ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ನೀರು ಬರದಿದ್ದರೆ ‘ಸುಪ್ರೀಂ’ ಮೊರೆ: ಸಂಸದ ಜಿ.ಎಸ್.ಬಸವರಾಜು

ಹೇಮಾವತಿ ನಾಲಾ ವೀಕ್ಷಣೆ
Last Updated 29 ಜೂನ್ 2019, 16:39 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲೆಗೆ ನಿಗದಿಪಡಿಸಿದಷ್ಟು ನೀರು ಹೇಮಾವತಿ ಜಲಾಶಯದಿಂದ ದೊರಕದೇ ಇದ್ದರೆ ತಮಿಳು ನಾಡು ಮಾದರಿಯಲ್ಲಿ ನಾವೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿ ನೀರು ಪಡೆಯಬೇಕಾಗುತ್ತದೆ’ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಹೇಮಾವತಿ ನಾಲಾ ವೀಕ್ಷಣೆ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹೇಮಾವತಿ ಜಲಾಶಯದಿಂದ ಜಿಲ್ಲೆಗೆ 24 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ, ನಿಗದಿತ ಪ್ರಮಾಣದ ನೀರು ಈವರೆಗೂ ಹರಿದಿಲ್ಲ. 7 ಟಿಎಂಸಿಗಿಂತಲೂ ಹೆಚ್ಚು ನೀರು ಬಂದಿದ್ದು ವಿರಳ. ನಿಗದಿತ ಪ್ರಮಾಣದ ನೀರು ಪಡೆಯದೇ ಇದ್ದರೇ ಜಿಲ್ಲೆ ಇನ್ನೂ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೀರು ನಿರ್ವಹಣೆಗೆ ಸುಪ್ರೀಂಕೋರ್ಟ್ ಪ್ರಾಧಿಕಾರ ರಚನೆ ಮಾಡಿದೆ. ಪ್ರಾಧಿಕಾರವು ಜಲಾಶಯದಿಂದ ಜಿಲ್ಲೆಗೆ ನಿಗದಿತ ಪ್ರಮಾಣದ ನೀರು ಬಿಡಲೇಬೇಕಾಗುತ್ತದೆ. ಒಂದು ವೇಳೆ ನೀರು ಬಿಡದೇ ಇದ್ದರೆ, ರಾಜಕೀಯ ಹಸ್ತಕ್ಷೇಪ ಆದರೆ ತಮಿಳುನಾಡು ಮಾದರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿ ನೀರು ಬಿಡಿಸಿಕೊಳ್ಳಬೇಕಾಗುತ್ತದೆ. ಸತ್ಯ ಶೋಧನಾ ಸಮಿತಿ ರಚನೆ ಮಾಡಿ ಜಿಲ್ಲೆಗೆ ನ್ಯಾಯ ಕೊಡಿ ಎಂದು ಕೇಳಬೇಕಾಗುತ್ತದೆ’ ಎಂದು ಹೇಳಿದರು.

ಸೆಡ್ಡು ಹೊಡೆಯಲು ಜಟ್ಟಿಗಳಲ್ಲ: ‘ತುಮಕೂರು ಜಿಲ್ಲೆಗೆ ನೀರು ನಿಗದಿತ ಪ್ರಮಾಣದಲ್ಲಿ ಲಭಿಸದೇ ಇರುವುದಕ್ಕೆ ಸಚಿವ ರೇವಣ್ಣ ಅವರೂ ಕಾರಣರು ಎಂದು ಆರೋಪಿಸಿದ ಬಸವರಾಜು, ಹಾಸನ ಜಿಲ್ಲೆಯ ರಾಜಕಾರಣಿಗಳಿಗೆ ಸೆಡ್ಡು ಹೊಡೆಯಲು ನಾವೇನು ಜಟ್ಟಿಗಳಲ್ಲ. ನಮ್ಮ ಪಾಲಿನ ನೀರು ನಮಗೆ ಕೊಡಿ ಎಂದು ಕೇಳುತ್ತೇವೆ. ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

ತುರ್ತು ಕಾಲುವೆ ಸ್ವಚ್ಛಗೊಳ್ಳಲಿ: ಈಗ ಜಲಾಶಯ ಒಣಗಿದೆ. ಮಳೆ ಬಂದು ಜಲಾಶಯದಲ್ಲಿ ನೀರು ಬಂದ ಬಳಿಕ ನಾಲೆಗೆ ನೀರು ಬಿಟ್ಟರೆ ನಾಲೆಯಲ್ಲಿ ನೀರು ಹರಿಯುವುದಿಲ್ಲ. ನಾಲೆಯಲ್ಲ ಮರ, ಗಿಡ ಬೆಳೆದಿವೆ. ಕೆಲ ಕಡೆ ಒಡೆದಿದೆ. ಹೂಳು ತುಂಬಿಕೊಂಡಿದೆ. ಅದೆಲ್ಲವನ್ನೂ ಸ್ವಚ್ಛಗೊಳಿಸಬೇಕು. ಇದು ಒಂದೇ ದಿನದಲ್ಲಿ ಮಾಡುವ ಕೆಲಸವಲ್ಲ. ಹೀಗಾಗಿ, ತುರ್ತಾಗಿ ಕೆಲಸ ಆಗಲೇಬೇಕು. ಅಂದರೆ ಕನಿಷ್ಠ 700 ಕ್ಯುಸೆಕ್ ನೀರು ಜಿಲ್ಲೆಗೆ ಹರಿಯಬಹುದು. ಈ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಸದ್ಯಕ್ಕೆ ನಮ್ಮ ಮುಂದಿರುವ ಸವಾಲು ನಾಲೆಯ ವಿಸ್ತೀರ್ಣವಾಗಬೇಕು. ಈಗಿರುವ ನಾಲೆಗೆ ಲೈನಿಂಗ್ ಆಗಬೇಕು. ಕೇವಲ ಕಾಂಕ್ರಿಟ್ ಲೈನಿಂಗ್ ಆದರೆ ಪ್ರಯೋಜನವಾಗುವುದಿಲ್ಲ. ಕಬ್ಬಿಣ ಹಾಕಿ ಲೈನಿಂಗ್ ಮಾಡಬೇಕು. ಕನಿಷ್ಠ 4 ಇಂಚು ದಪ್ಪ ಕಾಂಕ್ರಿಟ್ ಹಾಕಿ ನಾಲೆ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.

ಲಿಂಕಿಂಗ್ ಕೆನಾಲ್ ಕೈಬಿಡಲಿ: ‘ಹೇಮಾವತಿ ನಾಲೆಯನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾದ ಸರ್ಕಾರವು ಉದ್ದೇಶಿತ ಲಿಂಕಿಂಗ್ ಕೆನಾಲ್ ಯೋಜನೆಯನ್ನು ತಕ್ಷಣವೇ ಕೈ ಬಿಡಬೇಕು’ ಎಂದು ಬಸವರಾಜು ಆಗ್ರಹಿಸಿದರು.

’ಕಳೆದ ಬಾರಿ 6 ಟಿಎಂಸಿ ನೀರು ಸಹ ತುಮಕೂರಿಗೆ ಬಿಟ್ಟಿಲ್ಲ. ನೀರಿಲ್ಲದೆ ಗುಬ್ಬಿ, ತುಮಕೂರು ತಾಲ್ಲೂಕು ಸಂಪೂರ್ಣ ನಾಶವಾಗಿದೆ. ತುರುವೇಕೆರೆ ಭಾಗಶಃ ನಾಶವಾಗಿದೆ. ಅಡಕೆ, ತೆಂಗು ಪೂರ್ತಿ ಒಣಗಿ ಹೋಗಿದೆ’ ಎಂದು ಹೇಳಿದರು.

ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಮಸಾಲಾ ಜಯರಾಮ್, ಬಿಜೆಪಿ ಮುಖಂಡರಾದ ಬೆಟ್ಟಸ್ವಾಮಿ, ದಿಲೀಪ್‌ ಹಾಗೂ ನಾಲೆ ವ್ಯಾಪ್ತಿಯ ಸ್ಥಳೀಯ ಕೆಲ ಪ್ರತಿನಿಧಿಗಳು, ಹೇಮಾವತಿ ನಾಲಾ ವಲಯ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT