ಸ್ಫೂರ್ತಿಯಿಂದ ಕೆಲಸ ಮಾಡಲು ಸೂಚನೆ

ಶುಕ್ರವಾರ, ಜೂಲೈ 19, 2019
23 °C
ಜಿಲ್ಲಾ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ.ಶಾಲಿನಿ ರಜನೀಶ್ ಬೇಸರ

ಸ್ಫೂರ್ತಿಯಿಂದ ಕೆಲಸ ಮಾಡಲು ಸೂಚನೆ

Published:
Updated:
Prajavani

ತುಮಕೂರು: 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಅನುಷ್ಠಾನ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಯೋಜನೆಯಡಿ ನಾವು ಹೆಚ್ಚು ಹೆಚ್ಚು ಅನುದಾನ ಕೇಳುವಂತಾಗಬೇಕು. ಈ ಕುರಿತು ಅಧಿಕಾರಿಗಳು ಹೆಚ್ಚು ಗಮನಹರಿಸಿ ತಂಡ ಸ್ಫೂರ್ತಿಯಿಂದ ಕೆಲಸ ಮಾಡಿ’ ಎಂದು ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಯೋಜನಾ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ‘ನರೇಗಾ’ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೃಷಿ ಇಲಾಖೆಯು ಮುಂಗಾರು ಮಳೆಗಾಲಕ್ಕೂ ಮುನ್ನವೇ ಕೃಷಿ ಹೊಂಡ ನಿರ್ಮಾಣಕ್ಕೆ ಒತ್ತು ಕೊಡಬೇಕಿತ್ತು. ಮಳೆ ಬಿದ್ದ ಮೇಲೆ ಕೃಷಿ ಹೊಂಡ ಮಾಡಿದರೆ ಏನು ಪ್ರಯೋಜನೆ? ಫಲಾನುಭವಿ ಆಯ್ಕೆ ಮಾಡಿ, ಪಟ್ಟಿ ತಯಾರಿಸಿ, ಕೃಷಿ ಹೊಂಡ ನಿರ್ಮಾಣವೇ ಆಗಲಿಲ್ಲ ಎಂದರೆ ಏನು ಪ್ರಯೋಜನ? ಕೃಷಿ ಹೊಂಡ ನಿರ್ಮಾಣಕ್ಕೆ 15 ದಿನ ನಿಗದಿಪಡಿಸಲಾಗಿದೆ. ನಿರ್ಮಾಣದಿಂದ ರೈತ, ರೈತನ ಕುಟುಂಬಕ್ಕೂ ಕೆಲಸ ಸಿಗುತ್ತದೆ. ಅನುಷ್ಠಾನಕ್ಕೆ ಯಾಕೆ ಹಿನ್ನಡೆ’ ಎಂದರು.

’ಅರಣ್ಯ ಇಲಾಖೆಯೂ ಯೋಜನೆ ಅನುಷ್ಠಾನ ಸಮರ್ಪಕವಾಗಿ ಮಾಡಿಲ್ಲ. ಅರಣ್ಯದಲ್ಲಿಯೇ ಗಿಡಗಳನ್ನು ನೆಡಲು, ಅರಣ್ಯದ ಪಕ್ಕದಲ್ಲಿರುವ ರೈತರ ಜಮೀನಿಗೆ ಹೋಗಿ ಜಿಂಕೆ ಸೇರಿದಂತೆ ಪ್ರಾಣಿಗಳು ಹೋಗಿ ಬೆಳೆ ಹಾಳು ಮಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೇಲಿ ಹಾಕಿಸುವ ಕಾಮಗಾರಿ, ಪ್ರಾಣಿಗಳಿಗೆ ಅಗತ್ಯವಾದ ಮೇವು ಬೆಳೆಯಲು ಅನುದಾನ ಬಳಕೆ ಮಾಡಬಹುದು. ಏನೂ ಮಾಡಿಲ್ಲ. ಕೂಡಲೇ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದರು.

ತೋಟಗಾರಿಕೆ ಇಲಾಖೆ ಶೇ 11 ಸಾಧನೆ ಸಾಲದು. ಅನುದಾನ ಇದ್ದು, ಫಲಾನುಭವಿ ಆಯ್ಕೆ ಮಾಡಿ ಅನುಷ್ಠಾನ ಮಾಡಲು ಏನು ಸಮಸ್ಯೆ? ಪ್ರಶ್ನಿಸಿದರು.

ರೈತ ಜಾಗೃತಿ ಜಂಟಿ ಕಾರ್ಯಕ್ರಮ ಮಾಡಿ: ‘ನರೇಗಾ ಯೋಜನೆಯಡಿ ಏನೇನು ರೈತರು ತಮ್ಮ ಇಲಾಖೆಯಿಂದ ಪ್ರಯೋಜನೆ ಪಡೆಯಬಹುದು ಎಂಬುದರ ಕುರಿತು ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ, ಪಶು ಪಾಲನಾ ಇಲಾಖೆ ಜಂಟಿಯಾಗಿ ರೈತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಸೂಚಿಸಿದರು.

‘ಸಂಪರ್ಕ ಇಲಾಖೆಗಳು (ಲೈನ್ ಡಿಪಾರ್ಟ್‌ ಮೆಂಟ್‌) ಸಹಕಾರ ನೀಡಬೇಕು. ಈ ರೀತಿ ಮಾಡಿದರೆ ಯಾವ ಇಲಾಖೆಯಿಂದ ಏನು ತಮಗೆ ಉಪಯುಕ್ತವಾಗಲಿದೆ ಎಂಬುದರ ತಿಳಿವಳಿಕೆ ಮೂಡುತ್ತದೆ. ಯೋಜನೆ ಬಗ್ಗೆ ಆಸಕ್ತಿವಹಿಸುತ್ತಾರೆ’ ಎಂದು ಹೇಳಿದರು.

ಸ್ವಸಹಾಯ ಗುಂಪುಗಳಿಗೂ ನರೇಗಾ ಯೋಜನೆ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ನಿಮ್ಮ ಜಿಲ್ಲೆಯಲ್ಲಿ ಒಂದೊಂದು ಸ್ವಸಹಾಯ ಗುಂಪಿನಲ್ಲಿ ₹ 5.9 ಲಕ್ಷ ಹಣ ಇದೆ. ಅವು ಸಶಕ್ತ ಗುಂಪುಗಳಾಗಿವೆ. ಅವರಿಗೆ ಯೋಜನೆ ಬಗ್ಗೆ ತಿಳಿಸಿದರೆ ಮನೆಯಲ್ಲಿ ಪತಿಗೆ, ಸಂಬಂಧಿಕರಿಗೆ, ಪರಿಚಯದವರಿಗೆ ಮಾಹಿತಿ ನೀಡುತ್ತಾರೆ. ಆಸಕ್ತರು ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಜಾಗೃತಿ ಮೂಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

‘ಪಶು ಪಾಲನಾ ಇಲಾಖೆಯು ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಕೆಲ ಕಾಮಗಾರಿಗೆ ಅವಕಾಶವಿದೆ. ಈ ಕುರಿತು ಇಲಾಖೆ ಅಧಿಕಾರಿಗಳು ಫಲಾನುಭವಿ ಆಯ್ಕೆ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕು’ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪ್ರಕಾಶ್ ಅವರಿಗೆ ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿ,‘ ನರೇಗಾ ಯೋಜನೆಯ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಿ ಫಲಾನುಭವಿಗಳ ಆಯ್ಕೆ ಮಾಡುವುದರ ಜೊತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು' ಎಂದು ಹೇಳಿದರು.

‘ಹೆಕ್ಟೇರ್‌ನಲ್ಲಿ ಬಹು ಬೆಳೆ, ಮೇಕೆ, ಹಸು, ಕೋಳಿ ಸಾಕಣೆ ಮಾಡಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ. ಕೃಷಿ ಅಧಿಕಾರಿಗಳು ರೈತರಿಗೆ ಹವಾಮಾನಕ್ಕನುಗುಣವಾಗಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಬಗ್ಗೆ ತಾಂತ್ರಿಕ ಜ್ಞಾನ ಕಲ್ಪಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾಹಿತಿ ನೀಡಿದರು. ಕೃಷಿ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ, ಪಶು ಪಾಲನೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !