ಬುಧವಾರ, ಅಕ್ಟೋಬರ್ 16, 2019
28 °C

ಸೋಲುಂಡ ಕ್ಷೇತ್ರಕ್ಕೆ ಎಚ್‌.ಡಿ.ದೇವೇಗೌಡರ ಮೊದಲ ಭೇಟಿ

Published:
Updated:
Prajavani

ತುಮಕೂರು: ‘ರಾಜಕೀಯದಲ್ಲಿ ಸೋಲು–ಗೆಲುವು ದೊಡ್ಡ ವಿಷಯವಲ್ಲ. ಅದೆಲ್ಲ ಬದುಕಿನಲ್ಲಿ ಬಂದು ಹೋಗುತ್ತದೆ. ನನ್ನ ಸೋಲು ದೈವದ ಆಟ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ವಿಶ್ಲೇಷಣೆ ಮಾಡಿದರು.

ಲೋಕಸಭಾ ಚುನಾವಣೆಯ ಸೋಲಿನ ಬಳಿಕ ತುಮಕೂರಿಗೆ ಮೊದಲ ಬಾರಿ ಬಂದಿದ್ದ ಅವರು ‘ಜೆಡಿಎಸ್‌ ಕಾರ್ಯಕರ್ತರ ಸಮಾವೇಶ’ದಲ್ಲಿ ಮಾತನಾಡಿದರು.

ಸೋಲಿನ ಬಳಿಕ ನನ್ನ ನೈತಿಕ ಬಲ ಕುಗ್ಗಿಲ್ಲ. ಹೋರಾಟದ ಮನಸ್ಥಿತಿ ಇನ್ನೂ ಇದೆ. ವೇಳಾಪಟ್ಟಿ ಹಾಕಿಕೊಂಡು ತುಮಕೂರಿನ ಪ್ರತಿ ತಾಲ್ಲೂಕನ್ನು ಸುತ್ತುತ್ತೇನೆ. ಜನರ ಕಷ್ಟ–ಸುಖ ಆಲಿಸುತ್ತೇನೆ. ಅವುಗಳನ್ನು ಆಡಳಿತದಲ್ಲಿರುವ ಯಡಿಯೂರಪ್ಪ ಅವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ಲೋಕಸಭೆಯ ಕೊನೆಯ ಅಧಿವೇಶನದಲ್ಲಿಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಿಸಿದ್ದೆ. ಸಂಸತ್ತಿನ ಆವರಣದಲ್ಲಿ ಎದುರಾದ ಎಲ್ಲ ಪಕ್ಷಗಳ ಮುಖಂಡರು ‘ನಿಮ್ಮಂತ ನಾಯಕರು ಸಂಸತ್ತಿನಲ್ಲಿ ಇರಬೇಕು’ ಎಂದು ಒತ್ತಾಯಿಸಿದರು. ಕಾರ್ಯಕರ್ತರ ಇಚ್ಛೆಯೂ ನಾನು ಗೆಲ್ಲಬೇಕು ಎಂದಿತ್ತು. ಸೋತಿದ್ದಕ್ಕೆ ನಾನು ಕುಪಿತನಾಗಿಲ್ಲ. ಬೇಸರ ಮಾಡಿಕೊಂಡಿಲ್ಲ ಎಂದು ಹೇಳಿದರು.

ಪಕ್ಷಕ್ಕಾಗಿ ಪ್ರಾಣ ಕೊಡುವ ಕಾರ್ಯಕರ್ತರು ಇದ್ದಾರೆ. ನಿಂತಿರುವ 15 ಚುನಾವಣೆಗಳಲ್ಲಿ ಏಳು–ಬೀಳು ಕಂಡಿದ್ದೇನೆ. ಎಲ್ಲವೂ ಭಗವಂತನ ಆಟ ಎಂದು ನಿಟ್ಟುಸಿರು ಬಿಟ್ಟರು.

6.90 ಲಕ್ಷ ಜನರು ನನಗೆ ಮತ ನೀಡಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಸೋತೆನೆಂದು ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ನಿಲ್ಲಿಸುವುದಿಲ್ಲ ಎಂದರು.

ಅಧಿಕಾರ ಬರುತ್ತೆ, ಹೋಗುತ್ತೆ. ಇನ್ನೊಂದು ಚುನಾವಣೆ ಬರುವುದು ನಿಶ್ಚಿತ. ಎಲ್ಲರು ಪಕ್ಷವನ್ನು ತಾಯಿಯಂತೆ ಕಾಣೋಣ. ರಾಜ್ಯದಲ್ಲಿ ಹಲವಾರು ಜನರು ಪಕ್ಷಗಳನ್ನು ಕಟ್ಟಿದರು. ಆ ಪಕ್ಷಗಳು ಹೆಚ್ಚು ವರ್ಷ ಇರಲಿಲ್ಲ. ನಮ್ಮ ಪಕ್ಷ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನೀವು ಮತ್ತಷ್ಟು ಕ್ರಿಯಾಶೀಲರಾಗಿ ಶ್ರಮಿಸಿ ಎಂದು ಕರೆ ನೀಡಿದರು.

ವಸತಿ ನಿಲಯಕ್ಕೆ ಶಂಕುಸ್ಥಾಪನೆ: ಭೈರವಿ ಮಹಿಳಾ ಸಂಘಕ್ಕೆ ಟೂಡಾದಿಂದ ವರ್ತುಲ ರಸ್ತೆಯ ಚಿದಾನಂದ ಬಡಾವಣೆಯಲ್ಲಿ ಮಂಜೂರು ಆಗಿರುವ ನಿವೇಶನದಲ್ಲಿ ನಿರ್ಮಿಸಲು ಯೋಜಿಸಿರುವ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಎಚ್‌.ಡಿ.ದೇವೇಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದರು.

‘ಅನಾಥವಾಗಿದೆ ಕರುನಾಡು’

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ದೇವೇಗೌಡರು ಲೋಕಸಭೆಯಲ್ಲಿ ಇದ್ದಿದ್ದರೆ, ಮೋದಿ ಅವರು ಗೌಡರನ್ನು ನೋಡಿದಾಗ ಕರ್ನಾಟಕ ನೆನಪಾಗುತ್ತಿತ್ತು ಎಂದರು.

ದೇವೇಗೌಡ, ಖರ್ಗೆ ಅವರನ್ನು ಸೋಲಿಸಿ ಕರ್ನಾಟಕ ನಿಜಕ್ಕೂ ಅನಾಥವಾಗಿದೆ. ರಾಜ್ಯದ ಸಂಕಷ್ಟದ ಧ್ವನಿಯನ್ನು ಲೋಕಸಭೆಯಲ್ಲಿ ಕೇಳಿಸುವ ನಾಯಕರು ಇಲ್ಲ. ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಅವರಂತವರು ಅಪ್ರಬುದ್ಧ, ಉದ್ಧಟತನದ ಮಾತು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಬೇಸರಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಇದ್ದರೆ ದಿನಾಲು ಯುಗಾದಿ, ದೀಪಾವಳಿಯ ವಾತಾವರಣ ಇರುತ್ತೆ. ಪ್ರಗತಿ ವೇಗ ಹೆಚ್ಚುತ್ತೆ ಎಂಬ ಭಾಷಣ ಬಿಗಿದರು. ಮೋದಿ ರಾಜ್ಯಕ್ಕೆ ಎರಡು ರೂಪಾಯಿ ಬಿಡುಗಡೆ ಮಾಡಿಲ್ಲ. ಹಸಿವಿದ್ದಾಗಲೇ ಊಟ ಇಕ್ಕಬೇಕು ಸ್ವಾಮಿ. ನಿರಾಶ್ರಿತರಿಗೆ ಅನ್ನ, ಆಶ್ರಯ ಕೊಡುವ ಬದಲು ಸಬೂಬು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

*

‘ಅಪ್ಪ–ಮಗ ಇಬ್ಬೂರು ಕಳ್ಳರು’
ತುಮಕೂರಿನ ಆಡಳಿತ ಹಿಡಿದಿರುವ ಅಪ್ಪ–ಮಗ ಇಬ್ಬೂರು ಕಳ್ಳರು ಎಂದು ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಜಿ.ಎಸ್‌.ಬಸವರಾಜು ಮತ್ತು ಜಿ.ಬಿ.ಜ್ಯೋತಿಗಣೇಶ್‌ ಹೆಸರು ಉಲ್ಲೇಖಿಸದೆಯೇ ಆರೋಪಿಸಿದರು.

ಟಿ.ಭೂಬಾಲನ್‌ ನಂತಹ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿ, ಅಕೌಂಟೆಂಟ್‌ ಒಬ್ಬರನ್ನು ಪಾಲಿಕೆಯಲ್ಲಿ ತಂದು ಕೂರಿಸಿದ್ದಾರೆ. ಗಾಂಧಿನಗರದ ಗುಡಿಯಲ್ಲಿ ಕಪ್ಪ ಕಾಣಿಕೆ ಕೊಟ್ಟು, ಅಧಿಕಾರಿಗಳು ವರ್ಗವಾಗಿ ಬರುತ್ತಿದ್ದಾರೆ. ಆಡಳಿತ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಖಾಲಿ ಜಮೀನುಗಳನ್ನು ಕಬಳಿಸುವುದೇ ಅಪ್ಪ–ಮಗನ ಕೆಲಸ. ಕೋತಿತೋಪಿನಲ್ಲಿ ಇದ್ದ ತಿಗಳರ ಸಮುದಾಯದ 5 ಎಕರೆ ಜಮೀನನ್ನು ನುಂಗಿದರು. ಈಗ ಅದೇ ಜಾಗವನ್ನು ಪ್ರತಿ ಚದರ ಅಡಿಗೆ ₹ 4,000 ದರದಂತೆ ಮಾರಾಟ ಮಾಡುತ್ತಿದ್ದಾರೆ. ದೇವೇಗೌಡರನ್ನು ಸೋಲಿಸಿ, ಇಂತವರನ್ನು ಗೆಲ್ಲಿಸಿದ್ದೇವೆ. ನಮಗೆ ನಿಜಕ್ಕೂ ಮಾನ–ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಕಿಡಿಕಾರಿದರು.
*

‘ಯಡಿಯೂರಪ್ಪಗೆ ತಾಕತ್ತು ಇಲ್ಲ’
ಅಮಿತ್‌ ಶಾ, ಮೋದಿ ಮುಂದೆ ನಿಂತರೆ ಯಡಿಯೂರಪ್ಪ ಉಚ್ಚೆ ಹುಯ್ದುಕೊಳ್ತಾರೆ. ಪರಿಹಾರಕ್ಕೆ ಒತ್ತಾಯಿಸುವ ತಾಕತ್ತು ಯಡಿಯೂರಪ್ಪರಿಗೆ ಇಲ್ಲ. ಇಂತಹ ವ್ಯವಸ್ಥೆ ನಮಗೆ ಬೇಕಿತ್ತಾ. ದೇವೇಗೌಡರಂತಹ ಸಮರ್ಥರನ್ನು ಚುನಾಯಿಸಬೇಕಿತ್ತು ಎಂದು ಈಗ ಜನರಿಗೆ ಮನವರಿಕೆ ಆಗುತ್ತಿರಬಹುದು ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಹೇಳಿದರು.

ಶಾಸಕರನ್ನು ಕದ್ದು ವಿಶೇಷ ವಿಮಾನದಲ್ಲಿ ಮುಂಬೈಗೆ ಹೊಯ್ದವರು ಯಾರಂತ ಎಲ್ಲರಿಗೂ ಗೊತ್ತಿದೆ. ಅಂತಹ ಕಳ್ಳರನ್ನು ಕುರಿ ಕಾಯಲು ಹಚ್ಚಿದ್ದೇವೆ ಎಂದರು.

*
ಯಡಿಯೂರಪ್ಪ ಮಗ ವಿಜಯೇಂದ್ರ ವರ್ಗಾವಣೆಯ ಅಂಗಡಿ ತೆರೆದಿದ್ದಾರೆ. ಅಲ್ಲಿ ಇಂತಿಂತ ಹುದ್ದೆಗೆ ಇಷ್ಟಿಷ್ಟು ದರ ನಿಗದಿಯಾಗಿದೆ. ಅಲ್ಲಿ ಪಾವತಿ ಆದರೆ ವರ್ಗಾವಣೆಗೆ ಸಿ.ಎಂ. ಸಹಿ ಬೀಳುತ್ತದೆ.
-ಎಸ್‌.ಆರ್.ಶ್ರೀನಿವಾಸ್‌, ಶಾಸಕ

Post Comments (+)