ಶನಿವಾರ, ಜೂನ್ 12, 2021
24 °C
ಮೊದಲ ಹಂತದಲ್ಲಿ ಶಿರಾ, ಕುಣಿಗಲ್ ತಾಲ್ಲೂಕಿಗೆ ಹೇಮಾವತಿ

ಪ್ರತಿ ತಾಲ್ಲೂಕಿಗೆ 10 ದಿನ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಹೇಮಾವತಿ ನಾಲೆಯಿಂದ ಮೊದಲ ಹಂತದಲ್ಲಿ ಶಿರಾ, ಕುಣಿಗಲ್ ತಾಲ್ಲೂಕಿಗೆ ನೀರು ಹರಿಸಲಾಗುತ್ತಿದ್ದು, ಜಿಲ್ಲೆಯ ನಾಲಾ ವ್ಯಾಪ್ತಿಯ ತಾಲ್ಲೂಕುಗಳಿಗೆ ತಲಾ 10 ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಕುರಿತ ವಿಶೇಷ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಈ ವಿಷಯ ತಿಳಿಸಿದರು.

ಗೊರೂರು ಜಲಾಶಯದಲ್ಲಿ 33 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಕಳೆದ ಬಾರಿ ಕಡಿಮೆ ನೀರು ಹರಿದಿದ್ದ ಶಿರಾ, ಕುಣಿಗಲ್ ತಾಲ್ಲೂಕಿಗೆ ಈಗ ಮೊದಲ ಹಂತದಲ್ಲಿ ನೀರು ಹರಿಸಲಾಗುತ್ತಿದೆ. ತಾಲ್ಲೂಕಿಗೆ ಪ್ರವೇಶವಾದ ದಿನದಿಂದ ಲೆಕ್ಕ ಹಾಕಿ 10 ದಿನಗಳ ಕಾಲ ಹರಿಸಲಾಗುವುದು ಎಂದು ಹೇಳಿದರು.

ತಾಲ್ಲೂಕುವಾರು ಹಂಚಿಕೆ ಆಗಿರುವ ನೀರಿಗೆ ಅನುಗುಣವಾಗಿ ವೇಳಾಪಟ್ಟಿ ತಯಾರಿಸುವಂತೆ ಹೇಮಾವತಿ ವಲಯದ ಎಂಜಿನಿಯರ್‌ಗೆ ಸಚಿವರು ಸೂಚಿಸಿದರು. ಅಲ್ಲದೇ ಜಲಾಶಯದಲ್ಲಿ ಮತ್ತೆ ನೀರು ಸಂಗ್ರಹವಾದರೆ 2ನೇ ಬಾರಿ ನೀರು ಹರಿಸಲಾಗುವುದು ಎಂದರು.

ನಾಲೆಯಿಂದ ನೀರು ಹರಿಸಲು ಆರಂಭವಾಗುವ ದಿನದಿಂದ ಮುಕ್ತಾಯದವರೆಗೂ ಕೂಡ ಕುಡಿಯುವ ನೀರಿನ ಕೆರೆಗಳಿಗೆ ಹಾಗೂ ಕುಡಿಯುವ ನೀರು ಯೋಜನೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ಗ್ರಾಮಾಂತರದಲ್ಲಿ ನೀರು ಹರಿಸಿದರೂ ಕೆರೆಗಳು ಸಮರ್ಪಕವಾಗಿ ಭರ್ತಿ ಆಗುತ್ತಿಲ್ಲ. ಮೋಟರ್ ಪಂಪ್‍ಸೆಟ್‍ಗಳು ದುರಸ್ತಿಯಲ್ಲಿವೆ ಎಂದು ಶಾಸಕ ಗೌರಿಶಂಕರ್ ಅವರು ಸಚಿವರ ಗಮನಕ್ಕೆ ತಂದರು. ಗ್ರಾಮಾಂತರದಲ್ಲಿ 15 ದಿನದೊಳಗೆ ಪಂಪ್‍ಸೆಟ್ ದುರಸ್ತಿ ಮಾಡಿಸಿ, ನೀರು ಹರಿಯುವಂತೆ ಮಾಡಬೇಕು ಎಂದು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಸಂಸದ ಜಿ.ಎಸ್ ಬಸವರಾಜ್, ‘ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಳೆದ ಸಾಲಿನಲ್ಲಿ 18.5ರಿಂದ 21 ಟಿಎಂಸಿ ಅಡಿ ನೀರನ್ನು ತುಮಕೂರು ನಾಲೆಯಿಂದ ಜಿಲ್ಲೆಗೆ ಬಳಸಿಕೊಂಡಿದ್ದೇವೆ. ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ’ ಎಂದು ಹೇಳಿದರು.

ಸಂಸದ ಡಿ.ಕೆ.ಸುರೇಶ್, ‘ಮೊದಲ ಹಂತದಲ್ಲಿ ಜಿಲ್ಲೆಯ ಹೇಮಾವತಿ ನಾಲೆಯಿಂದ ತಾಲ್ಲೂಕುವಾರು ಹಂಚಿಕೆ ಆಗಿರುವ ನೀರನ್ನು ಸಮರ್ಪಕವಾಗಿ ಹರಿಸಬೇಕು. ಎಲೆಕ್ಟ್ರಾನಿಕ್ ಗೇಜ್‍ಗಳನ್ನು ಅಳವಡಿಸಬೇಕು’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ‘ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸಲು ಯಾವುದೇ ಅಡ್ಡಿ ಇಲ್ಲ. ಆದರೆ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಎಚ್ಚರವಹಿಸಬೇಕು’ ಎಂದು ತಿಳಿಸಿದರು.

ಸಂಸದ ನಾರಾಯಣಸ್ವಾಮಿ, ಶಾಸಕರಾದ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಡಾ.ರಂಗನಾಥ್, ಮಸಾಲ ಜಯರಾಂ, ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಭಾಗವಹಿಸಿದ್ದರು.

‘ಮಾಜಿ ಸಚಿವರಿಗೆ ಸುಮ್ಮನಿರಲು ಹೇಳಿ’

‘ನಮ್ಮ ಸರ್ಕಾರ ಇದೆ. ಹೀಗಿದ್ದಾಗ ಮಾಜಿ ಸಚಿವರು ಎಲ್ಲ ಕಡೆ ನಾನು ಶಿರಾಕ್ಕೆ ಹೇಮಾವತಿ ನೀರು ಬಿಡಿಸಿದೆ ಎನ್ನುತ್ತಿದ್ದಾರೆ. ಅವರಿಗೆ ಸುಮ್ಮನೆ ಇರಲು ಹೇಳಿ’ ಎಂದು ಟಿ.ಬಿ.ಜಯಚಂದ್ರ ಅವರ ಹೆಸರು ಪ್ರಸ್ತಾಪಿಸದೆ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಅವರ ಈ ಮಾತುಗಳಿಂದ ನೀರಾವರಿ ಸಲಹಾ ಸಮಿತಿಗೆ ಬೆಲೆ ಇಲ್ಲದಂತೆ ಆಗುತ್ತದೆ ಎಂದರು.

ಸೆ. 23ಕ್ಕೆ ಪ್ರವಾಸಿ ಕಿರು ಪುಸ್ತಕ ಬಿಡುಗಡೆ

ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯಲು ಸುಂದರ ತಾಣಗಳ ವಿಡಿಯೊ ತುಣುಕು, ತಾಣಗಳ ಮಾಹಿತಿಯುಳ್ಳ ಕಿರು ಪುಸ್ತಕಗಳನ್ನು ಸಿದ್ಧಪಡಿಸಿದೆ. ಸೆ. 23ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ ಕುಮಾರ್ ತಿಳಿಸಿದರು.

ಪ್ರವಾಸಿ ತಾಣಗಳಾದ ಅರಳಗುಪ್ಪೆ, ಮಾರ್ಕೋನಹಳ್ಳಿ ಜಲಾಶಯ, ಗೋಡೆಕೆರೆ ದೇವಾಲಯದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಮಾಡುವುದರಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯಬಹುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು