ಬುಧವಾರ, ಅಕ್ಟೋಬರ್ 20, 2021
24 °C
ಕೋವಿಡ್‌ ಮೂರನೇ ಅಲೆಯ ಲಕ್ಷಣವಲ್ಲ, ಆತಂಕ ಪಡುವ ಅಗತ್ಯವಿಲ್ಲ: ವೈದ್ಯರ ಸ್ಪಷ್ಟನೆ

ಮಕ್ಕಳಲ್ಲಿ ಹೆಚ್ಚಿದ ವೈರಾಣು ಜ್ವರ

ಟಿ.ಎಚ್. ಗುರುಚರಣ್ ಸಿಂಗ್ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಮಕ್ಕಳಲ್ಲಿ ವೈರಾಣು ಜ್ವರ ಹೆಚ್ಚುತ್ತಿದ್ದು, ಪೋಷಕರಿಗೆ ಕೋವಿಡ್‌ ಮೂರನೇ ಅಲೆಯ ಆತಂಕ ಎದುರಾಗಿದೆ. ಆದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರವು ಕೋವಿಡ್ ಮೂರನೇ ಅಲೆಯ ಲಕ್ಷಣವಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞರು ಸ್ಪಷ್ಟಪಡಿಸಿದ್ದಾರೆ.

ತಾಲ್ಲೂಕಿನ ಖಾಸಗಿ ಆಸ್ಪತ್ರೆ ಸೇರಿದಂತೆ ಮಕ್ಕಳ ತಜ್ಞರ ಆಸ್ಪತ್ರೆಗಳಿಗೆ ನಿತ್ಯವೂ ನೂರಾರು ಪೋಷಕರು ವೈರಾಣು ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಧಾವಂತದಿಂದ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕೆಲವರು ತುಮಕೂರು, ಚುಂಚನಗಿರಿ ಮತ್ತು ಬೆಂಗಳೂರು ಆಸ್ಪತ್ರೆಗೂ ದಾಖಲಿಸುತ್ತಿದ್ದಾರೆ.

ಪಟ್ಟಣದಲ್ಲಿ ಮಕ್ಕಳ ತಜ್ಞರಾದ ಮಂಜುನಾಥ್, ರಂಗಸ್ವಾಮಿ ಮತ್ತು ತನ್ವೀರ್ ಅವರ ಚಿಕಿತ್ಸಾಲಯಗಳಿಗೆ ನಿತ್ಯವೂ ಕನಿಷ್ಠ 40ರಿಂದ 50 ಮಕ್ಕಳು ಚಿಕಿತ್ಸೆಗಾಗಿ ಪೋಷಕರೊಂದಿಗೆ ಬರುತ್ತಿದ್ದಾರೆ. ಬಹುತೇಕ ಮಕ್ಕಳಿಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ಮೂರು ದಿನ ನೀಡಿ ಗುಣಮುಖ ಪಡಿಸಲಾಗುತ್ತಿದೆ. ತೀವ್ರತೆಯ ಆಧಾರದ ಮೇಲೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನವಜಾತ ಶಿಶುಗಳಿಂದ ಹಿಡಿದು ಐದು ವರ್ಷದ ಮಕ್ಕಳಲಿ ವೈರಾಣು ಜ್ವರ ಕಾಣಿಸಿಕೊಳ್ಳುತ್ತಿದೆ. ಮೊದಲಿಗೆ ಜ್ವರ, ಶೀತ, ನೆಗಡಿ ಮತ್ತು ಕೆಮ್ಮಿನಿಂದ ಪ್ರಾರಂಭವಾಗುವ ವೈರಾಣು ಜ್ವರ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ನ್ಯುಮೋನಿಯಾಗೆ ಪರಿವರ್ತನೆಯಾಗುತ್ತಿದೆ. ಮಕ್ಕಳಲ್ಲಿ ಉಸಿರಾಟದ ತೊಂದರೆ, ರಕ್ತದಲ್ಲಿ ಆಮ್ಲಜನಕದ ಕೊರತೆ ಕಂಡು ಬಂದು ಚಿಂತಾಜನಕ ಸ್ಥಿತಿ ತಲುಪಿ ಪ್ರಾಣಕ್ಕೆ ಅಪಾಯವಾಗುವ ಸಂದರ್ಭಗಳು ಬರಬಹುದು. ಆದ್ದರಿಂದ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

‘ತಾಲ್ಲೂಕಿನ ಅಮೃತೂರು ಮತ್ತು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿದ್ದರೂ, 24 ಗಂಟೆ ಲಭ್ಯ
ವಿರದ ಕಾರಣ ಖಾಸಗಿ ವೈದ್ಯರ ಮೊರೆ ಹೋಗುವುದು ಅನಿವಾರ್ಯವಾಗಿದೆ. ಸರ್ಕಾರಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸುವಲ್ಲಿ ವೈದ್ಯರು ವಿಫಲರಾಗುತ್ತಿದ್ದಾರೆ. ಕೋವಿಡ್‌ ಮೂರನೇ ಅಲೆಯ ಆತಂಕ ಇರುವುದರಿಂದ ವೈರಾಣು ಜ್ವರ ಬಂದ ತಕ್ಷಣ ಕೊವೀಡ್ ಪರೀಕ್ಷೆಗೊಳಪಡಿಸಲಾಗುತ್ತದೆ. ಹಾಗಾಗಿ ಖಾಸಗಿ ಮಕ್ಕಳ ತಜ್ಞರಲ್ಲಿ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ’ ಎಂದು ಪೋಷಕರಾದ ಇಂದ್ರಕುಮಾರ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು