ಕಲ್ಪತರು ಕ್ಷೇತ್ರದಲ್ಲಿ ಗೆದ್ದು ಬಿದ್ದು ಹೋದವರೆಷ್ಟು?

ಗುರುವಾರ , ಜೂನ್ 20, 2019
24 °C
ಲೋಕಸಭಾ ಕ್ಷೇತ್ರ ಚುನಾವಣೆ ಫಲಿತಾಂಶಕ್ಕೆ ದಿನಗಣನೆ, ಕ್ಷೇತ್ರದ ಹದಿನಾರು ಚುನಾವಣೆ ಹಿನ್ನೋಟ ಬಗ್ಗೆ ಹೀಗೊಂದು ನೋಟ

ಕಲ್ಪತರು ಕ್ಷೇತ್ರದಲ್ಲಿ ಗೆದ್ದು ಬಿದ್ದು ಹೋದವರೆಷ್ಟು?

Published:
Updated:

ತುಮಕೂರು: ಲೋಕಸಭಾ ಚುನಾವಣೆ ಮತ ಎಣಿಕೆಗೆ ದಿನಗಣನೆ ಶುರುವಾಗಿದ್ದು, ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷದ ಮುಖಂಡರು ಮತ್ತು ಬೆಂಬಲಿಗರಲ್ಲಿ ಫಲಿತಾಂಶ ಕುತೂಹಲ ಹೆಚ್ಚಿಸಿದೆ.

ಮೇ 23ರಂದು ಮತ ಎಣಿಕೆ ನಡೆಯುತ್ತಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ ಬರಲಿರುವ ಫಲಿತಾಂಶದ ಬಗ್ಗೆ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ? ಎಷ್ಟು ಮತಗಳ ಅಂತರದಲ್ಲಿ ಸೋಲುತ್ತಾರೆ?

50 ಸಾವಿರ, 1 ಲಕ್ಷ, ಒಂದುವರೆ ಲಕ್ಷ, 25 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂದು ತಮ್ಮದೇ ಆದ ಲೆಕ್ಕಾಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ.

ಅಷ್ಟೇ ಅಲ್ಲ. ಹಿಂದಿನ ಚುನಾವಣೆಯಲ್ಲಿ ಯಾರ‍್ಯಾರು ಎಷ್ಟು ಮತಗಳಿಂದ ಗೆದ್ದರು, ಯಾರು ಸೋತರು ಎಂಬ ವಿಷಯಗಳನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಡುತ್ತಿದ್ದಾರೆ.

ಅವರು ಅಷ್ಟು ಮತಗಳಿಂದ ಗೆದ್ದಿದ್ದರು, ಇವರು ಇಷ್ಟೇ ಮತಗಳಿಂದ ಸೋತಿದ್ದರು. ಯಾವ ಕಾರಣಕ್ಕೆ ಅವರು ಸೋತರು. ಘಟಾನುಘಟಿಗಳ ಸೋಲಿಗೆ ಏನು ಕಾರಣವಾಯ್ತು ಹೀಗೆ ಹಲವು ಇಂಬುಗಳಲ್ಲಿ ರಾಜಕೀಯ ಆಸಕ್ತರು, ಪಕ್ಷಗಳ ಕಾರ್ಯಕರ್ತರ ನಡುವೆ ಕುತೂಹಲದ ಮಾತುಕತೆಗಳು ನಡೆಯುತ್ತಿವೆ.

ಈ ಎಲ್ಲ ಕುತೂಹಲದ ಬೆಳವಣಿಗೆಗಳ ಹಿನ್ನೆಲೆಯಲ್ಲಿ 1952ರಿಂದ 2018ರವರೆಗೆ ನಡೆದ ಲೋಕಸಭಾ ಚುನಾವಣೆ ಫಲಿತಾಂಶ, ಕುತೂಹಲದ ಅಂಶ ಕುರಿತು ಹೀಗೊಂದಿಷ್ಟು ಮಾಹಿತಿ ಇಂತಿದೆ.

ತುಮಕೂರು ಕ್ಷೇತ್ರದಲ್ಲಿ 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ 3.74 ಲಕ್ಷ, ಮತದಾರರಿದ್ದು, 2,23,505 ಮತದಾರರು ಮತದಾನ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸಿ.ಆರ್. ಬಸಪ್ಪ 68,840 ಮತಗಳಿಂದ ಆಯ್ಕೆಗೊಂಡಿದ್ದರು.

1957ರಲ್ಲಿ ನಡೆದ ಚುನಾವಣೆಯಲ್ಲಿ 3.82 ಲಕ್ಷ ಮತದಾರರಿದ್ದು, 1,94,201 ಮತದಾರರು ಮತದಾನ ಮಾಡಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ವಿ.ಕೃಷ್ಣಪ್ಪ 64,388 ಮತಗಳಿಂದ ಗೆದ್ದಿದ್ದರು.

1962ರಲ್ಲಿ ಈ ಕ್ಷೇತ್ರದಲ್ಲಿ 4.25 ಲಕ್ಷ ಮತದಾರರಿದ್ದು, 2.51 ಲಕ್ಷ ಮತದಾರರು ಮತದಾನ ಮಾಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ವಿ.ಕೃಷ್ಣಪ್ಪ ಮತ್ತೊಮ್ಮೆ ಸ್ಪರ್ಧಿಸಿದರು. ಫಲಿತಾಂಶದಲ್ಲಿ ಹಿಂದಿನ ಚುನಾವಣೆಗಿಂತ ಒಂದಿಷ್ಟು ಮತ ಕಡಿಮೆ ಅಂದರೆ 48,893 ಮತಗಳನ್ನು ಗಳಿಸಿ ಗೆದ್ದಿದ್ದರು.

1967ರಲ್ಲಿ ಈ ಕ್ಷೇತ್ರದಲ್ಲಿ ಸತತ ಮೂರು ಚುನಾವಣೆಗಳಲ್ಲಿ ಗೆದ್ದುಕೊಂಡು ಬಂದಿದ್ದ ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ‘ಪಿ.ಎಸ್.ಪಿ’ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಲಕ್ಕಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ.ಆರ್. ಬಸಪ್ಪ ಅವರಿಗಿಂತ ಕೇವಲ 261 ಮತಗಳನ್ನು ಹೆಚ್ಚು ಗಳಿಸಿ ಗೆಲ್ಲುವ ಮೂಲಕ ಕಾಂಗ್ರೆಸ್ ನ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದರು.

4.46 ಲಕ್ಷ ಮತದಾರರಲ್ಲಿ 2.68 ಲಕ್ಷ ಮತದಾರರು ಮತದಾನ ಮಾಡಿದ್ದರು. ಲಕ್ಕಪ್ಪ ಅವರ 261 ಮತಗಳ ಅಂತರದ ಗೆಲುವು ಕ್ಷೇತ್ರದ ರಾಜಕೀಯ ಚಿತ್ರಣವನ್ನೆ ಬದಲು ಮಾಡಿತು ಎಂದು ಜಿಲ್ಲೆಯ ಹಿರಿಯ ರಾಜಕೀಯ ಮುಖಂಡರು ಹೇಳುತ್ತಾರೆ.

ಇಲ್ಲಿಂದ ಶುರುವಾದ ಲಕ್ಕಪ್ಪ ಅವರ ಗೆಲುವಿನ ಓಟ ಸತತ ನಾಲ್ಕು ಚುನಾವಣೆಗಳಲ್ಲಿ( 1967–1980) ಗೆಲ್ಲುವಂತೆ ಮಾಡಿತು. ಮೊದಲ ಚುನಾವಣೆಯಲ್ಲಿ ಪಿಎಸ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಲಕ್ಕಪ್ಪ ಅವರು ನಂತರ ಮೂರು ಚುನಾವಣೆಗಳಲ್ಲಿ ಕಣಕ್ಕಿಳಿದು ಗೆದ್ದಿದ್ದು ಕಾಂಗ್ರೆಸ್‌ನಿಂದ.

1971ರಲ್ಲಿ ನಡೆದ ಚುನಾವಣೆಯಲ್ಲಿ 4.85 ಲಕ್ಷ ಮತದಾರರಿದ್ದು, 3.23 ಲಕ್ಷ ಮತದಾರರು ಮತ ಚಲಾಯಿಸಿದ್ದರು,1.61 ಲಕ್ಷ ಮತಗಳಿಂದ ಲಕ್ಕಪ್ಪ ಗೆದ್ದಿದ್ದರು. ಅದೇ ರೀತಿ 1977ರಲ್ಲಿ 6.3 ಲಕ್ಷಮತದಾರರಿದ್ದು, 4.11 ಲಕ್ಷ ಮತದಾರರು ಮತ ಹಾಕಿದ್ದರು.

ಈ ಚುನಾವಣೆಯಲ್ಲಿ ಲಕ್ಕಪ್ಪ 66,817 ಮತಗಳ ಅಂತರದಿಂದ ಆಯ್ಕೆಗೊಂಡಿದ್ದರು. 1980ರಲ್ಲಿ 66 ಲಕ್ಷ ಮತದಾರರಿದ್ದು, 4.38 ಲಕ್ಷ ಮತದಾರರು ಮತದಾನ ಮಾಡಿದ್ದರು. 1.17 ಲಕ್ಷ ಮತಗಳಿಂದ ಲಕ್ಕಪ್ಪ ಈ ಚುನಾವಣೆಯಲ್ಲಿ ಗೆದ್ದಿದ್ದರು.

ಅಭ್ಯರ್ಥಿ ಬದಲು ಮಾಡಿದ ಕಾಂಗ್ರೆಸ್  1971,77,80ರಲ್ಲಿ ಹೀಗೆ ಮೂರು ಚುನಾವಣೆಯಲ್ಲಿ ಲಕ್ಷ ಲಕ್ಷ ಮತಗಳ ಅಂತರದಲ್ಲಿ ಸತತವಾಗಿ ಲಕ್ಕಪ್ಪ ಅವರು ಗೆದ್ದಿದ್ದರೂ 1984ರಲ್ಲಿ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಲಿಲ್ಲ!

ಬದಲಾಗಿ ಜಿ.ಎಸ್. ಬಸವರಾಜ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. 7.15 ಲಕ್ಷ ಮತದಾರರಲ್ಲಿ 5.2 ಲಕ್ಷ ಮತದಾರರು ಮತ ಹಾಕಿದ್ದರು. ಈ ಚುನಾವಣೆಯಲ್ಲಿ 30,410 ಮತಗಳ ಅಂತರದಿಂದ ಜಿ.ಎಸ್. ಬಸವರಾಜ್ ಗೆಲುವು ಸಾಧಿಸಿದರು.

1989ರಲ್ಲಿ ನಡೆದ ಚುನಾವಣೆಯಲ್ಲಿ 9.64 ಲಕ್ಷ ಮತದಾರರಿದ್ದು, 6.74 ಲಕ್ಷ ಮತದಾರರು ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜ್ ಅವರು 1.99 ಲಕ್ಷ ಮತಗಳ ಅಂತರದಿಂದ ಗೆದ್ದರು.

ಪರಿವರ್ತನೆಯ ಹಾದಿ ಶುರು

1991ರಿಂದ ಈ ಕ್ಷೇತ್ರದಲ್ಲಿ ಪರಿವರ್ತನೆಯ ಪರ್ವ ಶುರುವಾಯಿತು. 1991ರಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದರೆ, 1996ರಲ್ಲಿ ಜನತಾದಳ(ಜೆ.ಡಿ) ಕಿತ್ತುಕೊಂಡಿತು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 1991ರಲ್ಲಿ ಬಿಜೆಪಿ ಕಿತ್ತುಕೊಂಡಿತು.

ಬಿಜೆಪಿ ಅಭ್ಯರ್ಥಿ 18,817 ಮತಗಳ ಅಂತರದಿಂದ ಆಯ್ಕೆ ಗೆದ್ದರು. 9.75 ಮತದಾರರಲ್ಲಿ 5.89 ಲಕ್ಷ ಮತದಾರರು ಮತ ಹಾಕಿದ್ದರು.

1996ರಲ್ಲಿ  ಜನತಾ ದಳದಿಂದ ಸ್ಪರ್ಧಿಸಿದ್ದ ಸಿ.ಎನ್.ಭಾಸ್ಕರಪ್ಪ ಅವರು 15,712 ಮತಗಳ ಅಂತರದಿಂದ ಗೆದ್ದರು. ಬಿಜೆಪಿಯ ಎಸ್.ಮಲ್ಲಿಕಾರ್ಜುನಯ್ಯ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ಮಂಜುನಾಥ್ ಪರಾಭವಗೊಂಡಿದ್ದರು. 10.49 ಲಕ್ಷ ಮತದಾರರಲ್ಲಿ 6.72 ಲಕ್ಷ ಮತದಾರರು ಈ ಚುನಾವಣೆಯಲ್ಲಿ ಮತ ಹಾಕಿದ್ದರು.

ಎರಡೇ ವರ್ಷಕ್ಕೆ ಅಂದರೆ 1998ರಲ್ಲಿ ಉಪಚುನಾವಣೆ ನಡೆಯಿತು. ಹಿಂದಿನ ಚುನಾವಣೆಯಲ್ಲಿ ಮುಗ್ಗರಿಸಿದ್ದ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿತು. ಬಿಜೆಪಿ ಅಭ್ಯರ್ಥಿ 71 ಸಾವಿರ ಮತಗಳಿಂದ ಗೆದ್ದಿದ್ದರು. 10 ಲಕ್ಷ ಮತದಾರರಲ್ಲಿ 7 ಲಕ್ಷ ಮತದಾರರು ಮತ ಚಲಾಯಿಸಿದ್ದರು.

199ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜ್ 63 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಎಸ್.ಮಲ್ಲಿಕಾರ್ಜುನಯ್ಯ ಪರಾಭವಗೊಂಡಿದ್ದರು. 10 ಲಕ್ಷ ಮತದಾರರಲ್ಲಿ 7.73 ಲಕ್ಷ ಮತದಾರರು ಮತ ಹಾಕಿದ್ದರು.

2004ರಲ್ಲಿ ಮತ್ತೆ ಬಿಜೆಪಿಯ ಎಸ್. ಮಲ್ಲಿಕಾರ್ಜುನಯ್ಯ ಅವರನ್ನು ಮತದಾರರು ಆಯ್ಕೆ ಮಾಡಿದರು. ಕೇವಲ 2,351 ಮತಗಳ ಅಂತರದಿಂದ ಗೆದ್ದಿದ್ದರು. 12 ಲಕ್ಷ ಮತದಾರರಲ್ಲಿ 8.63 ಲಕ್ಷ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !