ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರದ ಸಾರ ಕಸಿದ ಕೊರೊನಾ ಸೋಂಕು

ಭರವಸೆಯ ಬೆಳಕಿಗಾಗಿ ಕಾಯುತ್ತಿರುವ ಕುಟುಂಬ
Last Updated 20 ಜೂನ್ 2021, 16:25 IST
ಅಕ್ಷರ ಗಾತ್ರ

ಕುಣಿಗಲ್: ಚಲುವಾದ ಸಂಸಾರದ ಚಲುವರಾಜು ಕೋವಿಡ್‌ಗೆ ಬಲಿಯಾದ ನಂತರ ಸರಸ್ವತಿಯವರ ಸಂಸಾರದಲ್ಲಿ ಸಾರವೇ ಇಲ್ಲದಂತಾಗಿದೆ. ಭವಿಷ್ಯದ ಬದುಕು ದುಸ್ತರವಾಗಿದೆ. ಭರವಸೆಯ ಬೆಳಕು ಮೂಡುವುದೇ ಎಂದು ಕಾಯುತ್ತಿದ್ದಾರೆ.

ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿಯಲ್ಲಿ ಅಲ್ಪ ಜಮೀನಿನ ಜತೆ ಚಿಕ್ಕದೊಂದು ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಲೇ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಸಲುಹುತ್ತಿದ್ದ ಚಲುವರಾಜು ಕಳೆದ ತಿಂಗಳು ಕೋವಿಡ್‌ಗೆ ಬಲಿಯಾದ ನಂತರ ಸರಾಗವಾಗಿ ಓಡುತ್ತಿದ್ದ ಬದುಕಿನ ಬಂಡಿಯ ಒಂದು ಚಕ್ರ ಕಳಚಿಬಿದ್ದಿದೆ.

ಕಾರ್ಯಗಳು ಮುಗಿದ ನಂತರ ಸಿಂಗೋನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾದ ಜ್ಯೋತಿ (ಹತ್ತನೆ ತರಗತಿ), ಸೌಮ್ಯಾ (7ನೇ ತರಗತಿ) ಅವರ ಉಜ್ವಲ ಭವಿಷ್ಯಕ್ಕಾಗಿ ತಾಯಿ ಸರಸ್ವತಿ ತಮ್ಮ ದುಃಖ ನುಂಗಿಕೊಂಡು ಪುನಃ ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಾರ ಪ್ರಾರಂಭಿಸಿದ್ದಾರೆ. ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದರೂ ದಿನಕಳೆದಂತೆ ಬದುಕಿನಲ್ಲಿ ಭರವಸೆಯ ಬೆಳಕು ಮೂಡುತ್ತಿರುವುದು ಸಮಾಧಾನ ತಂದಿದೆ .

ಇಬ್ಬರೂ ಹೆಣ್ಣುಮಕ್ಕಳಾಗಿರುವುದರಿಂದ ಭಾಗ್ಯಲಕ್ಷ್ಮಿ ಬಾಂಡ್ ಇದೆ. ತಂದೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆಯ ಹಣ ಮಕ್ಕಳ ಖಾತೆಗೆ ಬರುವುದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಂಕಷ್ಟದ ಸಮಯದಲ್ಲಿ ಪರಿಹಾರದ ಹಣ ನೀಡುವ ವ್ಯವಸ್ಥೆ ಮಾಡವ ಬಗ್ಗೆ ಕ್ರಮಕೈಗೊಳ್ಳುವಂತೆ ತಾಯಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿಯೇ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿರುವರು, ಎಲ್ಲರಿಗೂ ಮಾನಸಿಕ ಸ್ಥೈರ್ಯ ತುಂಬುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ. ಬಹುತೇಕ ಮೃತರ ಸಂಬಂಧಿಗಳು ತಮ್ಮ ಕುಟುಂಬಸ್ಥರ ಮರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗಿಲ್ಲ. ಪಡೆದಿದ್ದರೂ ಕೋವಿಡ್‌ನಿಂದಾಗಿ ಮೃತಪಟ್ಟ ದಾಖಲೆ ಇಲ್ಲವಾಗಿದೆ. ಅಗತ್ಯ ದಾಖಲೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ತಕ್ಕ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯವರು ಸಕಾಲದಲ್ಲಿ ಪಡೆದು ತಡಮಾಡದೆ ವಿತರಣೆಗೆ ಕ್ರಮ ತೆಗೆದುಕೊಳ್ಳಲು ವಾಣಿಗೆರೆ ದಯಾಭವನದ ರಮೇಶ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT