7
ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಪಾಲಿಕೆ ಮಹಾಪೌರ ಸುಧೀಶ್ವರ್‌ ಹಾಗೂ ಆಯುಕ್ತ ಮಂಜುನಾಥಸ್ವಾಮಿ ಅವರಿಂದ ಪೂಜೆ

ಬುಗುಡನಹಳ್ಳಿ ಕೆರೆಗೆ ಹರಿದ ಹೇಮೆ

Published:
Updated:
ಬುಧವಾರ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದ ಕಾರಣ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಆಯುಕ್ತ ಮಂಜುನಾಥಸ್ವಾಮಿ ಹಾಗೂ ಪಾಲಿಕೆ ಸದಸ್ಯರು ಪೂಜೆ ಸಲ್ಲಿಸಿದರು

ತುಮಕೂರು: ತುಮಕೂರು ನಗರಕ್ಕೆ ಕುಡಿಯುವ ನೀರು ಪೊರೈಕೆ ಮಾಡುವ ಬುಗುಡನಹಳ್ಳಿಗೆ ಕೆರೆಗೆ ಹೇಮಾವತಿ ನೀರು ಹರಿದಿರುವುದರಿಂದ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಪಾಲಿಕೆ ಮಹಾಪೌರ ಸುಧೀಶ್ವರ್‌ ಹಾಗೂ ಆಯುಕ್ತ ಮಂಜುನಾಥಸ್ವಾಮಿ ಅವರು ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿದರು.

ತುಮಕೂರು ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡುವ ಎಡದಂಡೆ ನಾಲೆಗೆ ಶನಿವಾರದಂದು ಹೇಮಾವತಿ ಜಲಾಶಯದಿಂದ ಹರಿಬಿಡಲಾಗಿದ್ದ ನೀರು ಬುಧವಾರ ಬೆಳಿಗ್ಗೆ 4ರ ಸುಮಾರಿಗೆ ಬುಗುಡನಹಳ್ಳಿಗೆ ತಲುಪಿದೆ. ಇದರ ಸಲುವಾಗಿ ಮೊದಲ ದಿನವೇ ಭೇಟಿ ನೀಡಿ ವೀಕ್ಷಿಸಿದರು.

ಈ ವೇಳೆ ಜ್ಯೋತಿಗಣೇಶ್‌ ಮಾತನಾಡಿ, ಸುಮಾರು 360 ಕ್ಯೂಸೆಕ್ಸ್‌ ನೀರು ಹರಿಯುತ್ತಿದ್ದು, ಹೀಗೆ ಹರಿದರೆ ಇನ್ನೂ 10–12ದಿನಗಳ ಒಳಗಾಗಿ ಬುಗುಡನಹಳ್ಳಿ ಕೆರೆ ತುಂಬಲಿದೆ. ನಂತರ ಹೆಬ್ಬಾಕ ಕೆರೆಗೆ ನೀರು ಹರಿಸಲಾಗುವುದು. ಈ ಎರಡು ಕೆರೆ ತುಂಬಿದರೆ 2019ರ ಮಾರ್ಚ್‌ವರೆಗೆ ನಗರಕ್ಕೆ ಕುಡಿಯುವ ನೀರು ಒದಗಿಸಬಹುದು ಎಂದು ತಿಳಿಸಿದರು.

ಈ ಬಾರಿ ವರುಣನ ಕೃಪೆಯಿಂದ ಹೇಮಾವತಿ ಜಲಾಶಯದಲ್ಲಿ 20 ಟಿಎಂಸಿ ನೀರಿದ್ದು, ಕಳೆದ ಬಾರಿಗಿಂತ ಈ ಬಾರಿ ಬೇಗನೇ ನೀರು ಹರಿಯಲು ಸಾಧ್ಯವಾಯಿತು. ತುಮಕೂರು ನಗರಕ್ಕೆ ಸುಮಾರು 1.35 ಟಿಎಂಸಿ ನೀರು ಬಿಡುವ ವ್ಯವಸ್ಥೆ ಮಾಡಲಾಗಿದೆ. ಇದು ಸಂಪೂರ್ಣವಾಗಿ ಹರಿದು ಬಂದರೆ ಕುಡಿಯವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು.

ಸುಧೀಶ್ವರ್ ಮಾತನಾಡಿ, ನಗರದ 35 ವಾರ್ಡ್‌ಗಳಿಗೆ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇದರಿಂದ ಸಂಪೂರ್ಣವಾಗಿ ನೀರು ಒದಗಿಸಲು ಆಗಿರಲಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಿಂದ ಬುಗುಡನಹಳ್ಳಿ ಕೆರೆಗೆ ಬೇಗನೇ ನೀರು ಹರಿದಿರುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮಂಜುನಾಥ ಸ್ವಾಮಿ ಮಾತನಾಡಿ, ನಗರಕ್ಕೆ ಸುಮಾರು 500–600 ಎಂಸಿಎಫ್‌ಟಿ ರಷ್ಟು ನೀರು ಮಾತ್ರ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ಆದರೆ ಈ ಬಾರಿ ನಗರದ ಸುತ್ತಮುತ್ತಲಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ವ್ಯವಸ್ಥೆ ಮಾಡಿದರೆ ಸಂಪೂರ್ಣ ಕುಡಿಯುವ ಬರ ನೀಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಬಿ.ಎಸ್.ನಾಗಣ್ಣ, ಕರುಣಾರಾಧ್ಯ, ಸೈಯದ್‌ ನಯಾಜ್‌, ಇಂದ್ರಕುಮಾರ್‌, ಉದಯ್, ವಸಂತ್‌ ಇದ್ದರು.

ಹೇಮೆ ನೀರು ಹರಿಯಲು ವಾಸಣ್ಣ ಹಾಗೂ ಡಿಕೆಸಿ ಸಹಕಾರ

ಶಾಸಕ ಜಿ.ಸಿ.ಮಾಧುಸ್ವಾಮಿ ಅವರು ನೇತೃತ್ವದಲ್ಲಿ ಬಿ.ಸಿ.ನಾಗೇಶ್, ಮಸಾಲ ಜಯರಾಂ, ನಾನು ಸೇರಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನಗರಕ್ಕೆ ನೀರು ಒದಗಿಸುವಂತೆ ಮನವಿ ಮಾಡಲಾಗಿತ್ತು. ನಮ್ಮ ತಂಡಕ್ಕೆ ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್ ಸಾಥ್‌ ನೀಡಿದ್ದರಿಂದ ನಮ್ಮ ಮನವಿಗೆ ಸ್ಪಂದಿಸಿ ಶಿವಕುಮಾರ್ ಅಂದೇ ನೀರು ಹರಿಸುವಂತೆ ಸೂಚನೆ ನೀಡಿದರು. ಅದರ ಫಲವಾಗಿ ಇಂದು ಬುಗುಡನಹಳ್ಳಿಗೆ ನೀರ ಹರಿದಿದೆ ಎಂದು ಜ್ಯೋತಿಗಣೇಶ್ ತಿಳಿಸಿದರು.

3ದಿನದೊಳಗಾಗಿ ನಗರಕ್ಕೆ ನೀರು

ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ತಾತ್ಕಲಿಕ ಪರಿಹಾರವಾಗಿ ಟ್ಯಾಂಕರ್‌ನಲ್ಲಿ ನೀರು ಒದಗಿಸಲಾಗಿತ್ತು. ಇದರಿಂದ ನಿರೀಕ್ಷಿತ ನೀರು ಒದಗಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಜುಲೈನಲ್ಲಿಯೇ ಹೇಮಾವತಿ ನೀರು ಹರಿದಿರುವ ಕಾರಣ ಸಮಸ್ಯೆ ಬಗೆ ಹರಿಸಬಹುದು. ಇನ್ನೂ 3 ದಿನಗಳ ಒಳಗಾಗಿ ನಗರಕ್ಕೆ ನೀರು ಒದಗಿಸಲಾಗುವುದು ಎಂದು ಸುಧೀಶ್ವರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !