ಬುಧವಾರ, ಫೆಬ್ರವರಿ 19, 2020
16 °C
ಶಿರಾ ತಾಲ್ಲೂಕು; ಮದಲೂರು ಕೆರೆಗೆ ನೀರು ಹರಿಸುವಂತೆ ರೈತರ ಹಕ್ಕೊತ್ತಾಯ

ಮದಲೂರಿನಿಂದ ದೂರವುಳಿದ ಹೇಮೆ...

ಸೋಮಶೇಖರ ಎಸ್‌ Updated:

ಅಕ್ಷರ ಗಾತ್ರ : | |

ತುಮಕೂರು: ‘ಇಷ್ಟು ದಿನ ನಮ್ಮ ಊರಿನ ಕೆರೆಗೆ ನೀರು ಬಂದೆ ಬರುತ್ತದೆ ಎಂದು ಕಾಯುತ್ತ ಕುಳಿತೆವು. ಆದರೆ ನೀರು ಬರುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜೀವನ ಮಾಡಲು ಇನ್ನು ಬೆಂಗಳೂರೇ ಗತಿ’. ಇದು ಶಿರಾ ತಾಲ್ಲೂಕು ಮದಲೂರು ಸಮೀಪದ ರಂಗನಾಥಪುರ ರೈತ ರವಿ ಅವರ ಬೇಸರದ ನುಡಿ.

ಇದು ರವಿಯೊಬ್ಬರ ಕಥೆ ಮಾತ್ರವಲ್ಲ. ಮದಲೂರು ಸುತ್ತಮುತ್ತಲಿನ ಹಲವು ಗ್ರಾಮಗಳ ಯುವ ರೈತರ ನೋವಿನ ನುಡಿ. ಇಲ್ಲಿನ ಯುವ ಸಮುದಾಯ ವ್ಯವಸಾಯಕ್ಕೆ ನೀರಿಲ್ಲದೆ ಊರು ತೊರೆಯುತ್ತಿದೆ. ಮಳೆ ಆಶ್ರಿತ ಪ್ರದೇಶವಾದ ಶಿರಾ ತಾಲ್ಲೂಕು ಸತತ ಬರಗಾಲದಿಂದ ನಲುಗಿದೆ. ತಾಲ್ಲೂಕಿನ ಉತ್ತರ ಭಾಗದ ಪ್ರಮುಖವಾದ ಕೆರೆ ಮದಲೂರಿಗೆ ಹೇಮಾವತಿ ನೀರು ಬರುತ್ತದೆ ಎನ್ನುವ ಕನಸು ಇನ್ನೂ ನನಸಾಗೆ ಉಳಿದಿದೆ.

ಹೇಮಾವತಿ ನೀರು ಎರಡು ವರ್ಷದ ಹಿಂದೆ ಬಂದಾಗ ಸ್ಥಿತಿ ಸ್ವಲ್ಪ ಸುಧಾರಿಸಿತ್ತು. ಆದರೂ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಂಕಷ್ಟ ಮಾತ್ರ ಬಗೆಹರಿದಿಲ್ಲ. ಕೊಳವೆಬಾವಿಗಳನ್ನು ಜನರು ನಂಬಿಕೊಂಡಿದ್ದು ಅವು ಯಾವ ಕ್ಷಣದಲ್ಲಿ ಬೇಕಾದರೂ ಬತ್ತಬಹುದು. ಒಂದು ಸಾವಿರ ಅಡಿ ಕೊರೆದರೆ ಸಿಗುವ ನೀರು ಒಂದೆರಡು ತಿಂಗಳಲ್ಲೆ ಬತ್ತಿಹೋಗುತ್ತವೆ. ದುಡಿದ ದುಡ್ಡೆಲ್ಲ ಕೊಳವೆ ಕೊರೆಸುವುದಕ್ಕೆ ಖರ್ಚಾಗುತ್ತಿದೆ ಎಂದು ರೈತ ಚಿಕ್ಕೀರಪ್ಪ ಅಳಲು ತೋಡಿಕೊಂಡರು.

ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆಗೆ 14 ವರ್ಷದಿಂದ ಹೇಮಾವತಿ ನೀರು ಹರಿಯುತ್ತಿದೆ. ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಯಲು ₹60 ಕೋಟಿ ವೆಚ್ಚದಲ್ಲಿ 34 ಕಿ.ಮೀ ನಾಲೆಯನ್ನು 2017ರಲ್ಲಿ ನಿರ್ಮಾಣ ಮಾಡಲಾಗಿದೆ.

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಯಬೇಕಾದರೆ ಇವೆರಡರ ನಡುವಿನ ಭೂಪಸಂದ್ರ, ಅಜ್ಜೇನಹಳ್ಳಿ, ಚಿಕ್ಕಗೂಳ, ದೊಡ್ಡಗೂಳ, ನ್ಯಾಯಗೆರೆ, ಮಾಗೋಡು, ಗಿರಿನಾಥನಹಳ್ಳಿ, ಲಿಂಗದಹಳ್ಳಿ, ಕೊಟ್ಟ, ಗೊಲ್ಲಹಳ್ಳಿ, ಮದಲೂರು ಚಿಕ್ಕ ಕೆರೆಗಳಿಗೆ ನೀರು ಹರಿಯಬೇಕು. ಆ ನಂತರ ಮದಲೂರು ದೊಡ್ಡ ಕೆರೆಗೆ ಕೊನೆಯದಾಗಿ ನೀರು ಸೇರುತ್ತದೆ.

‘2017ರಲ್ಲಿ ಅಲ್ಪ ಪ್ರಮಾಣದ ನೀರು ಹರಿಸಿದ್ದು ಬಿಟ್ಟರೆ ಇದುವರೆಗೂ ಈ ನಾಲೆಯಲ್ಲಿ ಒಂದು ತೊಟ್ಟು ನೀರು ಹರಿದಿಲ್ಲ’ ಎಂದು ರೈತ ಹನುಮಂತರಾಯಪ್ಪ ಬೇಸರ ವ್ಯಕ್ತಪಡಿಸಿದರು.

ಕಳೆದ ವಿಧಾನ ಸಭೆ ಚುನಾವಣೆ ವೇಳೆಗೆ ಮೇಲಿನ ಯಾವುದೇ ಕೆರೆಗಳನ್ನು ತುಂಬಿಸದೆ ಜಯಚಂದ್ರ ಅವರು ತಮ್ಮ ಪ್ರಭಾವ ಬಳಸಿ ನೇರವಾಗಿ ಮದಲೂರು ಕೆರೆಗೆ ನೀರು ಹರಿಸಿದ್ದರು. ಆದರೆ ಈಗ ಪರಿಸ್ಥಿತಿಬೇರೆಯೇ ಇದೆ. ಕೆಲಸ ಮಾಡದವರೆ ನಮ್ಮ ಸುತ್ತ ಹೆಚ್ಚಾಗಿದ್ದಾರೆ ಎನ್ನುವುದು ಸ್ಥಳೀಯ ನಾಯಕರ ದೂರು.

ಭದ್ರಾ ಯೋಜನೆಯಿಂದ ತಾಲ್ಲೂಕಿನ 41 ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಯಾಗಿದೆ. ಆದರೆ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಎತ್ತಿನ ಹೊಳೆಯದ್ದು ಇದೆ ಕಥೆ. ಇದೆಲ್ಲದರ ನಡುವೆ ಬಡವಾಗುತ್ತಿರುವುದು ಮಾತ್ರ ತಾಲ್ಲೂಕಿನ ರೈತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು