ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ದೊಡ್ಡ ಕೆರೆ ಊರಲ್ಲಿ ಹನಿ ನೀರಿಗೂ ಹಾಹಾಕಾರ!

ನಿತ್ಯ ನೀರಿಗೆ ಹೊಡೆದಾಟ, ಎಲ್ಲ ಕಾಲದಲ್ಲೂ ತಪ್ಪದ ಗೋಳು
Last Updated 20 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಶಿರಾ: ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುವ ಇದು ಹೆಸರಿಗೆ ಮಾತ್ರ ನಗರ. ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಕುಡಿಯುವ ನೀರಿಗೆ ಪರದಾಟ. ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಯಾವುದೇ ಆಗಲಿ ನೀರಿನ ಸಮಸ್ಯೆ ತಪ್ಪದು.

‘ನಲ್ಲಿಯಲ್ಲಿ ನೀರು ಬಂತು, ಟ್ಯಾಂಕರ್ ಬಂತು ನೋಡಿ’ ಅಂದ ತಕ್ಷಣ ಗಾಢ ನಿದ್ದೆಯಲ್ಲಿದ್ದವರೂ ಎದ್ದುಬಿದ್ದು ಕೊಡಗಳನ್ನು ಹಿಡಿದು ದೌಡಾಯಿಸುತ್ತಾರೆ. ಒಂದು ಡ್ರಮ್ ನೀರಿಗೆ ದಿನಪೂರ್ತಿ ಹೋರಾಟ, ಕಿತ್ತಾಟ.

ಇದು ಶಿರಾ ನಗರದಲ್ಲಿ ಕಂಡು ಬರುವ ಚಿತ್ರಣ. ನೀರಿನ ಸಮಸ್ಯೆ ಅನುಭವಿಸಿದವರು, ಗೋಳಾಟ ಕಂಡವರು ಅಯ್ಯೊ ಸಾಕಪ್ಪ ಸಾಕು. ಈ ಊರಲ್ಲಿ ಜೀವ್ನಾ ನಡೆಸೋದಾದ್ರು ಹೆಂಗೆ? ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಈ ಊರಲ್ಲಿ ‘ದೊಡ್ಡ ಕೆರೆ’ ಇದೆ. ಆದರೆ, ಈಗ ಇದು ಹೆಸರಿಗೆ ಮಾತ್ರ! ಊರ ಜನರು ದೊಡ್ಡ ಕೆರೆ ಎಂದು ಹೇಳಿಕೊಳ್ಳಬೇಕಷ್ಟೇ. ಈ ದೊಡ್ಡ ಕೆರೆ ಈಗ ಖಾಲಿಯಾಗಿದೆ.

ಪ್ರತಿವರ್ಷ ಹೇಮಾವತಿ ಜಲಾಶಯದಿಂದ ನೀರು ಹರಿದು ದೊಡ್ಡ ಕೆರೆ ಭರ್ತಿಯಾಗುತ್ತಿದ್ದು ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಈ ವರ್ಷ ಇದುವರೆಗೂ ಒಂದೇ ಒಂದು ಹನಿ ಹೇಮಾವತಿ ನೀರು ಕೆರೆಗೆ ಹರಿದಿಲ್ಲ. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರಿಲ್ಲದೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಹೇಮಾವತಿ ನೀರಿನಿಂದ ಕಳ್ಳಂಬೆಳ್ಳ ಕೆರೆ ಭರ್ತಿ ಮಾಡಿ ಅಲ್ಲಿಂದ ಶಿರಾ ಕೆರೆಗೆ ನೀರು ತರುವ ಕೆಲಸವಾಗುತ್ತಿದೆ. ಆದರೆ, ಯಾವಾಗ ನೀರು ಬರುತ್ತದೆ ಎಂಬುದು ಮಾತ್ರ ಗೊತ್ತಿಲ್ಲ.

ಕೆರೆಯಲ್ಲಿ ನೀರಿದ್ದಾಗ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ನಗರಸಭೆ ಗಮನಹರಿಸಿರಲಿಲ್ಲ. ಯಾವುದೇ ಮಾನದಂಡವಿಲ್ಲದೆ ನೀರನ್ನು ವ್ಯರ್ಥವಾಗಿ ಬಳಕೆ ಮಾಡಿತು. ವ್ಯರ್ಥವಾಗಿ ನೀರು ಚರಂಡಿಗಳಿಗೆ ಹರಿದು ಹೋಗುತ್ತಿದ್ದರೂ ನಗರ
ಸಭೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಕೆರೆಯಲ್ಲಿ ನೀರು ಖಾಲಿಯಾದ ನಂತರ ನಗರಸಭೆ ಎಚ್ಚೆತ್ತಿದೆ.

40 ಲೀಟರ್ ಪೂರೈಕೆ: ನಗರಸಭೆಯಲ್ಲಿ ಈಗ ಆಡಳಿತ ಮಂಡಳಿ ಇಲ್ಲ. ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಧಿಕಾರಿಗಳದ್ದೇ ಕಾರುಬಾರು ಎಂದೂ ನಾಗರಿಕರು ಸಿಡಿಮಿಡಿಗೊಳ್ಳುತ್ತಿದ್ದಾರೆ.

ಕಳೆದ 2 ವರ್ಷ ಚುನಾವಣೆಯ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಸ್ವರ್ಧಾಕಾಂಕ್ಷಿಗಳು ಉಚಿತವಾಗಿ ನೀರು ಪೂರೈಕೆ ಮಾಡಿದರು. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ನೀರು ಪೂರೈಕೆ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಸದಸ್ಯರಿಲ್ಲದಿರುವುದರಿಂದ ಯಾರನ್ನು ಕೇಳಬೇಕು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ನಗರಸಭೆ ಅಧಿಕಾರಿಗಳು ಹೇಳುವಂತೆ ಸರ್ಕಾರಿ ನಿಯಮಾವಳಿಗಳ ಪ್ರಕಾರ ಪ್ರತಿ ಮನುಷ್ಯನಿಗೆ ಪ್ರತಿನಿತ್ಯ 135 ಲೀಟರ್ ನೀರಿನ ಅವಶ್ಯಕತೆ ಇದೆ. ಕನಿಷ್ಠ 70 ಲೀಟರ್ ನೀರಾದರು ಬೇಕು. ಆದರೆ ಈಗ ಅಷ್ಟು ಸಹ ನೀಡಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ 65 ಸಾವಿರ ಜನಸಂಖ್ಯೆ ಇದೆ. ಪ್ರತಿಯೊಬ್ಬರಿಗೂ 40 ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.

152 ಕೊಳವೆ ಬಾವಿಗಳ ಮೂಲಕ ನಗರಕ್ಕೆ ಈಗ ನೀರು ಪೂರೈಸಲಾಗುತ್ತಿದೆ. ಶಿರಸ್ತೇದಾರ ಕಟ್ಟೆಯಲ್ಲಿರುವ 8 ಕೊಳವೆಬಾವಿಗಳಿಂದ ಪ್ರವಾಸಿ ಮಂದಿರದ ಬಳಿಯಿರುವ ಟ್ಯಾಂಕರ್‌ಗೆ ನೀರು ಸಂಗ್ರಹಿಸಿ ಕಾಳಿದಾಸನಗರ, ಜ್ಯೋತಿನಗರ ಭಾಗಗಳಿಗೆ ನೀರು ಕೊಡಲಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾದ ಹಿನ್ನೆಲೆಯಲ್ಲಿ ಖಾಸಗಿ ನೀರಿನ ಟ್ಯಾಂಕರ್‌ ಗಳಿಗೆ ಬೇಡಿಕೆ ಬಂದಿದೆ. ಹಣವಂತರು ₹ 400 ನೀಡಿ ನೀಡಿ ಟ್ಯಾಂಕರ್ ನೀರು ಪಡೆಯು
ತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಇಡೀ ನಗರದ ಜನರು ಹಣ ಕೊಟ್ಟು ಟ್ಯಾಂಕರ್ ನೀರು ಪಡೆಯಬೇಕಾದ ದಿನಗಳೂ ದೂರವಿಲ್ಲ.

ನಗರದಲ್ಲಿ ಒಟ್ಟು 13 ಶುದ್ದನೀರಿನ ಘಟಕಗಳಿವೆ. ಅದರಲ್ಲಿ 3 ಘಟಕಗಳಿಗೆ ಬೀಗ ಹಾಕಲಾಗಿದೆ. 6 ಘಟಕಗಳು ನಿರಂತರವಾಗಿ ನೀರು ಪೂರೈಕೆ ಮಾಡುತ್ತವೆ. ಇನ್ನುಳಿದ ಘಟಕಗಳನ್ನು ನೀರಿದ್ದರೆ ಮಾತ್ರ ಪೂರೈಸಲಾಗುತ್ತದೆ. ಇಲ್ಲದೇ ಇದ್ದರೆ ಅವುಗಳು ಬಂದ್!

ಶಾಸಕರಿಗೆ ಅಗ್ನಿ ಪರೀಕ್ಷೆ: ದೊಡ್ಡ ಕೆರೆಯಲ್ಲಿ ನೀರು ಖಾಲಿಯಾಗಿರುವುದು ಒಂದು ರೀತಿಯಲ್ಲಿ ಶಾಸಕ ಬಿ.ಸತ್ಯನಾರಾಯಣ ಅವರಿಗೆ ಅಗ್ನಿ ಪರೀಕ್ಷೆ. ಕಳೆದ ಬಾರಿ ಶಿರಾ ಕೆರೆಗೆ ನೀರು ಬರಲು ತಡವಾಡ ಹಿನ್ನೆಲೆಯಲ್ಲಿ ಧರಣಿ ನಡೆಸಿ ನೀರು ಪಡೆದಿದ್ದರು. ಈಗ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಮುಂದಿನ ಚುನಾವಣೆಯ ಮೇಲೆ ಸಹ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಲೇ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಶಾಸಕರ ಆಪ್ತರೇ ಆತಂಕದ ನುಡಿಗಳನ್ನಾಡುತ್ತಿದ್ದಾರೆ.

ಅಕ್ಟೋಬರ್ 1 ರಿಂದ ನಗರದಲ್ಲಿ 17 ಬಾಡಿಗೆ ಟ್ಯಾಂಕರ್ ಗಳು ಹಾಗೂ ನಗರಸಭೆಯ 3 ಟ್ಯಾಂಕರ್ ಗಳು ಸೇರಿ ಒಟ್ಟು 20 ಟ್ಯಾಂಕರ್ ಗಳ ಮೂಲಕ ನೀರನ್ನು ನಗರಸಭೆ ಪೂರೈಕೆ ಮಾಡುತ್ತಿದೆ. ಮಳೆಗಾಲದಲ್ಲೂ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಇಷ್ಟಾದರೂ ಟ್ಯಾಂಕರ್ ನೀರು ಯಾವುದಕ್ಕೂ ಸಾಲದಾಗಿದೆ.

ಟ್ಯಾಂಕರ್ ಬಂದಾಗ ನೀರು ಹಿಡಿದುಕೊಳ್ಳುವಾಗ ಜನರು ನೀರಿಗಾಗಿ ಜಗಳವಾಡುವಂತಾಗಿದೆ. ಶಕ್ತಿ ಇರುವವರು ನೀರು ಹಿಡಿದು ಕೊಂಡರೆ. ವಯಸ್ಸಾದವರು, ಅಂಗವಿಕಲರು ಮತ್ತು ಅನಾರೋಗ್ಯಕ್ಕೆ ತುತ್ತಾದವರು ಅಸಹಾಯಕರಾಗಿದ್ದಾರೆ.

ಟ್ಯಾಂಕರ್‌ಗೆ ನಲ್ಲಿಗಳೇ ಇಲ್ಲ. ದೊಡ್ಡ ಪೈಪ್‌ಗೇ ಜನರು ಕೊಡಗಳನ್ನು ಹಿಡಿಯಬೇಕು. ಇದರಿಂದ ನೀರು ಹೆಚ್ಚು ವ್ಯರ್ಥವಾಗಿ ಹರಿಯುತ್ತದೆ ಎನ್ನುತ್ತಾರೆ ನಿವಾಸಿಗಳು.

ಪ್ರತಿ ನಿತ್ಯ 120 ಟ್ಯಾಂಕ್ ನೀರು ಪೂರೈಕೆ
ಕೆರೆಯಲ್ಲಿನ ನೀರು ಖಾಲಿಯಾಗಿದೆ. ಕಳ್ಳಂಬೆಳ್ಳ ಕೆರೆಯಿಂದ ಶಿರಾ ಕೆರೆಗೆ ನೀರು ತರುವ ಕೆಲಸವಾಗುತ್ತಿದೆ. ಸೋಮವಾರ ಶಿರಾ ಕೆರೆಗೆ ಬರುವ ನಿರೀಕ್ಷೆಯಿದೆ. ಈಗ 20 ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ 120 ಟ್ಯಾಂಕರ್ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
- ಮಂಜುನಾಥ್ , ಎಂಜಿನಿಯರ್, ಕುಡಿಯುವ ನೀರು ಪೂರೈಕೆ ವಿಭಾಗ, ನಗರಸಭೆ, ಶಿರಾ.

ವಾರಕ್ಕೆ ನೀರು; ತುಂಬಾ ಕಷ್ಟ
ವಾರಕ್ಕೊಮ್ಮೆ ನೀರು ಬಿಡುವುದರಿಂದ ತುಂಬಾ ಕಷ್ಟವಾಗುತ್ತಿದೆ. ಬಡಜನರು ಹಣ ನೀಡಿ ನೀರು ಪಡೆಯಲು ಸಾಧ್ಯವಿಲ್ಲ. ಬಡವರಿಗೆ ಅನುಕೂಲವಾಗುವಂತೆ ನಿತ್ಯ ನೀರು ಪೂರೈಕೆ ಮಾಡಿದರೆ ಒಳಿತು.
–ಮಂಗಳಮ್ಮ, ಅಂಬೇಡ್ಕರ್ ನಗರ

ಕೈ ಮುಗಿತೀನಿ ನೀರು ಕೊಡಿಸ್ರಪ್ಪ
ಅಯ್ಯೊ ನೀರಿನ ಕಷ್ಟ ಕೇಳುವವರಿಲ್ಲ. ವಯಸ್ಸಾದ ನಮ್ಮಂತಹವರು ಟ್ಯಾಂಕರ್‌ನಲ್ಲಿ ನೀರು ಹಿಡಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಕ್ತಿ ಇರುವವರು ಹೊಡೆದಾಡಿಕೊಂಡು ನೀರು ಹಿಡಿದುಕೊಳ್ಳುತ್ತಾರೆ. ಕೈ ಮುಗಿದು ಕೇಳುತ್ತೇನೆ ತಕ್ಷಣ ನೀರು ಪೂರೈಕೆ ಮಾಡಿದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಊರು ಬಿಟ್ಟು ಹೋಗುವ ಪರಿಸ್ಥಿತಿ ಬರುತ್ತದೆ.
–ಗಂಗಮ್ಮ, ಕಾಳಿದಾಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT