ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ: ಪಿಡಿಒಗಳಿಗೆ ಸೂಚನೆ

ಕೋವಿಡ್‌ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದ ಜಿ.ಎಸ್. ಬಸವರಾಜು
Last Updated 1 ಜೂನ್ 2021, 2:44 IST
ಅಕ್ಷರ ಗಾತ್ರ

ಮಧುಗಿರಿ: ‘ಗ್ರಾಮ ಪಂಚಾಯಿತಿ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯಪಡೆ ಸದಸ್ಯರ ಜೊತೆಗೂಡಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಕೋವಿಡ್ ನಿಯಂತ್ರಣ ಮಾಡಬೇಕು’ ಎಂದು ಸಂಸದ ಜಿ.ಎಸ್. ಬಸವರಾಜು ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಎರಡು ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಮಿಡಿಗೇಶಿ ಹಾಗೂ ಕೊಡಿಗೇನಹಳ್ಳಿ ಹೋಬಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸವನ್ನು ಜರೂರಾಗಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿಯೇ ಮಧುಗಿರಿ ತಾಲ್ಲೂಕಿನಲ್ಲಿ ಅತಿಹೆಚ್ಚು ಸೋಂಕಿತರಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆಲಸ ಮಾಡಬೇಕು ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲು ಸ್ಥಳ ಪರಿಶೀಲಿಸಲಾಗಿದ್ದು, ಶೀಘ್ರವೇ ಕಾರ್ಯಾರಂಭಗೊಳ್ಳಲಿದೆ. ಪ್ರತಿ ಬೂತ್ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ಸಭೆ ಮಾಡಬೇಕು. ಸೋಂಕಿತರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಕಾರ್ಯ ಆದಾಗ ಮಾತ್ರ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯ ಎಂದರು.

‘ತಾಲ್ಲೂಕಿನಲ್ಲಿ 23,660 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ಪೈಕಿಯಲ್ಲಿ 5,558 ಪಾಸಿಟಿವ್ ಧೃಡಪಟ್ಟಿದೆ. 36,551 ಮಂದಿಗೆ ಲಸಿಕೆ ನೀಡಲಾಗಿದೆ. 8,810 ಮಂದಿ 2 ನೇ ಡೋಸ್‌ ಪಡೆದಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶಬಾಬು ಸಭೆಗೆ ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ, ತಾಲ್ಲೂಕಿನ ಮಿಡಿಗೇಶಿ ಮತ್ತು ಶ್ರಾವಂಡನಹಳ್ಳಿಯಲ್ಲಿ ಕೊರೊನಾ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ರಾಜೇಂದ್ರ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಡಿವೈಎಸ್‌ಪಿ ಕೆ.ಜಿ. ರಾಮಕೃಷ್ಣ, ತಹಶೀಲ್ದಾರ್ ವೈ. ರವಿ, ತಾ.ಪಂ ಇಒ ದೊಡ್ಡಸಿದ್ದಪ್ಪ, ಡಾ.ರಮೇಶಬಾಬು, ಆಡಳಿತಾಧಿಕಾರಿ ಡಾ.ಗಂಗಾಧರ್, ಮುಖ್ಯಾಧಿಕಾರಿ ಅಮರನಾರಾಯಣ್, ಎಡಿಒ ಮದುಸೂದನ್, ಸಿಡಿಪಿಒ ಅನಿತಾ, ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಯಪ್ಪ, ಗ್ರಾ.ಪಂ ಅಧ್ಯಕ್ಷರಾದ ವೀರಣ್ಣ, ಪಂಚಾಕ್ಷರಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT