ಗುರುವಾರ , ಜೂನ್ 17, 2021
29 °C
ರೈತರಿಗೆ ಸಿಹಿ ನೀಡುವ ಕಲ್ಪವೃಕ್ಷ

ಹುಣಸೆ ಸಸಿಗೆ ಹೆಚ್ಚಿದ ಬೇಡಿಕೆ

ಟಿ.ಪ್ರಸನ್ನಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹುಣಸೆ ಸಸಿಗಳನ್ನು ಬೆಳೆಯುವ ಮೂಲಕ ಅನೇಕ ಕುಟುಂಬಗಳು ಹೊಸ ಉದ್ಯೋಗ ಕಂಡುಕೊಂಡಿದ್ದಾರೆ.

ತಾಲ್ಲೂಕಿನ ಓಬಳಹಳ್ಳಿ, ಹೊಸಹಳ್ಳಿ, ತಿಮ್ಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುಣಸೆ ಸಸಿಗಳನ್ನು ಬೆಳೆಸುವುದನ್ನೇ ಮುಖ್ಯ ಕಾಯಕವನ್ನಾಗಿ ಮಾಡಿಕೊಂಡಿರುವ ಬೆಳೆಗಾರರು, ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.

ತಾಲ್ಲೂಕಿನ ಹುಣಸೆ ಸಸಿಗಳಿಗೆ ಸಾಕಷ್ಟು ಬೇಡಿಕೆಯಿದೆ. ಪ್ರತಿ ವರ್ಷ 3 ಲಕ್ಷಕ್ಕೂ ಹೆಚ್ಚು ಸಸಿಗಳು ಮಾರಾಟವಾಗುತ್ತಿವೆ. ಈ ಸಸಿಗಳನ್ನು ಖರೀದಿಸಲು ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ನೂರಾರು ರೈತರು ಬರುತ್ತಿದ್ದಾರೆ. ತಮ್ಮ ಜಮೀನುಗಳಲ್ಲಿ ಸಸಿಗಳನ್ನು ನಾಟಿ ಮಾಡಿ 5 ವರ್ಷದವರೆಗೆ ಆರೈಕೆ ಮಾಡುತ್ತಾರೆ. ನಂತರ ಅವುಗಳ ಫಸಲು ಪ್ರಾರಂಭವಾಗಿ ಪ್ರತಿ ವರ್ಷವೂ ಹಣ ತಂದು ಕೊಡುತ್ತದೆ. ಆದ್ದರಿಂದ ರೈತರು ಹುಣಸೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಮೊದಲಿಗೆ ಉತ್ತಮ ಜಾತಿಯ ಹುಣಸೆ ಹಣ್ಣು ಯಾವ ಮರದಲ್ಲಿ ಬಿಡುತ್ತವೆ ಎಂಬುದನ್ನು ಖಾತರಿ ಮಾಡಿಕೊಂಡು ಆ ಮರದ ಹುಣಸೆ ಬೀಜವನ್ನು ಬೆಳೆಗಾರರು ಖರೀದಿಸುತ್ತಾರೆ. ಹುಣಸೆ ಬೀಜವನ್ನು ಚೆನ್ನಾಗಿ ಒಣಗಿಸುತ್ತಾರೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹುಣಸೆ ಬೀಜವನ್ನು ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಕೆಂಪುಮಣ್ಣು, ಕೆರೆ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಹುಣಸೆ ಬೀಜವನ್ನು ನಾಟಿ ಮಾಡುತ್ತಾರೆ. ನಾಟಿ ಮಾಡಿದ 15 ದಿನಗಳ ನಂತರ ಮೊಳಕೆಯೊಡೆದು ಬೆಳೆಯಲಾರಂಭಿಸುತ್ತದೆ. ಹೀಗೆ ಆ ಸಸಿಗೆ ಗೊಬ್ಬರ ಹಾಗೂ ನೀರಿನ ಪೋಷಣೆಯಿಂದ ಸತತ 8 ತಿಂಗಳವರೆಗೂ ಆರೈಕೆ ಮಾಡುತ್ತಾರೆ.

ಮಳೆಗಾಲ ಪ್ರಾರಂಭವಾದರೆ ಒಂದು ಹುಣಸೆ ಸಸಿಗೆ ₹90ರಿಂದ ₹130 ರವರೆಗೂ ನೀಡಿ ರೈತರು ಖರೀದಿಸುತ್ತಾರೆ. ಇದರಿಂದ ಹುಣಸೆ ನಾಟಿ ಮಾಡಿದ ರೈತರಿಗೆ ಶ್ರಮಕ್ಕೆ ತಕ್ಕಂತೆ ಲಾಭ ಕೂಡ ದೊರೆಯುತ್ತದೆ.

ಹುಣಸೆ ಕೃಷಿಗೆ ಹೆಚ್ಚು ಹಣ ಖರ್ಚು ಇಲ್ಲದೇ ಲಾಭ ತಂದು ಕೊಡುವ ಉತ್ತಮ ಕೃಷಿಯಾಗಿದೆ. ಹುಣಸೆ ಹಣ್ಣು ಹುಳಿಯಾದರೂ ರೈತರ ಪಾಲಿಗೆ ಈ ಬೆಳೆ ಸಿಹಿ ನೀಡುವ ಕಲ್ಪವೃಕ್ಷವಾಗಿದೆ. ಹಲವಾರು ಮಂದಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತದೆ. ಈ ಹುಣಸೆ ಕೃಷಿಯಿಂದ ನಷ್ಟ ಹೊಂದಿದ ರೈತರು ತೀರ ವಿರಳ. ಆದ್ದರಿಂದ ಈ ಹುಣಸೆ ಕೃಷಿಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.