ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಗರಸಭೆಗೆ ಎಷ್ಟು ಬಾರಿ ಕಂದಾಯ ಕಟ್ಟಬೇಕು?

ತಿಪಟೂರು: ಕಂದಾಯ ಪಾವತಿ ನಮೂದಿಸುವ ಪುಸ್ತಕ ಕಳೆದಿದೆ– ಅಧಿಕಾರಿಗಳ ಅಸಹಾಯಕತೆ
Last Updated 11 ಜುಲೈ 2020, 19:31 IST
ಅಕ್ಷರ ಗಾತ್ರ

ತಿಪಟೂರು: ನಗರಸಭೆ ಕಂದಾಯ ವಿಭಾಗದಲ್ಲಿ ಹಲವು ವರ್ಷಗಳಿಂದ ಸಂದಾಯವಾಗಿರುವ ಕಂದಾಯವನ್ನು ನಿಗದಿತವಾಗಿ ಪುಸ್ತಕದಲ್ಲಿ ನಮೂದಿಸದೆ ಇರುವುದರಿಂದ ಕಳೆದ ಹಲವು ವರ್ಷಗಳ ಕಂದಾಯ ಸಂದಾಯದ ಮಾಹಿತಿಯೇ ಇಲ್ಲದಂತಾಗಿದೆ.

ನಗರದ ಕಂದಾಯ ವಿಭಾಗದಲ್ಲಿ ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಪ್ರತಿವರ್ಷವೂ ಕಂದಾಯ ಸಂದಾಯ ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಂದಾಯ ಪುಸ್ತಕಕ್ಕೆ ನಮೂದಿಸದೆ ಎರಡೆರಡು ಬಾರಿ ಕಂದಾಯ ಕಟ್ಟುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಂದಾಯ ವಸೂಲಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು, ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಕಂದಾಯವನ್ನು ಕೈಬರಹದ ಮೂಲಕ ನಮೂದಿಸಿ ರಸೀದಿ ನೀಡುತ್ತಿದ್ದರು. ಆ ರಸೀದಿಯನ್ನು ಕಂದಾಯ ವಿಭಾಗದ ಪುಸ್ತಕವೊಂದರಲ್ಲಿ ನಮೂದಿಸಲಾಗುತ್ತಿತ್ತು. ಆದರೆ ಅದನ್ನು ಸಮರ್ಪಕವಾಗಿ ನಿರ್ವಹಿಸದೆ ನಗರಸಭೆಗೆ ಕೋಟ್ಯಂತರ ರೂಪಾಯಿಯನ್ನು ಮಧ್ಯವರ್ತಿಗಳು, ಅಧಿಕಾರಿಗಳು ವಂಚಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲಾಗಿತ್ತು. ಆದಾಗ್ಯೂ ಈಗಲೂ ಅದೇ ರೀತಿಯ ಅವ್ಯವಹಾರ ಮುಂದುವರೆದಿದೆ ಎಂದು ಜನರು ದೂರುತ್ತಿದ್ದಾರೆ.

2002ರಿಂದ 2018ರ ವರೆಗೆ ಕಂದಾಯ ಪಾವತಿಯನ್ನು ದಾಖಲಿಸಿದ್ದ ಪುಸ್ತಕ ಕಳೆದು ಹೋಗಿರುವುದಾಗಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣಕ್ಕೆ ಖಾತೆ ನಕಲು ಪಡೆಯಬೇಕಾದರೆ 2002ರ ನಂತರ ಕಂದಾಯ ಪಾವತಿಸಿ ಖಾತಾ ನಕಲು ತೆಗೆದುಕೊಳ್ಳುವಂತೆ ತಿಳಿಸುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದರು.

2018– 19ನೇ ಸಾಲಿನಿಂದ ನಗರಸಭೆ ಕಂದಾಯ ವಿಭಾಗವು ಗಣಕೀಕೃತಗೊಂಡಿದೆ. ಹಿಂದಿನ ವರ್ಷಗಳ ಕಂದಾಯ ಪಾವತಿ ನಮೂದಿಸಿದ್ದರೆ ಮಾತ್ರವೇ ಖಾತಾ ನಕಲು ನೀಡುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಹಿಂದೆ ಕಟ್ಟಿದ ಕಂದಾಯದ ರಸೀದಿಯನ್ನು ಹಿಡಿದು ನಿತ್ಯವೂ ಕಚೇರಿಗೆ ಅಲೆಯುವಂತಾಗಿದೆ ಎನ್ನುವುದು ಸಾರ್ವಜನಿಕರ ದೂರು.

ನಿಲ್ಲದ ಮಧ್ಯವರ್ತಿಗಳ ಹಾವಳಿ: ಮಧ್ಯವರ್ತಿಗಳು ಕಂದಾಯ ಮತ್ತು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳೊಂದಿಗೆ ಬಾಂಧವ್ಯ ಬೆಳೆಸಿಕೊಂಡು ಕಡಿಮೆ ಖರ್ಚಿನಲ್ಲಿ ಆಗುವ ಕೆಲಸಗಳಿಗೆ ಇಲ್ಲದ ದಾಖಲಾತಿಗಳನ್ನು ಕೇಳಿ ಹಲವು ದಿನ ಕಚೇರಿಗೆ ಅಲೆಸುತ್ತಾರೆ. ಮಧ್ಯವರ್ತಿಗಳ ಮೂಲಕ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರು ವ್ಯಾಪಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT