ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದೇ ರಾತ್ರಿಗೆ ತುಂಬಿ ಹರಿದ ಜೀವ ನದಿಗಳು 

ಮನೆಗಳಿಗೆ ನುಗ್ಗಿ ಮಳೆ ನೀರು: ಆತಂಕಗೊಂಡ ನಿವಾಸಿಗಳು
Published : 20 ಆಗಸ್ಟ್ 2024, 14:16 IST
Last Updated : 20 ಆಗಸ್ಟ್ 2024, 14:16 IST
ಫಾಲೋ ಮಾಡಿ
Comments

ಕೊರಟಗೆರೆ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಮಳೆಗೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ತಗ್ಗು ಪ್ರದೇಶಗಳು ಜಲಾವೃತಗೊಂಡವು.

ರಾತ್ರಿ 8 ಗಂಟೆಗೆ ಪ್ರಾರಂಭವಾದ ಮಳೆ ರಾತ್ರಿ 12 ಗಂಟೆವರೆಗೂ ಒಂದೇ ಸಮನೆ ಬಿದ್ದಿದ್ದರಿಂದ ಪಟ್ಟಣದ ಶಿವಗಂಗಾ ಚಿತ್ರ ಮಂದಿರದ ಹಿಂಭಾಗದ ಬೀದಿ ಹಾಗೂ ಪಕ್ಕದ ಬೀದಿಗಳ ಮನೆಗಳಿಗೆ ನೀರು ನುಗ್ಗಿತ್ತು.

ಇಲ್ಲಿನ ಮುಖ್ಯ ರಸ್ತೆ ಹಾಗೂ ಪಟ್ಟಣದ ಹೊರವಲಯದ ಊರ್ಡಿಗೆರೆ ಕ್ರಾಸ್ ಬಳಿಯ ರಸ್ತೆಯಲ್ಲಿ ಮಳೆ ನೀರು ಹೆಚ್ಚಾಗಿ ಹರಿದ ಕಾರಣ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು.

ದೀಪಂ ಟೆಕ್ಸ್‌ಟೈಲ್ ಕಟ್ಟಡ ನೆಲ ಅಂತಸ್ತು ಸಂಪೂರ್ಣ ಜಲಾವೃತವಾಗಿತ್ತು. ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ರಸ್ತೆ ಹಾಗೂ ಬೀದಿ ಜಲಾವೃತಗೊಂಡಿತ್ತು. ಶಿವಗಂಗಾ ಚಿತ್ರ ಮಂದಿರದ ಸುತ್ತಮುತ್ತಲ ಅಂಗಡಿ, ಮನೆಗಳು ರಾತ್ರಿ ಇಡೀ ನೀರಿನಿಂದ ತುಂಬಿದ್ದವು. ಮನೆಗಳಿಗೆ ಏಕಾಏಕಿ ನುಗ್ಗಿದ ನೀರನ್ನು ಕಂಡು ನಿವಾಸಿಗಳು ಅಚ್ಚರಿಗೊಂಡರು. ವಿದ್ಯುತ್ ಕೂಡ ಕಡಿತವಾಗಿದ್ದರಿಂದ ಏನು ನಡೆಯುತ್ತಿದೆ ಎನ್ನುವುದೂ ತಿಳಿಯದೆ ಇಲ್ಲಿನ ಜನ ಕೆಲಕಾಲ ಆತಂಕಕ್ಕೆ ಒಳಗಾದರು.

ಸಿಮೆಂಟ್, ಗೊಬ್ಬರ, ದಿನಸಿ, ಮೊಬೈಲ್ ಅಂಗಡಿ, ಮನೆಗಳಗೆ ನೀರು ನುಗ್ಗಿದ ಕಾರಣ ನಷ್ಟ ಉಂಟಾಗಿತ್ತು. ಬೋಡಬಂಡೇನಹಳ್ಳಿ, ಮಾವತ್ತೂರು, ಸಾಗ್ಗೆರೆ ಸೇರಿದಂತೆ ಕೆಲ ಗ್ರಾಮಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಕೆಲ ಗ್ರಾಮಗಳಲ್ಲಿ ಹೊಲಗಳಿಗೆ ನೀರು ನುಗ್ಗಿ ಬಾಳೆ, ರಾಗಿ, ಮುಸುಕಿನ ಜೋಳ, ಶೇಂಗಾ ಬೆಳೆಗಳು ಹಾಳಾಗಿವೆ.

ಜಂಪೇನಹಳ್ಳಿ, ಗೌಡನಕೆರೆ, ಅಗ್ರಹಾರ ಕೆರೆ ಸೇರಿದಂತೆ ಕಳೆದ ವರ್ಷ ನೀರಿಲ್ಲದೆ ಒಣಗಿದ್ದ ಬಹುತೇಕ ಸಣ್ಣಪುಟ್ಟ ಕೆರೆಗಳು ಒಂದೇ ರಾತ್ರಿಗೆ ಬಿದ್ದ ಮಳೆಗೆ ಕೋಡಿ ಹರಿದಿವೆ. ನೀರಿಲ್ಲದೆ ಒಣಗಿದ್ದ ತಾಲ್ಲೂಕಿನ ಸುವರ್ಣಮುಖಿ, ಜಯಮಂಗಲಿ, ಗರುಡಾಚಲ ನದಿ ಒಂದೇ ದಿನದಲ್ಲಿ ಧುಮ್ಮಿಕ್ಕಿ ಹರಿದವು.

ಇದೇ ರೀತಿ ಇನ್ನೊಂದು ದಿನ ಮಳೆಯಾದರೆ ತಾಲ್ಲೂಕಿನ ದೊಡ್ಡಕೆರೆಗಳಾದ ತುಂಬಾಡಿಕೆರೆ, ಮಾವತ್ತೂರು, ತೀತಾ ಜಲಾಶಯ, ಚಿಕ್ಕಾವಳ್ಳಿ ಕೆರೆ ಸೇರಿದಂತೆ ಇತರೆ ದೊಡ್ಡ ಕೆರೆಗಳೂ ಕೂಡ ತುಂಬಿ ಕೋಡಿ ಹರಿಯಲಿವೆ ಎಂದು ಜನ ಅಭಿಪ್ರಾಯಪಟ್ಟರು.

ಅಗ್ನಿಶಾಮಕ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದೆ ರಾತ್ರಿ ಇಡೀ ಸುರಕ್ಷತ ಕ್ರಮ ಕೈಗೊಂಡಿದ್ದರು.

ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಬೀದಿ ಜಲಾವೃತವಾಗಿತ್ತು 
ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಬೀದಿ ಜಲಾವೃತವಾಗಿತ್ತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT