ಹೆದ್ದಾರಿಗಳಲ್ಲಿ ಅಪಘಾತ ತಡೆಯಲು ಪೆಟ್ರೋಲಿಂಗ್‌ಗೆ ಗೃಹ ಸಚಿವರ ಸೂಚನೆ

7

ಹೆದ್ದಾರಿಗಳಲ್ಲಿ ಅಪಘಾತ ತಡೆಯಲು ಪೆಟ್ರೋಲಿಂಗ್‌ಗೆ ಗೃಹ ಸಚಿವರ ಸೂಚನೆ

Published:
Updated:

ತುಮಕೂರು: ಹೆದ್ದಾರಿಗಳಲ್ಲಿ ಅಪಘಾತ ತಡೆಯಲು ದಿನದ 24 ಗಂಟೆ ಗಸ್ತು ವಾಹನಗಳನ್ನು (ಪೆಟ್ರೋಲಿಂಗ್‌) ಪ್ರತಿ 35 ಕಿ.ಮೀ.ಗೆ ಒಂದರಂತೆ ಒದಗಿಸಲಾಗಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸೂಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಮಹಿಳಾ ಪೊಲೀಸ್ ಕಾನ್‌ ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಎಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತವೆ ಎಂಬ ಸ್ಥಳಗಳನ್ನು ಗುರುತಿಸಲಾಗಿದೆ. ಇಂತಹ ಕಡೆ ಈಗಾಗಲೇ ಪೊಲೀಸ್ ಗಸ್ತು ವಾಹನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಅಪಘಾತಗಳೂ ಹೆಚ್ಚಾಗುತ್ತಿವೆ. ಕುಟುಂಬಕ್ಕೆ ಕುಟುಂಬಗಳೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಅಪಘಾತ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಈಗ ರಸ್ತೆಗಳು ಸಾಕಷ್ಟು ಸುಧಾರಿಸಿವೆ. ಅಲ್ಲದೇ ಹಿಂದೆ ಇದ್ದ ಹಾಗೆ ಕಾರ್ಬರೇಟರ್ ವಾಹನಗಳಿಲ್ಲ. ಈಗೇನಿದ್ದರೂ ಪ್ಯುಯನ್ ಇಂಜೆಕ್ಷನ್ ಸಿಸ್ಟಮ್ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾಕಷ್ಟು ವೇಗವಾಗಿ ಹೋಗುವುದು ಇಂತಹ ಅಪಘಾತಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಔರಾದ್ಕರ್ ವರದಿ ಅನುಷ್ಠಾನ: ಔರಾದ್ಕರ್ ವರದಿ ಪ್ರಕಾರ 12000 ಸಿಬ್ಬಂದಿಗೆ ಬಡ್ತಿ ಕಲ್ಪಿಸಲಾಗಿದೆ. ವೇತನ ಮರುಪರಿಶೀಲನೆಗೆ 6ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. ಆಯೋಗದ ವರದಿ ಬಂದ ಬಳಿಕ ಅನುಷ್ಠಾನ ಮಾಡಲಾಗುವುದು. ವೇತನ ಮರುಪರಿಶೀಲನೆಯಾದರೆ ಕಂದಾಯ ಹಾಗೂ ಇತರೆ ಇಲಾಖೆಗಳ ನೌಕರರಿಗೆ ಸರಿ ಸಮಾನ ವೇತನ ಪೊಲೀಸರಿಗೆ ಸಿಗಲಿದೆ. ಆರೋಗ್ಯ ಸೇವೆ, ಮನೆ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಪ್ರತಿವರ್ಷ 4 ಸಾವಿರ ಸಿಬ್ಬಂದಿ ನಿವೃತ್ತರಾಗುತ್ತಾರೆ. ಈ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಅಲ್ಲದೇ ಹೆಚ್ಚುವರಿಯಾಗಿ ಹುದ್ದೆ ನೇಮಕಾತಿಗೆ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಲೆ ಇದೆ. ರಾಜ್ಯದ 22 ಪೊಲೀಸ್ ತರಬೇತಿ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಗೃಹ ಸಚಿವನಾಗಿದ್ದಾಗ 24 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮದುವೆಯಂತೂ ಆಗಿದೆಯಲ್ಲ: ಚಿಕ್ಕಬಳ್ಳಾಪುರ ಶಾಸಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಒತ್ತಾಯದ ಮದುವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು,‘ಒತ್ತಾಯದ ಮದುವೆಯೊ, ಲವ್ ಮಾಡಿ ಮದುವೆಯಾಗಿದೆಯೊ ಒಟ್ಟಿನಲ್ಲಿ ಮದುವೆಯಂತೂ ಆಗಿದೆಯಲ್ಲ. ಮದುವೆ ಆಗಿರುವುದು ಮುಖ್ಯ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !