ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ ತಂದ ಅವಾಂತರ- ಎರಡು ದಶಕದ ನಂತರ ಅಮಾನಿಕೆರೆ ಕೋಡಿ

Last Updated 20 ನವೆಂಬರ್ 2021, 8:39 IST
ಅಕ್ಷರ ಗಾತ್ರ

ತುಮಕೂರು: ಕಳೆದ ಎರಡು ದಿನಗಳಿಂದ ವರುಣನ ಆರ್ಭಕ್ಕೆ ಜನರು ತತ್ತರಿಸಿದ್ದು, ಗುರುವಾರ ಇಡೀ ರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಎರಡು ದಶಕಗಳ ನಂತರ ಅಮಾನಿಕೆರೆ ಕೋಡಿ ಹರಿದಿದೆ.

ನಗರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ಸಾಮಗ್ರಿಗಳು ನೀರು ಪಾಲಾಗಿವೆ. ಕೋತಿ ತೋಪಿನ ಆರ್.ಟಿ.ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರು ರಾತ್ರಿಯೆಲ್ಲಾ ನೀರನ್ನು ಹೊರ ಹಾಕುವಲ್ಲಿ ನಿರತರಾಗಿದ್ದರು. ಒಮ್ಮೆಲೆ ಅಮಾನಿ ಕೆರೆ ಭಾಗಕ್ಕೆ ನೀರು ಹರಿದು ಬಂದಿದ್ದು, ಎಲ್ಲವೂ ಕೆರೆ ಸೇರಲಾರದೆ ಮನೆಗಳಿಗೆ ನುಗ್ಗಿದೆ. ರಾಯಕಾಲುವೆ ಭರ್ತಿಯಾಗಿ, ಚರಂಡಿ ಕಟ್ಟಿಕೊಂಡುಹೊರಬಂದ ನೀರು ಮನೆ ಸೇರಿಕೊಂಡು ಜನರು ಇಡೀ ರಾತ್ರಿ ನಿದ್ದೆ ಮಾಡದಂತೆ ಮಾಡಿದೆ.

ಕೋತಿತೋಪಿನ ಕೆಇಬಿ ಸಮುದಾಯ ಭವನದ ಎದುರಿನ ರಸ್ತೆ ಕೆರೆಯಂತಾಗಿತ್ತು. ಶುಕ್ರವಾರ ಬೆಳಿಗ್ಗೆ ಕೆಲ ಸಮಯ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ನಿಧಾನವಾಗಿ ನೀರು ಖಾಲಿಯಾದಂತೆ ರಸ್ತೆಯಲ್ಲಿ ವಾಹನಗಳುಸಂಚರಿಸಿದವು.

ಪುರ್‌ಹೌಸ್ ಕಾಲೊನಿ, ಶಾಂತಿ ನಗರ, ಅಳಶೆಟ್ಟಿ ಕೆರೆಪಾಳ್ಯ, ನಜರಾಬಾದ್, ಇತರ ಪ್ರದೇಶಗಳಲ್ಲೂ ಮನೆಗಳಿಗೆ ನೀರು ನುಗ್ಗಿತ್ತು. ಸದಾಶಿವನಗರ ಮುಖ್ಯರಸ್ತೆ ತುಂಬಿ ಹರಿಯಿತು. ಸೊಂಟ ಮಟ್ಟ ನೀರು ಹರಿದು ಹೋಯಿತು. ಹೇಮಾವತಿ ನಾಲಾ ವಲಯ ಕಚೇರಿ ಕೆರೆಯಂತಾಗಿತ್ತು. ನಗರದ ತಗ್ಗು ಪ್ರದೇಶಗಳು, ಪಾರ್ಕ್‌ಗಳಲ್ಲಿ ನೀರು ಸಂಗ್ರಹವಾಗಿತ್ತು. ಬೆಳಿಗ್ಗೆ ಎದ್ದು ಬಂದವರಿಗೆ ನಗರ ನೀರಿನಲ್ಲಿ ಮುಳುಗಿದಂತೆಭಾಸವಾಯಿತು.

ಕೆರೆ ಭರ್ತಿ: ಜಿಲ್ಲೆಯಲ್ಲಿ ಎರಡು ದಶಕದ ನಂತರ ಬಹುತೇಕ ಕೆರೆಗಳು ಭರ್ತಿಯಾಗಿವೆ. ನಗರ ಅಮಾನಿಕೆರೆ ಸಹ ಭರ್ತಿಯಾಗಿರುವುದು ವಿಶೇಷ. ಆದರೆ ಕೆರೆ, ಏರಿ, ಕಾಲುವೆ ದುರಸ್ತಿ ಮಾಡಿಸದೆ ಬಂದ ನೀರು ಅಷ್ಟೇ ವೇಗವಾಗಿ ಖಾಲಿಯಾಗುತ್ತಿದೆ. ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲೆಯವರೇ ಆಗಿದ್ದು, ಕೆರೆಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಮಳೆಗಾಲಕ್ಕೂ ಮುನ್ನ ಸರಿಪಡಿಸಿದ್ದರೆ ಇಂತಹ ಸಮಯದಲ್ಲಿ ಉಪಯೋಗಕ್ಕೆ ಬರುತಿತ್ತು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರಾಗಿ, ಶೇಂಗಾವಷ್ಟೇ ಅಲ್ಲದೆ ಬಹುತೇಕ ಬೆಳೆಗಳಿಗೆ ಹಾನಿಯಾಗಿದೆ. ತರಕಾರಿ, ಹೂವಿನ ಬೆಳೆ ನೆಲ ಕಚ್ಚಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಷ್ಟ ಅಂದಾಜು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಅಡಕೆ ನೀರುಪಾಲು: ಗುಬ್ಬಿ ತಾಲ್ಲೂಕಿನ ಉದ್ದೇಹೊಸಕೆರೆಗ್ರಾಮದ ಕೆರೆ ಸಮೀಪ ಒಣಗಿ ಹಾಕಿದ್ದ 5 ಕ್ವಿಂಟಲ್‌ ಅಡಕೆ ನೀರುಪಾಲಾಗಿದೆ. ನಿರಂತರ ಮಳೆಯಪರಿಣಾಮ ಕೆರೆಗೆ ಭಾರಿ ಪ್ರಮಾಣದ ನೀರು ಹರಿದು ಬಂದಿತು. ಹೀಗಾಗಿ ಕೆರೆ ದಡದಲ್ಲಿ ಒಣಗಿ ಹಾಕಿದ್ದ ಅಡಕೆ ನೀರು ಪಾಲಾಯಿತು ಎಂದು ರೈತ ಯು.ಎಸ್‌.ಸೋಮಶೇಖರ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT