ಸೋಮವಾರ, ಜೂನ್ 21, 2021
29 °C
ಲಾಕ್‌ಡೌನ್‌: ಹೂವಿಗಿಲ್ಲ ಬೇಡಿಕೆ

ಮಣ್ಣು ಪಾಲಾಗುತ್ತಿದೆ ಹೂವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ರೈತರು ಬೆಳೆದ ಹೂವು, ಹಣ್ಣು, ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ದೊರೆಯದೆ ತಾಲ್ಲೂಕಿನ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ರೈತ ರಾಮಚಂದ್ರು ಅವರು ನಾಲ್ಕು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಚೆಂಡು ಹೂವು ಬೆಳೆದಿದ್ದಾರೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಹೂವಿನ ಬೆಲೆ ಕುಸಿದಿದೆ. ಹೂವುಗಳನ್ನು ಕೊಯ್ದು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟದ ಸುಳಿಯಲ್ಲಿ ಸಿಕ್ಕಿದ್ದಾರೆ.

ಕಳೆದ ವರ್ಷವು ಲಾಕ್‌ಡೌನ್ ಸಂದರ್ಭದಲ್ಲಿ ಇದೇ ರೀತಿ ನಷ್ಟ ಅನುಭವಿಸಿದ್ದ ರೈತ ರಾಮಚಂದ್ರು ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಈ ಬಾರಿಯೂ ಸಂಕಷ್ಟ ಎದುರಾಗಿದ್ದು, ಜಮೀನಿನಲ್ಲಿ ಬೆಳೆದಿದ್ದ ಚಂಡು ಹೂವುಗಳನ್ನು ಖರೀದಿಸುವವರು ಇಲ್ಲದ ಕಾರಣ ಟ್ರ್ಯಾಕ್ಟರ್‌ನಲ್ಲಿ ಹೂವಿನ ಸಮೇತ ಉಳುಮೆ ಮಾಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಬಾರಿ ಸರ್ಕಾರ ಹೂವು ಬೆಳೆದು ನಷ್ಟ ಅನುಭವಿಸಿದ ರೈತರಿಗೆ ನೆರವು ನೀಡುವ ಯೋಜನೆ ಜಾರಿಗೊಳಿಸಿತ್ತಾದರೂ ಈವರೆಗೂ ಪರಿಹಾರದ ಹಣ ರೈತರ ಕೈಸೇರಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಂಸಾರದ ನಿರ್ವಹಣೆಗೆ ಹೂವಿನ ಕೃಷಿಯನ್ನೇ ನಂಬಿಕೊಂಡಿದ್ದ ರೈತ ರಾಮಚಂದ್ರು ಬೆಳೆದು ನಿಂತಿದ್ದ ಹೂವನ್ನು ಕೇಳುವವರಿಲ್ಲದೆ ನಿತ್ಯ ತೋಟವನ್ನು ನೋಡಿ ಬೇಸತ್ತು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿಸಿ ಮಣ್ಣು ಪಾಲು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಆಳುಗಳು ಸಿಗದೆ ಕಷ್ಟಪಟ್ಟು ಭೂಮಿ ಉಳುಮೆ ಮಾಡಿಸಿ ಕಳೆ ತೆಗೆಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕೆ.ಜಿ.ಗೆ ₹ 2ರಂತೆ ಕೇಳುತ್ತಾರೆ. ಎಲ್ಲ ಖರ್ಚುಗಳನ್ನು ಲೆಕ್ಕ ಹಾಕಿದರೆ ಹೂವು ಕೀಳುವುದೇ ಬೇಡ ಎಂದು ಬೇಸತ್ತು ಉತ್ತಮವಾಗಿ ಬೆಳೆದು ನಿಂತಿದ್ದ ಚಂಡು ಹೂವಿನ ತೋಟವನ್ನು ಸಂಪೂರ್ಣವಾಗಿ ಉಳುಮೆ ಮಾಡಿಸಿದ್ದಾರೆ.

ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ರೈತರು ಬೆಳೆದ ಉತ್ಪನ್ನಗಳು ಹಾಳಾಗದಂತೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತ ರಾಮಚಂದ್ರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.