ಬೆರಗುಗೊಳಿಸಿದ ಹಲಸಿನ ಸವಿರುಚಿ ಊಟ

5
ತೋವಿನಕೆರೆಯಲ್ಲಿ ಹಳ್ಳಿಸಿರಿ ಸಂಘಟನೆಯು ಅಯೋಜನೆ, ಸವಿಯೂಟದಲ್ಲಿ ಭಾಗವಹಿಸಿದ ವಿವಿಧ ಭಾಗದ ಜನರು

ಬೆರಗುಗೊಳಿಸಿದ ಹಲಸಿನ ಸವಿರುಚಿ ಊಟ

Published:
Updated:
ಹಲಸಿನ ಹಣ್ಣಿನಲ್ಲಿ ತಯಾರಿಸಿದ ಸವಿರುಚಿ ಊಟ ಮತ್ತು ಖಾದ್ಯಗಳು

ತುಮಕೂರು: ಅಬ್ಬಾ... ಈ ಹಣ್ಣಿನಲ್ಲಿ ಇಷ್ಟೊಂದು ಸವಿರುಚಿ ಅಡಗಿದೆಯೆ? ಬರೀ ಹಣ್ಣು ಮಾತ್ರ ಸವಿದಿದ್ದೇವು. ಇದರಲ್ಲಿ ಇಷ್ಟೊಂದು ಖಾದ್ಯ, ಮೃಷ್ಟಾನ ಭೋಜನ ತಯಾರಿಸಬಹುದು ಎಂಬುದು ಗೊತ್ತಿರಲಿಲ್ಲ. ಇದು ನಿಜವಾಗಲೂ ಸವಿರುಚಿಯೇ . ಹೀಗೆ, ಒಬ್ಬರಲ್ಲ, ಇಬ್ಬರಲ್ಲ ಬಾಯಿ ಚಪ್ಪರಿಸಿ ಊಟ ಸವಿದವರು ಹೇಳಿದ ಮಾತುಗಳಿವು.

ತಾಲ್ಲೂಕಿನ ತೋವಿನಕೆರೆಯಲ್ಲಿ ಕೃಷಿಕ ಪದ್ಮರಾಜ್ ಅವರ ತೋಟದಲ್ಲಿ ಹಲಸಿನ ಉತ್ಪನ್ನ ಪರಿಚಯಿಸುವ ಭಾಗವಾಗಿ ‘ಹಳ್ಳಿಸಿರಿ’ ಸ್ತ್ರೀ ಶಕ್ತಿ ಸಂಘಟನೆಯು ಭಾನುವಾರ ಆಯೋಜಿಸಿದ್ಧ ‘ಹಲಸಿನ ಸವಿರುಚಿ ಊಟ’ ಕಾರ್ಯಕ್ರಮದಲ್ಲಿ ಕಂಡು ಬಂದ ನೋಟವಿದು.

ಹಲಸಿನ ಹೋಳಿಗೆ, ಹಲ್ವಾ, ಬಿರಿಯಾನಿ, ಹಪ್ಪಳ, ಉಪ್ಪಿನಕಾಯಿ, ಸಾಂಬಾರು, ಸೂಪ್, ಬೋಂಡಾ, ಹಲಸಿನ ಮಂಚೂರಿ, ಉಪ್ಪಿನಕಾಯಿ ಹೀಗೆ ತರಹೇವಾರಿ ಖಾದ್ಯಗಳು ಸವಿರುಚಿ ಊಟದ ಭಾಗವಾಗಿದ್ದವು. ಒಂದೊಂದು ಪದಾರ್ಥಕ್ಕೂ ಒಂದೊಂದು ವಿಶಿಷ್ಟ ರುಚಿ , ಹಲಸಿನ ಘಮಲು ಊಟದ ರುಚಿಯನ್ನು ದುಪ್ಪಟ್ಟು ಮಾಡಿತ್ತು.

ಈ ಹಲಸಿನ ವಿಶೇಷ ಸವಿಯೂಟ ಸವಿಯುವುದಕ್ಕಾಗಿಯೇ ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಕಡೆಯಿಂದ ಆಸಕ್ತರು ಕುಟುಂಬ ಸಮೇತರಾಗಿ ಬಂದಿದ್ದರು. ಸಾಲುಗಟ್ಟಿ ನಿಂತು ಭಾನುವಾರ ಮಧ್ಯಾಹ್ನದ ವಿಶೇಷ ಭೋಜನ ಮಾಡಿ ಖುಷಿಪಟ್ಟರು.

ಹಲಸಿನ ಉತ್ಪನ್ನ ಪ್ರಚಾರಕ್ಕೆ ಹಳ್ಳಿಸಿರಿ ಅವಿರತ ಶ್ರಮ:
‘ನಮ್ಮ ಸ್ತ್ರೀ ಸಂಘವು ಈ ಹಲಸಿನಲ್ಲಿ ವಿವಿಧ ಪದಾರ್ಥಗಳನ್ನು ತಯಾರಿಸಿ ಆರ್ಥಿಕ ಸ್ವಾವಲಂಬನೆಗೆ ಹಾಗೂ ಹಲಸಿನ ರೈತರ ಆರ್ಥಿಕ ಚೇತನಕ್ಕೆ ಪ್ರಯತ್ನಿಸುತ್ತಿದೆ. 2012ರಿಂದಲೂ ಈ ಪ್ರಯತ್ನ ಮಾಡಿಕೊಂಡು ಬರುತ್ತಿದೆ ಎಂದು ಹಳ್ಳಿಸಿರಿ ಸಂಘದ ಅಧ್ಯಕ್ಷೆ ಮಂಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಘದಲ್ಲಿ 10ಕ್ಕೂ ಹೆಚ್ಚು ಜನ ಸದಸ್ಯರಿದ್ದು, ಹಲಸಿನಲ್ಲಿ ಏನೇನು ಪದಾರ್ಥ ಮಾಡಬಹುದು ಎಂದು ಚಿಂತನೆ ಮಾಡಿದೆವು. ಒಂದೊಂದೇ ಪ್ರಯೋಗ ಮಾಡಿದಾಗ ಜನರಿಂದ ಉತ್ತಮ ಸ್ಪಂದನೆ ಲಭಿಸಿತು. ಹೀಗಾಗಿ, ಜನರ ಆಸಕ್ತಿ ಮೇರೆಗೆ ಈ ತರಹ ಸವಿರುಚಿ ಊಟ ಆಯೋಜನೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಇದೆ. ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಆದರೆ, ನಮ್ಮ ಸಂಘದ ಆರ್ಥಿಕ ಚೇತರಿಕೆಗೆ ಇದು ಸಾಲದು. ಸಂಘ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಕಾರ್ಯಕ್ರಮಗಳು, ಸಭೆಗಳಿಗೆ ‘ಹಲಸಿನ ಸವಿರುಚಿ ಊಟ’ ವ್ಯವಸ್ಥೆ ಮಾಡಿದರೆ ನಮ್ಮಂತಹ ಸಂಘಟನೆಗಳಿಗೆ ಒಂದಿಷ್ಟು ಸಹಾಯ ಆಗುತ್ತದೆ. ಅವರಿಗೂ ಸತ್ವಯುತ ಮತ್ತು ಸಂಪೂರ್ಣ ಸಾವಯವ ಆಹಾರ ಸವಿದ ತೃಪ್ತಿಯು ಸಿಗುತ್ತದೆ’ ಎಂದು ಹೇಳಿದರು.

24 ಪದಾರ್ಥ ತಯಾರಿಸುವ ಪ್ರಯತ್ನ ಆಗಲಿ

‘ಹಲಸಿನ ಸವಿರುಚಿ ಊಟ ತುಂಬಾ ಚೆನ್ನಾಗಿತ್ತು. ಈ ತರಹದ ಪ್ರಯತ್ನಗಳು ಈ ಭಾಗದಲ್ಲಿ ಆಗಬೇಕು. ಇದರಿಂದ ರೈತರಿಗೆ ಮತ್ತು ಗುಣಮಟ್ಟದ ಆಹಾರ ಸವಿಯಲು ಬಯಸುವವರಿಗೆ ಅನುಕೂಲ ಆಗುತ್ತದೆ’ ಎಂದು ಹಲಸಿನ ಊಟ ಸವಿದ ಅಧೋಕ್ಷಜಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಊರು ಮಂಗಳೂರು. ಅಲ್ಲಿ ನಾವು ಹಲಸಿನಲ್ಲಿ ಊಟಕ್ಕೆ 24 ತರಹದ ಪದಾರ್ಥ ತಯಾರಿಸಲು ಅವಕಾಶವಿದೆ. ಇಲ್ಲಿಯೂ ಅಂತಹ ಪ್ರಯತ್ನಗಳು ಆಗಬೇಕು’ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !