ಹೆಚ್ಚಿದ ಟಿಕೆಟ್ ಫೈಟ್: ಗುಟ್ಟು ಬಿಟ್ಟುಕೊಡದ ಪಕ್ಷಗಳು

ಸೋಮವಾರ, ಮೇ 27, 2019
33 °C
ತುಮಕೂರು ಮಹಾನಗರ ಪಾಲಿಕೆ 22ನೇ ವಾರ್ಡ್‌ ಉಪಚುನಾವಣೆ

ಹೆಚ್ಚಿದ ಟಿಕೆಟ್ ಫೈಟ್: ಗುಟ್ಟು ಬಿಟ್ಟುಕೊಡದ ಪಕ್ಷಗಳು

Published:
Updated:

ತುಮಕೂರು: ಮಹಾನಗರ ‍ಪಾಲಿಕೆಯ 22ನೇ ವಾರ್ಡಿನ ಜೆಡಿಎಸ್ ಸದಸ್ಯರಾಗಿದ್ದ ರವಿಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಆ ವಾರ್ಡಿಗೆ ಮೇ 29ರಂದು ಉಪಚುನಾವಣೆ ನಡೆಯುತ್ತಿದ್ದು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಪಕ್ಷಗಳಿಂದ ಕಣಕ್ಕಿಳಿಯಲು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಗುರುವಾರ (ಮೇ 16) ಕೊನೆಯ ದಿನವಾಗಿದ್ದು, ಬುಧವಾರ ತಡ ರಾತ್ರಿಯವರೆಗೂ ಆಕಾಂಕ್ಷಿಗಳಿಗೆ ಟಿಕೆಟ್ ಖಾತ್ರಿ ಆಗಿರಲಿಲ್ಲ.

ರವಿಕುಮಾರ್ ಈ ವಾರ್ಡಿನಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿ, ಗೆದ್ದು ಉಪಮೇಯರ್, ಮೇಯರ್ ಆಗಿದ್ದರು. ಹೀಗಾಗಿ, ಜೆಡಿಎಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ವಾರ್ಡ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ರಣ ತಂತ್ರ ರೂಪಿಸಲು ಸಿದ್ಧವಾಗಿದೆ. ಆಕಾಂಕ್ಷಿಗಳಲ್ಲಿ ಯಾರೂ ಅರ್ಹರು, ಯಾರಿಗೆ ಟೆಕೆಟ್ ಕೊಟ್ಟರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಚುನಾವಣೆ ಘೋಷಣೆಯಾದ ದಿನದಿಂದಲೂ ನಡೆದರೂ ನಾಮಪತ್ರ ಸಲ್ಲಿಕೆ ಮುನ್ನಾ ದಿನದವರೆಗೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿರಲಿಲ್ಲ.

ಜೆಡಿಎಸ್‌ನಲ್ಲಿ ಮೂವರು ಟಿಕೆಟ್‌ಗೆ ಭಾರಿ ಪೈಪೋಟಿ ನಡೆಸಿದ್ದಾರೆ. ಮಾಜಿ ಉಪ ಮೇಯರ್ ಹಾಗೂ 7ನೇ ವಾರ್ಡಿನಲ್ಲಿ ಕಳೆದ ಬಾರಿ ಸ್ಪರ್ಧಿಸಿ 92 ಮತಗಳಲ್ಲಿ ಪರಾಭವಗೊಂಡಿದ್ದ ಟಿ.ಆರ್.ನಾಗರಾಜ್, ಉದ್ಯಮಿ ವೈನ್ ಶ್ರೀನಿವಾಸ್, ಜೆಡಿಎಸ್ ಯುವ ಮುಖಂಡ ಬೆಳ್ಳಿ ಲೋಕೇಶ್ ಪೈಪೋಟಿಯಲ್ಲಿರುವ ಪ್ರಮುಖರು. ಸಚಿವ ಎಸ್.ಆರ್.ಶ್ರೀನಿವಾಸ್ ಅವರಿಂದ ಹಿಡಿದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರವರೆಗೂ ಭೇಟಿ ಮಾಡಿ ಟಿಕೆಟ್‌ ಕೇಳಿದ್ದಾರೆ.

ಪಕ್ಷದ ವರಿಷ್ಠರು ಟಿ.ಆರ್.ನಾಗರಾಜ್ ಪರ ಒಲವು ವ್ಯಕ್ತಪಡಿಸಿದ್ದು, ಸಚಿವ ಎಸ್.ಆರ್. ಶ್ರೀನಿವಾಸ್ ಅವರು ಹೊಸ ಮುಖಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೂವರಲ್ಲಿ ಯಾರನ್ನೇ ಕಣಕ್ಕಿಳಿಸಿದರೂ ಗೆದ್ದು ಬರಲೇಬೇಕು. ವಾರ್ಡ್ ತನ್ನ ಹಿಡಿತದಲ್ಲೇ ಜೆಡಿಎಸ್ ಇರಿಸಿಕೊಳ್ಳಲು ಪಕ್ಷದ ಮುಖಂಡರು ಅಭ್ಯರ್ಥಿ ಘೋಷಣೆ ಮಾಡುವಲ್ಲಿ ವಿಳಂಬವಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತವೇ ಇದ್ದು, ಸಚಿವ ಎಸ್.ಆರ್.ಶ್ರೀನಿವಾಸ್ ಪಾಲಿಕೆ ಆಡಳಿತದಲ್ಲಿ ಹಿಡಿತ ಹೊಂದಿರುವುದರಿಂದ ಅವರು ಗುರುತಿಸುವ ವ್ಯಕ್ತಿಯೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಪ್ರಾಬಲ್ಯ ಇರುವ ಈ ವಾರ್ಡಿನಲ್ಲಿ ಬಿಜೆಪಿ ತನ್ನ ಬಲ ಪ್ರದರ್ಶಿಸಿ ಗೆಲುವು ಸಾಧಿಸಲು ತಂತ್ರ ರೂಪಿಸುತ್ತಿದೆ. ಕಳೆದ ಬಾರಿ ಎಚ್.ರವಿಕುಮಾರ್ ವಿರುದ್ಧ ಸ್ಪರ್ಧಿಸಿ 700 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಸಂದೀಪ್‌ಗೌಡ ಅವರನ್ನೇ ಬಿಜೆಪಿ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತವಿದ್ದಾಗ್ಯೂ ಸಹ ಎರಡೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ. ಜೆಡಿಎಸ್‌ನಲ್ಲಿ ಮೂವರು ಪ್ರಬಲ ಆಕಾಂಕ್ಷಿಗಳಿದ್ದರೆ ಕಾಂಗ್ರೆಸ್‌ನಲ್ಲಿ 6 ಆಕಾಂಕ್ಷಿಗಳು ಇದ್ದಾರೆ! ಇವರನ್ನು ಮನವೊಲಿಸುವ ಪ್ರಯತ್ನ ನಾಲ್ಕೈದು ದಿನಗಳಿಂದಲೂ ನಡೆಯುತ್ತಿದೆ. ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಕಾಂಗ್ರೆಸ್ ಪಕ್ಷವೂ ಕೂಡಾ ಅಧಿಕೃತ ಅಭ್ಯರ್ಥಿಯ ಹೆಸರನ್ನು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರವೇ ಪ್ರಕಟಿಸಲಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಪಾಲಿಕೆಯಲ್ಲಿ ಮೈತ್ರಿ ಆಡಳಿತವಿರಬಹುದು. ಆದರೆ, ಚುನಾವಣೆಯಲ್ಲಿ ಸೆಣಸಿ ಗೆದ್ದರೆ ಒಂದು ಸ್ಥಾನ ಲಭಿಸುತ್ತದೆ. ಹೀಗಾಗಿ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದೇವೆ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !