ತುಮಕೂರು/ಮಡಿಕೇರಿ: ತುಮಕೂರು ಜಿಲ್ಲೆಯ ಕೊರಟಗೆರೆ ಭಾಗದಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದೆ. ಸುವರ್ಣಮುಖಿ, ಜಯಮಂಗಲಿ ನದಿಗಳು ತುಂಬಿ ಹರಿಯುತ್ತಿವೆ. ಕೊಡಗು ಜಿಲ್ಲೆಯ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ಮಡಿಕೇರಿ ನಗರದಲ್ಲಿ ಸಾಧಾರಣ ಮಳೆಯಾಗಿದೆ.
ಬೆಟ್ಟದ ಭಾಗದಿಂದ ಹರಿದು ಹೋಗಲು ಮಾಡಿದ್ದ ಕಾಲುವೆ ಕಟ್ಟಿಕೊಂಡು ಕೊರಟಗೆರೆ ಪಟ್ಟಣಕ್ಕೆ ನೀರು ನುಗ್ಗಿತ್ತು. ಶಿವಗಂಗಾ ಚಿತ್ರ ಮಂದಿರದ ಸುತ್ತಮುತ್ತಲಿನ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ, ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಎದುರಾಯಿತು.
ಗುಬ್ಬಿ ತಾಲ್ಲೂಕಿನಲ್ಲಿ ಮಳೆಯಿಂದ 8 ಮನೆಗಳಿಗೆ ಹಾನಿಯಾಗಿದೆ. ತುರುವೇಕೆರೆ ತಾಲ್ಲೂಕಿನಲ್ಲಿ ಬೀಸಿದ ಗಾಳಿ, ಮಳೆಗೆ 26 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಮನೆಗಳಿಗೂ ಹಾನಿಯಾಗಿದೆ.
ಬಳ್ಳಾರಿ ವರದಿ: ಬಳ್ಳಾರಿ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆಯಿಂದ ಮನೆ, ಸೇತುವೆಗಳಿಗೆ ಹಾನಿಯಾಗಿದೆ. ರಾತ್ರಿಯಿಡೀ 4.75 ಸೆಂ.ಮೀ ಮಳೆ ಸುರಿದಿದೆ. ಹೊಲ, ಗದ್ದೆ, ಜನವಸತಿ ಪ್ರದೇಶ, ಶಾಲೆಗಳಿಗೆ ನೀರು ನುಗ್ಗಿದೆ.
ರಕ್ಷಣೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹಳ್ಳದಲ್ಲಿ ಬೈಕ್ ಸಹಿತ ಕೊಚ್ಚಿಕೊಂಡು ಹೋಗುತ್ತಿದ್ದ ಅಖಿಲ ಭಾರತ ಕಿಸಾನ್ ಸಭಾದ ಸಂಘಟನೆಯ ನಾಯಕ ಹೊಸಹಳ್ಳಿ ಮಲ್ಲೇಶ್ ಎಂಬುವರನ್ನು ಯುವಕರು ರಕ್ಷಿಸಿದರು. ಬೈಕ್ ಪತ್ತೆಯಾಗಿಲ್ಲ. ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆ ಕೋಡಿ ಬಿದ್ದಿದೆ.
ರಾಯಚೂರು ವರದಿ: ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಗ್ಗೆ ಮಳೆಯಾಗಿದೆ. ರಾಯಚೂರು ತಾಲ್ಲೂಕಿನ ಗಧಾರ ಗ್ರಾಮದಲ್ಲಿ ಮಳೆಗೆ ಹಳ್ಳ ಉಕ್ಕಿ ಹರಿದು ಸೇತುವೆ ಮೇಲೆ ನೀರು ಬಂದಿದೆ. ಹೊಲಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ.
ಕಡೂರು (ಚಿಕ್ಕಮಗಳೂರು): ಸೋಮವಾರ ಸುರಿದ ಭಾರಿ ಮಳೆಗೆ ಚಿಕ್ಕಂಗಳ ಗ್ರಾಮದಲ್ಲಿ ರಾತ್ರಿ ಮನೆಯ ಗೋಡೆ ಕುಸಿದು ಗೋಪಾಲ ಗೌಡ (65) ಎಂಬವರು ಮೃತಪಟ್ಟಿದ್ದಾರೆ. ಅಂಗವಿಕಲರಾಗಿದ್ದ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು.
2ನೇ ಬಾರಿ ಕುಸಿದ ಸೇತುವೆ (ಗೌರಿಬಿದನೂರು ವರದಿ): ಗೌರಿಬಿದನೂರು–ಚಿಕ್ಕಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69ರ ಗಿಡಗಾನಹಳ್ಳಿ ಬಳಿ ನೂತನ ಸೇತುವೆ ನಿರ್ಮಿಸಲು ಹಳೆ ಸೇತುವೆ ತೆರವುಗೊಳಿಸಲಾಗಿತ್ತು. ಸಂಚಾರಕ್ಕೆ ತಾತ್ಕಾಲಿಕವಾಗಿ ಮತ್ತೊಂದು ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು.
ಇದರಿಂದ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಭಾನುವಾರ ತರಾತುರಿಯಲ್ಲಿ ಅದೇ ಸೇತುವೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ, ಸೋಮವಾರ ರಾತ್ರಿ ಮತ್ತೆ ಸುರಿದ ಮಳೆಗೆ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಚಾರ್ಮಾಡಿ ಘಾಟಿಯಲ್ಲಿ ವಿಪರೀತ ಮಳೆ
ಚಿಕ್ಕಮಗಳೂರು: ಜಿಲ್ಲೆಯ ಹಲ ವೆಡೆ ಭಾರಿ ಮಳೆಯಾಗಿದ್ದು, ಚಾರ್ಮಾಡಿ ಘಾಟಿಯಲ್ಲಿ ವಿಪರೀತ ಮಳೆ ಸುರಿದು ಆತಂಕ ಸೃಷ್ಟಿಸಿತು.
ಘಾಟಿ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯಿತು. ಗುಡ್ಡದಿಂದ ಸಣ್ಣ ಬಂಡೆಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಜಾಗರ, ಸಿರವಾಸೆ, ಮುತ್ತೋಡಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಎನ್.ಆರ್.ಪುರ, ಬಾಳೆಹೊನ್ನೂರು ಸುತ್ತಮುತ್ತ ಕೂಡ ಮಳೆ ಸುರಿಯಿತು. ಅಜ್ಜಂಪುರ ತಾಲ್ಲೂಕಿನ ಶಿವನಿ ಸುತ್ತಮುತ್ತ ಕೂಡ ಧಾರಾಕಾರ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.