ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೂವರೆ ವರ್ಷದ ಬಾಕಿ ವೇತನಕ್ಕೆ ಒತ್ತಾಯ

ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನಾ ರ್‍ಯಾಲಿ, ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಧರಣಿ
Last Updated 19 ಜೂನ್ 2019, 16:32 IST
ಅಕ್ಷರ ಗಾತ್ರ

ತುಮಕೂರು: 2018ರ ಮಾರ್ಚ್‌ ತಿಂಗಳಿಂದ ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಪೂರ್ಣವಾಗಿ ಪಾವತಿಸಬೇಕು, ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹತ್ತು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಬುಧವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾ ಪಂಚಾಯಿತಿಯವರೆಗೆ ರ್‍ಯಾಲಿ ನಡೆಸಿದರು.ಬಳಿಕ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಧರಣಿ ನಡೆಸಿದ ನಂತರ ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಿದರು.

ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆಗೆ (ಇಎಫ್‌ಎಂಎಸ್) ಸೇರ್ಪಡೆಗೊಳ್ಳದ ಸಿಬ್ಬಂದಿಯನ್ನು ಕೂಡಲೇ ಈ ವ್ಯವಸ್ಥೆಗೆ ಅಳವಡಿಸಬೇಕು, ಕೈ ಬಿಟ್ಟು ಹೋದ ನೌಕರರ ವಿವರಗಳನ್ನು ಈಗಾಗಲೇ ಗ್ರಾಮ ಪಂಚಾಯಿತಿ ಲಾಗಿನ್‌ನಲ್ಲಿ ಅಳವಡಿಸಿದ್ದು, ಉಪಕಾರ್ಯದರ್ಶಿ ಮಾತ್ರ ಲಾಗಿನ್ ಮಾಡಬೇಕಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಂಚಾಯಿತಿ ಎಲ್ಲ ನೌಕರರಿಗೂ ಭವಿಷ್ಯ ನಿಧಿ, ಆರೋಗ್ಯ ವಿಮೆ, ನಿವೃತ್ತಿ ವೇತನ, ಜನಶ್ರೀ ವಿಮಾ ಯೋಜನೆ, ರಜೆ ಸೌಲಭ್ಯ, ಸೇವಾ ನಿಯಮಾವಳಿ, ಸೇವಾ ಪುಸ್ತಕ ಮುಂತಾದ ಸೌಲಭ್ಯಗಳನ್ನು ಜಾರಿ ಮಾಡಬೇಕು. ನಿವೃತ್ತಿ ವೇತನ ಹಾಗೂ ಉಪಧನ ನೀಡದೇ ಇರುವ ಗ್ರಾಮ ಪಂಚಾಯಿತಿಗಳಿಗೆ ಅವುಗಳನ್ನು ನೀಡಲು ಆದೇಶ ಮಾಡಬೇಕು, ಪಂಚಾಯಿತಿ ಸಿಬ್ಬಂದಿಗೆ ಕಡ್ಡಾಯವಾಗಿ ಸಮವಸ್ತ್ರ ವಿತರಣೆ ಮಾಡಬೇಕು, ಬಿಲ್ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ಜೇಷ್ಠತಾಪಟ್ಟಿ ತಯಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

2019ರ ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಾರ ಪಿ.ಡಿ.ಓ ಬಡ್ತಿ ಗ್ರೇಡ್ 1 ಗೆ ಬಡ್ತಿ ನೀಡಿ ಖಾಲಿಯಾದ ಗ್ರೇಡ್‌ 2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಿಲ್‌ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಖಾಲಿಯಾದ ಬಿಲ್‌ ಕಲೆಕ್ಟರ್ ಹುದ್ದೆಗೆ ಸರ್ಕಾರದ ಆದೇಶದ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಸಿಬ್ಬಂದಿಯಲ್ಲಿ ಐದು ವರ್ಷ ಸೇವೆ ಸಲ್ಲಿಸಿರುವ ಎಸ್ಸೆಸ್ಸೆಲ್ಸಿ ಪಾಸಾದ ನೌಕರರಿಗೆ ಪದೋನ್ನತಿ ನೀಡಲು ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್ ಮಾತನಾಡಿದರು.

ಜಿಲ್ಲಾ ಘಟಕದ ಖಜಾಂಚಿ ರಂಗನಾಥ್ ಹಾಗೂ ಸಂಘಟನೆಯ ಮುಖಂಡರಾದ ನಾಗಭೂಷಣ್, ಶಂಕರಪ್ಪ, ಲೋಕೇಶ್, ರಾಜು, ರವಿ, ಬಷೀರ್ ಅಹಮ್ಮದ್, ಎಸ್.ಎಸ್.ಪಂಚಾಕ್ಷರಯ್ಯ, ಚಂದ್ರಯ್ಯ, ಶ್ರೀನಿವಾಸ್, ಪ್ರಕಾಶ್, ಎಚ್. ಗಂಗಣ್ಣ, ಮೋಹನ್‌ಕುಮಾರ್, ದಯಾನಂದ್, ರಮೇಶ್, ಲಕ್ಷ್ಮೀಪತಿ, ಸಿದ್ದೇಶ್ವರಪ್ಪ, ಸುಬ್ಬರಾಯಪ್ಪ, ಸುಬ್ರಮಣ್ಯ, ಮುದ್ದುರಾಜು, ಬಾಲರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT