ಮಂಗಳವಾರ, ಆಗಸ್ಟ್ 16, 2022
21 °C
ಶಿರಾ ಉಪ ಚುನಾವಣೆ ಭರವಸೆ ಈಡೇರಿಸಿದ ಸರ್ಕಾರ; ಕಳ್ಳಂಬೆಳ್ಳ ಕೆರೆಯಿಂದ ಹರಿದ ನೀರು; ಗಂಗಾಪೂಜೆ

ಶಿರಾ ಉಪ ಚುನಾವಣೆ ಭರವಸೆ ಈಡೇರಿಸಿದ ಸರ್ಕಾರ: ಮದಲೂರು ಕೆರೆಗೆ ಹರಿದ ಹೇಮಾವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳದ ಮದಲೂರು ಕೆರೆಗೆ ಸೋಮವಾರ ಹೇಮಾವತಿ ನೀರು ಹರಿಸಲಾಯಿತು. ತಾಲ್ಲೂಕಿನ ಹಲವು ದಿನಗಳ ಬೇಡಿಕೆ ಈಡೇರಿದ ಕ್ಷಣಗಳಿಗೆ ನೂರಾರು ಜನರು ಸಾಕ್ಷಿಯಾದರು.

ಹೇಮಾವತಿ ನೀರು ಹರಿದ ಬಂದ ಐತಿಹಾಸಿಕ ಸಂದರ್ಭವನ್ನು ತಾಲ್ಲೂಕಿನ ಜನರು ಹಬ್ಬದಂತೆ ಸಂಭ್ರಮಿಸಿದರು.

ಶಿರಾ ಉಪಚುನಾವಣೆ ಸಂದರ್ಭದಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಪ್ರಮುಖ ರಾಜಕೀಯ ಅಸ್ತ್ರವಾಗಿತ್ತು. ಬಿಜೆಪಿ ಸೇರಿದಂತೆ ಮೂರು ಪ್ರಮುಖ ಪಕ್ಷಗಳು ಸಹ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿದ್ದವು. 

‘ಚುನಾವಣೆ ಮುಗಿದ ಆರು ತಿಂಗಳಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಚಾರದ ವೇಳೆ ಭರವಸೆ ನೀಡಿದ್ದರು.

ಟಿ.ಬಿ.ಜಯಚಂದ್ರ ಶಾಸಕರಾಗಿದ್ದ ಸಮಯದಲ್ಲಿ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸಲು ₹ 60 ಕೋಟಿ ವೆಚ್ಚದಲ್ಲಿ ನಾಲೆ ನಿರ್ಮಿಸಲಾಗಿತ್ತು. 2017ರಲ್ಲಿ ಪ್ರಯೋಗಿಕವಾಗಿ 13 ದಿನ ನೀರು ಹರಿಸಲಾಗಿತ್ತು. ನಂತರ ನೀರು ಹರಿದಿರಲಿಲ್ಲ.  

ಉಪಚುನಾವಣೆ ಪ್ರಚಾರದ ಸಮಯದಲ್ಲಿ ಮುಖ್ಯಮಂತ್ರಿಯವರು ನೀಡಿದ್ದ ಭರವಸೆಯಂತೆ ಕಳ್ಳಂಬೆಳ್ಳ ಕೆರೆ
ಯಿಂದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುತ್ತಿರುವುದಾಗಿ ಶಾಸಕ ಡಾ‌.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಕೆಂಚಗಾನಹಳ್ಳಿ ಸಮೀಪ ಸೋಮವಾರ ಕಳ್ಳಂಬೆಳ್ಳ ಕೆರೆಯಿಂದ ಕೆರೆಗೆ ಹೇಮಾವತಿ ನೀರುಹರಿಸಿ ಗಂಗಾ
ಪೂಜೆ ನಡೆಸಿ ಅವರು ಮಾತನಾಡಿದರು.

‘ಹಲವಾರು ಮಂದಿಯ ಹೋರಾಟದ ಫಲವಾಗಿ ಇಂದು ಮದಲೂರು ಕೆರೆಗೆ ನೀರು ಹರಿಯುತ್ತಿದೆ. ಪಟ್ಟನಾಯಕನಹಳ್ಳಿಯ ನಂಜಾವದೂತ ಸ್ವಾಮೀಜಿ ಅವರ ಹುಟ್ಟುಹಬ್ಬವನ್ನು ನೀರಾವರಿ ಹಕ್ಕೋತ್ತಾಯ ಸಮಾವೇಶವಾಗಿ ನಡೆಸಲಾಗುತ್ತಿದ್ದು ಅದಕ್ಕೆ ಈಗ ಒಂದು ಆರ್ಥ ಬಂದಿದೆ’ ಎಂದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಮದಲೂರು ಕೆರೆಗೆ ನೀರು ನಿಗದಿ ಮಾಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಇದರ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ಸಹ ತ್ವರಿತವಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ನೀರು ಶಿರಾ ತಾಲ್ಲೂಕಿಗೆ ಹರಿದು ಬರುವುದು’ ಎಂದರು.

ವಿಧಾನ ಪರಿಷತ್ತು ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ‘ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ತುಮಕೂರು - ದಾವಣಗೆರೆ ರೈಲು ಮಾರ್ಗದ ಕಾಮಗಾರಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮ‌ನವಿ ಮಾಡಲಾಗುವುದು’ ಎಂದರು.

ಪಟ್ಟನಾಯಕನಹಳ್ಳಿಯ ನಂಜಾವದೂತ ಸ್ವಾಮೀಜಿ ಮಾತನಾಡಿ, ‘ಮದಲೂರು ಕೆರೆಗೆ ನೀರು ಹರಿಸುವ ಮೂಲಕ ಸರ್ಕಾರ ಈ ಭಾಗದ ಜನರ ನೋವಿಗೆ ಸ್ಬಂದಿಸುವ ಕೆಲಸ ಮಾಡಿದ್ದು, ಭದ್ರಾ ಯೋಜನೆಯ ತುಮಕೂರು ನಾಲೆಯ ಕಾಮಗಾರಿಯನ್ಜು ತಕ್ಷಣ ಕೈಗೆತ್ತಿಕೊಳ್ಳಬೇಕು’ ಎಂದರು.

ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಶೀಲ್ದಾರ್ ಮಮತಾ, ಬಿಜೆಪಿ ಅಧ್ಯಕ್ಷರಾದ ವಿಜಯರಾಜು, ರಂಗಸ್ವಾಮಿ, ಮಾಲಿ ಮರಿಯಪ್ಪ, ಚಂಗಾವರ ಮಾರಣ್ಣ, ಸುಧಾಕರ್ ಗೌಡ, ಮಾಲಿ ಸಿ.ಎಲ್.ಗೌಡ, ಪ್ರಕಾಶ್ ಗೌಡ, ಸಂತೇಪೇಟೆ ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.