4
ಹಳದಿ ಬಣ್ಣಕ್ಕೆ ತಿರುಗಿದೆ ಎಲೆಗಳು; ಆತಂಕದಲ್ಲಿ ರೈತ

ಹೆಸರು, ಅಲಸಂದೆಗೆ ಕೀಟ ಬಾಧೆ

Published:
Updated:
ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಗದ್ದೆಬಯಲಿನಲ್ಲಿ ಹೆಸರಿನ ಗಿಡಕ್ಕೆ ಹಳದಿ ಬಣ್ಣದ ವೈರಸ್ ರೋಗ ತಗಲಿರುವುದು

ತುರುವೇಕೆರೆ: ತಾಲ್ಲೂಕಿನ ಕೆಲ ಭಾಗದಲ್ಲಿ ಹೆಸರು ಗಿಡಕ್ಕೆ ಹಳದಿ ಬಣ್ಣದ ನಂಜುರೋಗ ಹಾಗೂ ಅಲಸಂದೆ ಬೆಳೆಗೆ ಎಲೆ ತಿನ್ನುವ ಹುಳು ಕಾಣಿಸಿಕೊಂಡು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಈ ಬಾರಿ ಮುಂಗಾರು ಮಳೆ ಚುರುಕಾಗಿದ್ದರಿಂದ ಮುಂಗಾರು ಬೆಳೆಗಳಾದ ಹೆಸರು ಮತ್ತು ಅಲಸಂದೆ ಬೆಳೆಗಳು ಸಮೃದ್ಧಿಯಾಗಿ ಬೆಳೆದು ಉತ್ತಮ ಫಸಲು ಬರುವ ನಿರೀಕ್ಷೆಯಿತ್ತು. ಆದರೆ, ಕೆಲವೆಡೆ ಹೆಸರು ಗಿಡಕ್ಕೆ ಹಳದಿ ಬಣ‍್ಣದ ವೈರಸ್‌ ರೋಗ ತಗುಲಿ ಎಲೆಗಳೆಲ್ಲಾ ಹಳದಿ ಬಣ‍್ಣಕ್ಕೆ ತಿರುಗಿವೆ. ಹೂವು ಮತ್ತು ಈಚು ಕಟ್ಟುವ ಸಮಯಕ್ಕೆ ಸರಿಯಾಗಿ ಹೆಸರು ಗಿಡಕ್ಕೆ ಹಳದಿ ಬಣ‍್ಣದ ರೋಗ ಬಾಧಿಸುತ್ತಿದೆ. ಇದರಿಂದ ಸರಿಯಾಗಿ ಕಾಳು ಕಟ್ಟದೆ ಇಳುವರಿ ಕ್ಷೀಣಿಸುತ್ತದೆ.

ರಸ ಹೀರುವ ಕೀಟಗಳ ಬಾಧೆ:

ಮತ್ತೊಂದೆಡೆ ಅಲಸಂದೆ ಬೆಳೆ ಸೊಂಪಾಗಿ ಬೆಳೆದು ಹೂವು ಮತ್ತು ಜೊಟ್ಟುಗಳನ್ನು ಬಿಟ್ಟಿದೆ. ಆದರೆ, ಕೆಲವೆಡೆ ಅಲಸಂದೆಗೆ ರಸ ಹೀರುವ ಕೀಟಗಳ ಬಾಧೆಯಿಂದ ಬೆಳೆ ನಾಶವಾಗುತ್ತಿದೆ. ಇನ್ನೂ ಕೆಲವು ಭಾಗದಲ್ಲಿ ರೋಗ ಬಾಧಿತ ಅಲಸಂದೆ ಗಿಡದ ಎಲೆಗಳ ಅಡಿಯಲ್ಲಿ ಎಲೆಕೊರೆಯುವ ಹುಳುಗಳು ಗೂಡು ಕಟ್ಟಿ ಎಲೆಯನ್ನು ಸಂಪೂರ್ಣ ತಿಂದು ಗಿಡವನ್ನು ಬರಿದುಮಾಡಿವೆ. 

ಈ ರೋಗ ಹೆಚ್ಚಾಗಿ ಮಾಯಸಂದ್ರ ಹೋಬಳಿಯ ಕೆಲವು ಭಾಗದಲ್ಲಿ, ಭೈತರ ಹೊಸಹಳ್ಳಿ, ಕೊಂಡಜ್ಜಿ, ಗೊಪ್ಪನಹಳ್ಳಿ, ತೋವಿನಕೆರೆ, ಪುರ, ಮುನಿಯೂರು, ತಾವರೆಕೆರೆ, ವಿಶ‍್ವನಾಥಪುರ, ದೊಂಬರನಹಳ್ಳಿ ಸೇರಿದಂತೆ ತಾಲ್ಲೂಕಿನ ಕೆಲಭಾಗಗಳಲ್ಲಿ ಕಾಣಿಸಿಕೊಂಡಿದೆ.

ಕೀಟ ಬಾಧೆ ತಡೆಯಲು ಹೀಗೆ ಮಾಡಿ

ಅಲಸಂದೆ ಬೆಳೆಗೆ ರಸ ಹೀರುವ ಕೀಟಬಾಧೆ ತಡೆಯಲು ರೈತರು 2 ಮಿಲಿ ಲೀಟರ್ ಫ್ಲೋರೋಫೈರಿಪಾಸ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಾಗೆಯೇ ಹೆಸರು ಗಿಡದ ಹಳದಿ ನಂಜು ರೋಗಕ್ಕೆ 1.7 ಮಿ.ಲೀ. ಡೈಮಿಮಿಥಿಯೆಟ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಮತ್ತು ರೋಗ ಬಾಧಿತ ಗಿಡಗಳನ್ನು ಬುಡಸೇತ ಕಿತ್ತು ನಾಶಮಾಡಿದರೆ ರೋಗ ತಹಬದಿಗೆ ತರಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹೆಚ್ಚು ಮಳೆ ಬೀಳುವುದರಿಂದ ಮತ್ತು ಮೋಡ ಕಟ್ಟಿದ ವಾತಾವರಣ ಇರುವುದರಿಂದ ಸಾಮಾನ್ಯವಾಗಿ ಹೆಸರಿಗೆ ಹಳದಿ ಬಣ್ಣದ ರೋಗ ಮತ್ತು ಎಲೆ ಕೊರೆಯುವ ರೋಗ ಬರುತ್ತದೆ
- ಎ.ಆರ್.ಗಿರೀಶ್, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

ಇರುವ ಅಲ್ಪ ಸ್ವಲ್ಪ ಜಮೀನಿನಲ್ಲೇ ಸಾಲಸೋಲ ಮಾಡಿ ಬೆಳೆದ ಬೆಳೆ ಈ ರೀತಿ ಕೈಕೊಟ್ಟರೆ ರೈತರ ಗತಿಯೇನು
- ಎ.ಆರ್.ರಾಜಶೇಖರ್, ರೈತ, ಅಮ್ಮಸಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !