ
Last Updated 4 ನವೆಂಬರ್ 2019, 14:50 IST
ಅಕ್ಷರ ಗಾತ್ರ

ಹಾಗಲವಾಡಿ: ಗ್ರಾಮದ ಕರಿಯಮ್ಮದೇವಿ ದೇವಾಲಯದಲ್ಲಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟನೆ ಸಂದರ್ಭದಲ್ಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ವಿರುದ್ಧ ಗ್ರಾಮಸ್ಥರು ಸೋಮವಾರ ಹರಿಹಾಯ್ದಿದ್ದಾರೆ.

ಶ್ರೀನಿವಾಸ್‌ ಮಾತನಾಡುವಾಗ ಹೇಮಾವತಿ ನೀರು ಹರಿಸುವ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಆಕ್ರೋಶಗೊಂಡ ಗ್ರಾಮಸ್ಥರು ‘ಕೆರೆಗೆ ನೀರು ಹರಿಸಲು ವಿಳಂಬನೀತಿ ಅನುಸರಿಸುತ್ತಿದ್ದು, ವಿನಾಕಾರಣ ರಾಜಕಾರಣ ಬೆರೆಸಿ ನಮ್ಮನ್ನು ಕಡೆಗಣಿಸಿದ್ದೀರಿ’ ಎಂದು ದೂರಿದರು.

ಮಾತಿಗೆ ಮಾತು ಬೆಳೆದು ಶಾಸಕರೊಂದಿಗೆ ವಾಗ್ವಾದ ನಡೆಸಿದ ಕೆಲ ಮುಖಂಡರು, ‘ರಾಜಕಾರಣಕ್ಕೆ ನಮ್ಮನ್ನು ಬಲಿಕೊಡುತ್ತಿದ್ದೀರಿ. ಈ ಕೆರೆಗೆ ನೀರು ಹರಿದರೆ ನಮ್ಮ ಬದುಕು ನಡೆಯುವುದು. ಆದರೆ, ಕಳೆದ 5 ವರ್ಷಗಳಿಂದ ಪೊಳ್ಳು ಭರವಸೆ ನೀಡುತ್ತಿದ್ದೀರಿ’ ಎಂದು ಕಿಡಿಕಾರಿದರು.

‘ಸುಮಾರು 17 ಕಿ.ಮೀ ದೂರ ನಡೆಯಬೇಕಿದ್ದ ನಾಲೆ ಕಾಮಗಾರಿ ಕಳೆದ 10 ವರ್ಷದಿಂದ ಆಮೆಗತಿಯಲ್ಲಿ ಸಾಗಿದೆ. ಕೊನೆಗೂ 15 ಕಿ.ಮೀ.ವರೆಗೆ ಕಾಮಗಾರಿ ಮುಗಿದಿದೆ. ಆದರೆ, ಕೇವಲ 2 ಕಿ.ಮೀ. ದೂರ ಕೆಲಸ ಮಾಡಲು ಸಲ್ಲದ ದ್ವೇಷವನ್ನು ಮುಂದಿಟ್ಟು ರಾಜಕಾರಣ ಮಾಡಲಾಗುತ್ತಿದೆ’ ಎಂದು ಶಾಸಕರ ಮುಂದೆ ಗ್ರಾಮಸ್ಥರು ಕೂಗಾಟ ನಡೆಸಿದರು.

ಆಗ ಸ್ಥಳದಲ್ಲಿದ್ದ ಜೆಡಿಎಸ್‌ ಕಾರ್ಯಕರ್ತರು ಗ್ರಾಮಸ್ಥರ ವಿರುದ್ಧ ಹರಿಹಾಯ್ದರು. ವಾದ ವಿವಾದ ಹೆಚ್ಚಿದಂತೆ ಸಭಿಕರೆಲ್ಲರೂ ನುಗ್ಗಿ ತಳ್ಳಾಟ– ನೂಕಾಟ ನಡೆಸಿ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶಾಸಕರನ್ನು ವೇದಿಕೆಯಿಂದ ಕಾರಿನತ್ತ ಕರೆದೊಯ್ದರು.

ಇದಕ್ಕೂ ಮುನ್ನ ಶಾಸಕರು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಮುಂದಾದರು. ‘ನಾಲೆ ಕಾಮಗಾರಿ ಶೇಕಡ 90ರಷ್ಟು ಮುಗಿದಿದೆ. ದೊಡ್ಡಬಂಡೆ ಅಡ್ಡ ಬಂದಿದ್ದರಿಂದ ಹೆಚ್ಚಿನ ಕೆಲಸ ತೆಗೆದುಕೊಂಡಿದೆ. ಮರಳಿ ₹ 12 ಲಕ್ಷ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದ್ದು, ಬಂಡೆ ತೆಗೆದು ಕೆಲಸ ಮುಂದುವರಿಸಲು ವಿಳಂಬವಾಗಿದೆ. ಈ ತಾಂತ್ರಿಕ ದೋಷದ ಜೊತೆಗೆ ಭೂಮಿ ಬಿಟ್ಟುಕೊಡುವಲ್ಲಿ ಬೆರಳೆಣಿಕೆಯಷ್ಟು ರೈತರು ಅಡ್ಡಿಮಾಡಿದ್ದರು. ಪರಿಹಾರದ ನಂತರ ಭೂ ಅಧಿಕಾರಿಗಳಿಗೆ ಸೂಚಿಸಿದ್ದು, ಬರುವ ಶುಕ್ರವಾರ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದುವ ಭರವಸೆ ನೀಡಿದ ಶಾಸಕರ ಮಾತಿಗೆ ಗ್ರಾಮಸ್ಥರು ಕೊಂಚ ಸಮಾಧಾನಗೊಂಡರು.

ಹೇಮೇ ನೀರು ಹರಿಯದ ಕೆರಗಳಿಗೆ ಯೋಜನೆ

ಎತ್ತಿನಹೋಳೆ ಯೋಜನೆಯಲ್ಲಿ ದೊರೆಯುವ 95 ಎಂಸಿಎಫ್‌ಟಿ ನೀರು ಬಳಕೆಗೆ ಹಾಲವಾಡಿ, ಚೇಳೂರು ಮತ್ತು ನಿಟ್ಟೂರು ಹೊಬಳಿಯಲ್ಲಿ ಹೇಮೇ ನೀರು ಹರಿಯದ ಕೆರಗಳಿಗೆ ಬಳಸಲು ಯೋಜನೆ ಸಿದ್ಧವಾಗಲಿದೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.

ಹಾಗಲವಾಡಿ ಹೋಬಳಿ ಮೊದಲಿನಿಂದಲೂ ಹಿಂದುಳಿದ ಪ್ರದೇಶವಾಗಿತ್ತು, ಈ ಭಾಗಕ್ಕೆ ನೀರಾವರಿ ಯೋಜನೆ ವರವಾಗಲಿದೆ. ಈನಿಟ್ಟಿನಲ್ಲಿ ಬಹುತೇಕ ಕಾಮಗಾರಿ ಮುಗಿದಿದ್ದು, ಹೇಮೆ ಹರಿಸುವ ಕೆಲಸ ಪೂರ್ಣಗೊಳಿಸಿ ಮುಂದಿನ ವರ್ಷ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT