ಹುಳಿಯಾರು: ಗೌರಿ- ಗಣೇಶ ಹಬ್ಬಕ್ಕೆ ಸಾಮಗ್ರಿ ಖರೀದಿಗೆ ಪಟ್ಟಣದಲ್ಲಿ ಭಾನುವಾರ ಜನಸಂದಣಿ ಉಂಟಾಗಿತ್ತು. ಗಣೇಶ ಮೂರ್ತಿ ವ್ಯಾಪಾರವೂ ಜೋರಾಗಿತ್ತು.
ಹಣ್ಣು, ಹೂವು, ಸೌತೆಕಾಯಿ, ಬಾಗಿನದ ಖರೀದಿಯಲ್ಲಿ ಜನರು ತೊಡಗಿದ್ದರು. ಎಲ್ಲೆಡೆ ದ್ವಿಚಕ್ರ ವಾಹನಗಳ ಸಾಲು ಸಾಲು ನಿಂತಿರುವುದು ಕಾಣುತ್ತಿತ್ತು.
ಹೂವು ಹಾಗೂ ಹಣ್ಣಿನ ಬೆಲೆ ತುಸು ಏರಿಕೆಯಾಗಿತ್ತಾದರೂ ಜನ ಖರೀದಿಗೆ ಮುಗಿ ಬಿದ್ದಿದ್ದರು. ಗುರುವಾರ ಸಂತೆ ದಿನವಾಗಿದ್ದು ಭಾನುವಾರವೂ ಸಂತೆಯ ಚಿತ್ರಣ ಕಂಡು ಬಂತು. ಜವಳಿ ಹಾಗೂ ಸಿದ್ಧ ಉಡುಪುಗಳ ಅಂಗಡಿಯಲ್ಲಿಯೂ ಜನರು ತುಂಬಿದ್ದರು.
ಗಣೇಶನ ವಿಗ್ರಹಕ್ಕೆ ಬೇಡಿಕೆ: ಗಣೇಶ ಮೂರ್ತಿಗಳನ್ನು ಪಟ್ಟಣದ ಬಸ್‌ನಿಲ್ದಾಣ, ರಂಗನಾಥ ಸ್ವಾಮಿ ದೇಗುಲದ ಮುಂಭಾಗ, ಎಣ್ಣೆ ಗಾಣದ ಆವರಣ, ತಿಪಟೂರು ರಸ್ತೆಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಚಿಕ್ಕ ಗಣಪತಿಯಿಂದ ಹಿಡಿದು ಮಧ್ಯಮ ಗಾತ್ರ ಹಾಗೂ 5 ಅಡಿ ಎತ್ತರದವರೆಗಿನ ಸುಂದರ ಮೂರ್ತಿ ಮಾರಾಟಕ್ಕೆ ಇದ್ದವು.
ಗಣೇಶ ಪ್ರತಿಷ್ಠಾಪನೆಗೆ ಸರ್ಕಾರದ ಮಾರ್ಗಸೂಚಿಗಳಿದ್ದು ಪೊಲೀಸ್, ಬೆಸ್ಕಾಂ ಸೇರಿದಂತೆ ಇತರ ಇಲಾಖೆಯ ಅನುಮತಿ ಪಡೆಯಬೇಕು ಎಂಬ ನಿಯಮದ ನಡುವೆಯೂ ಗ್ರಾಮಗಳಿಂದ ಯುವಕರ ಗುಂಪು ತಂಡೋಪತಂಡವಾಗಿ ಬಂದು ಮೂರ್ತಿಗಳನ್ನು ಖರೀದಿಸಿದರು.
ಯಾವುದೇ ಸಮಸ್ಯೆ ಇಲ್ಲದೆ ಹೋದರೂ ವ್ಯಾಪಾರ ಸ್ವಲ್ಪ ಕಷ್ಟವಾಗಿದೆ. ಗಣೇಶ ಮೂರ್ತಿಗಳ ತಯಾರಿಕೆ ಕೂಲಿ, ಬಣ್ಣ ಸೇರಿದಂತೆ ಇತರೆ ಖರ್ಚು ಹೆಚ್ಚುತ್ತಿದೆ. ಆದರೆ ಜನರು ಬಹಳ ಕಡಿಮೆ ಬೆಲೆಗೆ ಕೇಳುತ್ತಾರೆ ಎಂದು ಗಣೇಶಮೂರ್ತಿ ವ್ಯಾಪಾರಿ ಸೋರಲಮಾವು ಪ್ರವೀಣ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.